ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಹೋಬಳಿ ಕೇಂದ್ರವಾಗಿರುವ ಹರವೆ ಹಾಗೂ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಜೊತೆಗೆ ಮಾದರಿ ಗ್ರಾಪಂ ಮಾಡಲು ಶ್ರಮಿಸೋಣ ಎಂದು ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ತಿಳಿಸಿದರು. ತಾಲೂಕಿನ ಹರವೆಯಲ್ಲಿ ನೂತನ ಗ್ರಾಪಂ ಕಟ್ಟಡ ಉದ್ಘಾಟನೆ ಹಾಗೂ ₹1ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಹರವೆ ಭಾಗ ೨೦೦೮ರಲ್ಲಿ ಗುಂಡ್ಲುಪೇಟೆ ಕ್ಷೇತ್ರದ ವ್ಯಾಪ್ತಿಗೆ ಸೇರ್ಪಡೆಯಾದ ಬಳಿಕ ಬಹಳಷ್ಟು ಯೋಜನೆಗಳನ್ನು ನಮ್ಮ ತಂದೆ ಮಹದೇವಪ್ರಸಾದ್ ಅವರು ಮಾಡಿದ್ದಾರೆ. ಹರವೆ ಹೋಬಳಿ ಕೇಂದ್ರವಾಗಿದ್ದು, ಜನಸಂಖ್ಯೆಯು ಹೆಚ್ಚಾಗಿದೆ. ಈ ಗ್ರಾಮಕ್ಕೆ ೧ಕೋಟಿ ರು. ನೀಡಿದ್ದು, ಇನ್ನು ಹೆಚ್ಚಿನ ಅನುದಾನ ನೀಡಲು ಬದ್ದನಾಗಿದ್ದೇನೆ. ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದ ಜೀರ್ಣೋದ್ದಾರಕ್ಕೆ ೫ ಲಕ್ಷ ರು. ರಕ್ಕಸಮ್ಮ ದೇವಸ್ಥಾನದ ಅಭಿವೃದ್ಧಿಗೆ ೪ ಲಕ್ಷ ರು. ಕಾಳಿಕಾಂಬ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ಸೇರಿದಂತೆ ಸಮುದಾಯ ಭವನಗಳ ನಿರ್ಮಾಣಕ್ಕು ಒತ್ತು ನೀಡಿದ್ದೇವೆ. ರಾಜ್ಯದಲ್ಲಿಯೇ ನಮ್ಮ ಪಕ್ಷದ ಸರ್ಕಾರವಿದ್ದು, ಸಿಎಂ ಸಿದ್ದರಾಮಯ್ಯ ಜಿಲ್ಲೆಯ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅನುದಾನ ತರುವುದಾಗಿ ತಿಳಿಸಿದರು.ಕುವೆಂಪು ಹೇಳಿದಂತೆ ಟೀಕೆ ಮಾಡುವವರು ಮಾಡುತ್ತಾ ಇರಲಿ. ನಮ್ಮ ಕೆಲಸ ನಾವು ಮಾಡೋಣ. ಕೊನೆಗೆ ಉಳಿಯುವುದು ಕೆಲಸ ಮಾತ್ರ ಎಂಬಂತೆ ಕ್ಷೇತ್ರದ ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ. ಅವರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕಾರ್ಯನಿರ್ವಹಿಸುತ್ತೇನೆ. ಈಗಾಗಲೇ ಪಂಚಯಿತಿ ಕಟ್ಟಡ ಉದ್ಘಾಟನೆಯಾಗಿದೆ. ಈ ಹಿಂದಿನ ಶಾಸಕರು ೩ಕೋಟಿ ರು.ಬಿಡುಗಡೆ ಮಾಡಿಸಿದ್ದರು ಅಷ್ಟೇ. ಆದರೆ, ಅನುದಾನ ಬಂದರಲಿಲ್ಲ. ಇದನ್ನು ನಾನು ಸಿಎಂ ಮುಖಾಂತರ ಹಣ ಮಂಜೂರು ಮಾಡಿಸಿದ್ದೇನೆ. ಕಾಮಗಾರಿ ಆರಂಭವಾಗಿದೆ. ಹರವೆ ಗ್ರಾಮದ ಜನರು ಶಾಂತಿ ಹಾಗೂ ಸಮನ್ವತೆಯಿಂದ ಬಾಳ್ವೆ ಮಾಡಲು ಮುಂದಾಗಬೇಕು. ರಾಜಕೀಯ ಬರುತ್ತದೆ ಹೋಗುತ್ತದೆ. ಆದರೆ, ಪ್ರಿತಿ ವಿಶ್ವಾಸದಿಂದ ಅಭಿವೃದ್ಧಿ ಕಡೆಗೆ ಎಲ್ಲರು ಒಗ್ಗಟ್ಟಿನಿಂದ ಸಾಗೋಣ ಎಂದರು. ಕಾರ್ಯಕ್ರಮದಲ್ಲಿ ಹರವೆ ಗ್ರಾಪಂ ಅಧ್ಯಕ್ಷ ಎಚ್.ಎಸ್.ಗಿರೀಶ್, ಉಪಾಧ್ಯಕ್ಷರ ರಾಜಮ್ಮ, ಜಿಪಂ ಮಾಜಿ ಅಧ್ಯಕ್ಷ ನವೀನ್ ಕೆರೆಹಳ್ಳಿ, ಗ್ರಾಪಂ ಸದಸ್ಯರಾದ ಮಹೇಶ್, ಮಂಜುಳಾ, ನಟರಾಜು, ಉಮಾ ಮಹೇಶ್ವರಿ, ಮಂಗಳಮ್ಮ, ಪುಟ್ಟಮ್ಮ, ಮಹದೇವಸ್ವಾಮಿ, ದೇವಮ್ಮಣಿ, ರತ್ನಮ್ಮ, ಲಿಂಗಣ್ಣ, ಮಾದಪ್ಪ, ತಾಪಂ ಇಒ ಪೂರ್ಣಿಮಾ, ಮಾಜಿ ತಾಪಂ ಸದಸ್ಯ ಉದಯಾಕುಮಾರ್, ಗುರುಸಿದ್ದೇಗೌಡ, ಪಿಡಿಒ ಉಮಾದೇವಿ, ಕಾರ್ಯದರ್ಶಿ ಮಹದೇವಯ್ಯ, ಗೂಳಿಪುರ ನಾಗೇಂದ್ರ, ನಾಗೇಶ್, ಅಪ್ತಸಹಾಯಕ ಚಂದ್ರಶೇಖರ್ ಇದ್ದರು.