ವಾಸ್ತವಿಕವಾಗಿ ಬದುಕೇ ಒಂದು ಕಲೆಯಾಗಿದ್ದು, ಜೀವನದಲ್ಲಿ ಹಲವಾರು ಹಂತ, ಸಾಹಸ, ಸಮಸ್ಯೆಗಳನ್ನು ಮೆಟ್ಟಿ ನಿಂತು ಬದುಕನ್ನು ಕಟ್ಟಿಕೊಳ್ಳಬೇಕು.

ಗದಗ: ವ್ಯವಹಾರ ಒಂದು ಕಲೆ. ಅದನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಹುಬ್ಬಳ್ಳಿಯ ಚಾರ್ಟರ್ಡ್‌ ಅಕೌಂಟೆಂಟ್ ನಟರಾಜ ಮೂರಶಿಳ್ಳಿ ತಿಳಿಸಿದರು.ಸಮೀಪದ ಬೆಳಧಡಿಯ ವಿಮಲ್ ರೆಸಾರ್ಟ್‌ನಲ್ಲಿ ಮಂಗಳವಾರ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಿಂದ ನಡೆದ ಪರಿಚಯಾತ್ಮಕ ಕಾರ್ಯಾಗಾರ(ಒರಿಯಂಟೇಶನ್ ಪ್ರೋಗ್ರಾಮ್)ಉದ್ಘಾಟಿಸಿ ಮಾತನಾಡಿ, ವಾಸ್ತವಿಕವಾಗಿ ಬದುಕೇ ಒಂದು ಕಲೆಯಾಗಿದ್ದು, ಜೀವನದಲ್ಲಿ ಹಲವಾರು ಹಂತ, ಸಾಹಸ, ಸಮಸ್ಯೆಗಳನ್ನು ಮೆಟ್ಟಿ ನಿಂತು ಬದುಕನ್ನು ಕಟ್ಟಿಕೊಳ್ಳಬೇಕು. ವ್ಯಾಪಾರ- ವಹಿವಾಟು ಒಂದೆಡೆಯಾದರೆ ಕುಟುಂಬ, ಸಮಾಜ ಮತ್ತು ಸಾಮಾಜಿಕ ಸೇವೆ ಹೀಗೆ ಹಲವಾರು ಮಜಲುಗಳನ್ನು ದಾಟಿ ಜೀವನ ನಡೆಸಬೇಕಿದೆ ಎಂದರು.ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯು ತನ್ನೆಲ್ಲ ಸದಸ್ಯರು ನಿತ್ಯ ವ್ಯಾಪಾರ ವಹಿವಾಟುಗಳಿಂದಾಗಿ ಬಿಜಿಯಾಗಿರುತ್ತಾರೆ. ಒತ್ತಡದ ಬದುಕಿನಲ್ಲಿ ವ್ಯವಹಾರ ಹಾಗೂ ಕುಟುಂಬವನ್ನು ಸಮತೋಲನಗೊಳಿಸುವ ಸಾಮರ್ಥ್ಯವನ್ನು ಹೊಂದುವುದು ಅವಶ್ಯ ಹಾಗೂ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ವ್ಯಾಪಾರಸ್ಥರಿಗೆ ಇಂತಹ ಕಾರ್ಯಾಗಾರವನ್ನು ಏರ್ಪಡಿಸಿದ್ದು ಅಭಿನಂದನೀಯ ಎಂದರು.ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಮಾತನಾಡಿ, ವ್ಯಾಪಾರಸ್ಥರು ಅಂಗಡಿ ವ್ಯವಹಾರದಲ್ಲಿಯೇ ತೊಳಲಾಟದಲ್ಲಿರುತ್ತಾರೆ. ಹೀಗೆ ಹೊರಸಂಚಾರ, ಹೊಸ ಪರಿಸರದಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಚರ್ಚೆ ನಡೆಸಿರುವುದು ಎಲ್ಲರಲ್ಲಿ ಒಂದಿಷ್ಟು ಬದಲಾವಣೆ ತರಲೆಂಬ ಸದುದ್ದೇಶದಿಂದ ಕಾರ್ಯಾಗಾರ ರೂಪಿಸಲಾಗಿದೆ. ಇಲ್ಲಿ ಚರ್ಚೆಯಾಗುವ ವಿಚಾರಗಳು ಎಲ್ಲರಿಗೂ ಸದುಪಯೋಗ ಆದಲ್ಲಿ ನಮ್ಮ ಪ್ರಯತ್ನ ಫಲಪ್ರದವಾಗುತ್ತದೆ ಎಂದರು.

ವೇದಿಕೆಯ ಶಿದ್ರಾಮಪ್ಪ ಉಮಚಗಿ, ರಾಘವೇಂದ್ರ ಕಾಲವಾಡ, ಅಶೋಕ ಸಂಕಣ್ಣವರ, ಅರವಿಂದ ಕಾಮತ, ಪ್ರಕಾಶ ಶಹಾ, ಭೂಷಣ ಶಹಾ, ಚಂದ್ರು ಬಾಳಿಹಳ್ಳಿಮಠ, ಮಧುಸೂದನ ಪುಣೇಕರ, ತಾತನಗೌಡ ಪಾಟೀಲ, ಶೇಖಣ್ಣ ಗದ್ದಿಕೇರಿ, ಮೋಹನ ಕೋಟಿ, ಈಶಣ್ಣ ಮುನವಳ್ಳಿ, ಸಂಗಮೇಶ ದುಂದೂರ, ರಾಜು ಕುರಡಗಿ ಸೇರಿದಂತೆ ಇತರರು ಇದ್ದರು. ರಮೇಶ ಶಿಗ್ಲಿ ಪ್ರಾರ್ಥಿಸಿದರು. ಶರಣಬಸಪ್ಪ ಗುಡಿಮನಿ ಸ್ವಾಗತಿಸಿದರು. ಜಯದೇವ ಮೆಣಸಗಿ ಪರಿಚಯಿಸಿದರು. ಚನ್ನವೀರಪ್ಪ ಹುಣಶಿಕಟ್ಟಿ ನಿರೂಪಿಸಿದರು. ಪ್ರಕಾಶ ಉಗಲಾಟದ ವಂದಿಸಿದರು.