ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಯಾವುದೇ ಕ್ಷೇತ್ರದಲ್ಲಿ ಯಶಸ್ಸು ದೊರೆಯಬೇಕಾದರೆ ಕಠಿಣ ಪರಿಶ್ರಮ ಅಗತ್ಯವೆಂದು ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಬಿ.ಕಲ್ಲೇಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಜಿಲ್ಲೆಯ ಕೊರಟಗೆರೆ ತಾಲೂಕು ಬಜ್ಜನಹಳ್ಳಿ ಗ್ರಾಮದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಶುಕ್ರವಾರ ಇಸ್ರೋ, ಕೇಂದ್ರ ಬುಡಕಟ್ಟು ಮಂತ್ರಾಲಯ ಹಾಗೂ ಕರ್ನಾಟಕ ಪರಿಶಿಷ್ಟ ವಸತಿ ಶಾಲಾ ಸಂಸ್ಥೆಗಳ ಸಂಘದ ಸಹಯೋಗದಲ್ಲಿ ವಸತಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ 7 ದಿನಗಳ ಕಾಲದ ಅಂತರಿಕ್ಷ ಶಿಕ್ಷಣದ ಬಗ್ಗೆ ಹಮ್ಮಿಕೊಂಡಿದ್ದ ವಿನೂತನ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೆರಿಟ್ ಆಧಾರದ ಮೇಲೆ ಬಜ್ಜನಹಳ್ಳಿ ವಸತಿ ಶಾಲೆಯ ೩೦ ಹಾಗೂ ಕೋಲಾರ ಜಿಲ್ಲೆಯ ಗಂಗಾನರಪಲ್ಲಿ ವಸತಿ ಶಾಲೆಯ 10 ವಿದ್ಯಾರ್ಥಿಗಳು ಸೇರಿ 40 ವಿದ್ಯಾರ್ಥಿಗಳನ್ನು ಈ ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಇಂತಹ ಅವಕಾಶ ಜೀವನದಲ್ಲಿ ಮತ್ತೊಮ್ಮೆ ದೊರೆಯುವುದಿಲ್ಲ. ಈ ತರಬೇತಿಯ ಸದುಪಯೋಗ ಪಡೆದು ಕಠಿಣ ಅಭ್ಯಾಸ ಮಾಡಿದಲ್ಲಿ ಉಜ್ವಲ ಭವಿಷ್ಯ ನಿಮ್ಮದಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ವಿದ್ಯಾರ್ಥಿಗಳು ಅಂತರಿಕ್ಷದ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಸಾಧಕರ ಯಶಸ್ಸಿನ ಹಾದಿಯನ್ನು ಅನುಸರಿಸಬೇಕು. ನಿರಂತರ ಅಭ್ಯಾಸ ಮಾಡಿ ಮುಂದೊಂದು ದಿನ ಇಸ್ರೋ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವಂತರಾಗಬೇಕು. ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ. ಕಾಲಹರಣ ಮಾಡದೆ ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಸವಾಲುಗಳನ್ನು ಎದುರಿಸುವ ಮೂಲಕ ಸಾಧನೆಯ ಹೆಜ್ಜೆಗಳನ್ನಿಟ್ಟು ಸ್ವಾವಲಂಬಿಗಳಾಗಬೇಕು ಎಂದು ಸ್ಪೂರ್ತಿ ತುಂಬುವ ಮಾತುಗಳನ್ನಾಡಿದರು.
ಕೇಂದ್ರದ ನ್ಯಾಷನಲ್ ಎಜುಕೇಶನ್ ಸೊಸೈಟಿ ಆಫ್ ಟ್ರೈಬಲ್ ಸ್ಟೂಡೆಂಟ್ಸ್ ಪ್ರತಿನಿಧಿ ಪಿಯೂಷ್ ಆನಂದ್ ಮಾತನಾಡಿ, ಕಡಿಮೆ ಸಮಯದಲ್ಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ರೂಪಿಸಲಾಗಿದೆ ಎಂದು ಅಧಿಕಾರಿಗಳ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಮೊದಲ ಹಂತದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, 20 ವಿದ್ಯಾರ್ಥಿ ಹಾಗೂ 20 ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ನೀಡುವ ತರಬೇತಿದಾರರು ವಿದ್ಯಾರ್ಥಿಗಳ ಸಂದೇಹಗಳನ್ನು ಸಮರ್ಪಣಾ ಮನೋಭಾವದಿಂದ ಪರಿಹರಿಸಬೇಕು. ಮುಂದಿನ ವರ್ಷ ೫೦೦ ರಿಂದ ೧೦೦೦ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ಜ್ಞಾನದ ಬಗ್ಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಕೆ.ಆರ್. ರಾಜಕುಮಾರ್ ಮಾತನಾಡಿ, ತರಬೇತಿ ಕಾರ್ಯಕ್ರಮಕ್ಕೆ ಜಿಲ್ಲೆಯ ಬಜ್ಜನಹಳ್ಳಿ ಏಕಲವ್ಯ ಮಾದರಿ ವಸತಿ ಶಾಲೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ಸಾಧನೆ ಮಾಡಬೇಕು. ಎಲ್ಲರೂ ಅವರ ಸಾಧನೆ ಗುರುತಿಸುವಂತಾಗಬೇಕು.ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರತಿಭಾವಂತರನ್ನಾಗಿ ರೂಪಿಸಬೇಕು ಎಂದು ಹೇಳಿದರು.
ಇಲಾಖೆಯ ಉಪನಿರ್ದೇಶಕ ಪ್ರಕಾಶ್, ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ತ್ಯಾಗರಾಜು, ತರಬೇತುದಾರರಾದ ನಿಖಿತ, ತುಮಕೂರು ಹಾಗೂ ಕೋಲಾರ ಜಿಲ್ಲೆ ವಿವಿಧ ವಸತಿ ಶಾಲೆಗಳ ಪ್ರಾಂಶುಪಾಲರು, ವಿದ್ಯಾರ್ಥಿಗಳು ಸೇರಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಭಾನುಮತಿ ಕಾರ್ಯಕ್ರಮದ ನಿರೂಪಣೆ ಮಾಡಿದರು. ತರಬೇತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ೭ ದಿನಗಳ ತರಬೇತಿ ಕಿಟ್‌ಗಳನ್ನು ನೀಡಲಾಯಿತು.
ಇದಕ್ಕೂ ಮುನ್ನ ವಿದ್ಯಾರ್ಥಿಗಳೊಂದಿಗೆ ತರಬೇತಿ ಕುರಿತು ನಡೆದ ವಿಡಿಯೋ ಸಂವಾದದಲ್ಲಿ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್, ಅಜಿತ್ ಕುಮಾರ್ ಶ್ರೀವಾಸ್ತವ, ರಾಜ್ಯ ಬುಡಕಟ್ಟು ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುನಾಥ್ ಎನ್. ಪ್ರಸಾದ್, ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ಕಾರ್ಯದರ್ಶಿ ವಿಭು ನಾಯರ್ ಹಾಗೂ ಕರ್ನಾಟಕ, ರಾಜಸ್ಥಾನ, ತೆಲಂಗಾಣ ರಾಜ್ಯಗಳ ಏಕಲವ್ಯ ಮಾದರಿ ವಸತಿ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.