ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಸಾಧಿಸಬೇಕೆಂಬ ಛಲ, ಪರಿಶ್ರಮ, ಗುರಿ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸುಲಭವಾಗುತ್ತದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಕ್ಕಳಿಗೆ ಕಿವಿಮಾತು ಹೇಳಿದರು.ತಾಲೂಕಿನ ಗೂಳೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಗೂಳೂರು ಹೋಬಳಿ ಮಟ್ಟದ ಪ್ರೇರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳೆಂದರೆ ನಿರ್ಲಕ್ಷ್ಯದಿಂದ ಕಾಣುವ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವ ಮೂಲಕ ಖಾಸಗಿ ಶಾಲಾ ಮಕ್ಕಳಿಗಿಂತ ಸರ್ಕಾರಿ ಶಾಲೆ ಮಕ್ಕಳು ಯಾವುದೇ ರೀತಿಯಲ್ಲಿ ಕಮ್ಮಿ ಇಲ್ಲ ಎನ್ನುವಂತೆ ತೋರಿಸಬೇಕು. ಇದಕ್ಕೆ ನಿಮಗೆ ನಾನು ಸೇರಿದಂತೆ ಶಿಕ್ಷಣ ಇಲಾಖೆ ಬೆಂಬಲಕ್ಕೆ ನಿಲ್ಲುತ್ತದೆ ಎಂದರು.ಪ್ರತಿಯೊಬ್ಬರೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂಬ ಉದ್ದೇಶದಿಂದ ಇಂತಹ ಮಹತ್ವಾಕಾಂಕ್ಷೆಯ ಪ್ರೇರಣಾ ಕಾರ್ಯಕ್ರಮಗಳನ್ನು ಸ್ವಂತ ಖರ್ಚಿನಿಂದ ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಅಗತ್ಯವಾದರೆ ನಿವೃತ್ತ ಶಿಕ್ಷಕರಿಂದ ಪಾಠ ಹೇಳಿಸಿ ಅವರಿಗೆ 3 ತಿಂಗಳ ಸಂಬಳವನ್ನು ನಾನೇ ನೀಡುವುದಾಗಿ ಶಾಸಕ ಎನ್.ಎನ್.ಸುಬ್ಬಾರೆಡ್ಡಿ ಭರವಸೆ ನೀಡಿದರು.
ಕಷ್ಟಪಟ್ಟು ಓದುವ ಬದಲಿಗೆ ಇಷ್ಟಪಟ್ಟು ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ವಿದ್ಯೆಯ ಜೊತೆಗೆ ಭಯ, ಭಕ್ತಿ, ಶಿಸ್ತು, ಸಂಸ್ಕಾರ, ಸಂಸ್ಕೃತಿ, ತಂದೆ- ತಾಯಿ, ಗುರು ಹಿರಿಯರನ್ನು ಗೌರವಿಸುವುದನ್ನು ಬಾಲ್ಯದಿಂದಲೇ ರೂಢಿಸಿಕೊಳ್ಳಬೇಕೆಂದರು.ಒಬ್ಬ ಸಾಮಾನ್ಯ ರೈತನ ಮಗನಾಗಿದ್ದ ನಾನು ಇದೇ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದೇನೆ. ನಾನೇನು ಮೇಧಾವಿ ವಿದ್ಯಾರ್ಥಿಯಾಗಿರಲಿಲ್ಲ, ಸಾಮಾನ್ಯ ವಿದ್ಯಾರ್ಥಿಯಾಗಿದ್ದೆ. ಬಾಲ್ಯದಿಂದಲೇ ಶಿಸ್ತು, ಪರಿಶ್ರಮ, ಸಾಧನೆ ಮಾಡಬೇಕೆಂಬ ಛಲ, ಗುರು ಹಿರಿಯರನ್ನು ಗೌರವಿಸುವ ಮನಸ್ಥಿತಿ ನನ್ನದಾಗಿತ್ತು. ಇದೇ ಸರ್ಕಾರಿ ಶಾಲೆಯಲ್ಲಿ ಓದಿದ ನಾನು ಇಂದು ಸತತ 3 ಸಲ ಎಂ.ಎಲ್.ಎ ಆಗಿದ್ದೇನೆ, ಉದ್ಯಮಿಯಾಗಿದ್ದೇನೆ. ನೀವ್ಯಾಕೆ ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬಾರದು ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ತಹಸೀಲ್ದಾರ್ ಮನೀಷ ಎಸ್. ಪತ್ರಿ, ಬಿಇಒ ವೆಂಕಟೇಶಪ್ಪ ಮಾತನಾಡಿದರು. ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕರು ಮುನಿ ಕೆಂಪೇಗೌಡ, ಶಿಕ್ಷಣ ಅಧಿಕಾರಿ ಸುಕನ್ಯಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರ್. ಹನುಮಂತ ರೆಡ್ಡಿ, ಮಾಜಿ ತಾಪಂ ಅಧ್ಯಕ್ಷ ಎಸ್. ಎಸ್. ರಮೇಶ್ ಬಾಬು, ಶಿಕ್ಷಣ ಸಮನ್ವಯ ಅಧಿಕಾರಿ ಆರ್. ವೆಂಕಟರಮಣಪ್ಪ, ಶಾಲಾ ಮುಖ್ಯೋಪಾಧ್ಯಾಯ ಸಿ.ವೆಂಕಟೇಶ್, ಪೊಲೀಸ್ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ ಸೇರಿದಂತೆ ಮುಖಂಡರು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಇದ್ದರು.