ಹದಗೆಟ್ಟ ರಸ್ತೆಯ ಗುಂಡಿಗಳನ್ನು ಮುಚ್ಚುವ ಮೂಲಕ ಸಂಘವೊಂದರ ಸದಸ್ಯರು ಜನರ ಮೆಚ್ಚುಗೆ ಪಾತ್ರರಾದರು.

ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಹದಗೆಟ್ಟ ರಸ್ತೆಯ ಗುಂಡಿಗಳನ್ನು ಮುಚ್ಚುವ ಮೂಲಕ ಸಂಘವೊಂದರ ಸದಸ್ಯರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಮೀಪದ ಕೊಟ್ಟಮುಡಿಯ ಜೀನತ್ ಯುವಕ ಸಂಘದ ಪದಾಧಿಕಾರಿ, ಸದಸ್ಯರು ಭಾನುವಾರ ಕೊಟ್ಟಮುಡಿಯಿಂದ ಕಾವೇರಿ ನದಿ ಸೇತುವೆಯವರೆಗೆ ಹದಗೆಟ್ಟ ರಸ್ತೆಯಲ್ಲಿ ಶ್ರಮದಾನ ನಡೆಸಿದರು. ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಮಡಿಕೇರಿ - ನಾಪೋಕ್ಲು ಮುಖ್ಯ ರಸ್ತೆಯಲ್ಲಿ ಕೊಟ್ಟಮುಡಿ ಯಿಂದ ಕಾವೇರಿ ನದಿ ಸೇತುವೆಯವರೆಗೆ ರಸ್ತೆಗಳು ಗುಂಡಿ ಬಿದ್ದು ಸಂಚಾರಕ್ಕೆ ತೊಡಕು ಉಂಟಾಗಿ ಇಲ್ಲಿ ನಿತ್ಯವೂ ಅಪಘಾತ ಸಂಭವಿಸುತ್ತಿತ್ತು. ರಸ್ತೆ ದುರಸ್ತಿಗೆ ಒತ್ತಾಯಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ರಸ್ತೆ ದುರಸ್ತಿಗೆ ಅಧಿಕಾರಿಗಳ ಸ್ಪಂದನೆ ಸಿಗದಿದ್ದರಿಂದ ಕೊಟ್ಟ ಮುಡಿಯ ಜೀನತ್ ಯುವಕ ಸಂಘದ ಪದಾಧಿಕಾರಿಗಳು ಭಾನುವಾರ ತಮ್ಮ ವಾಹನದಲ್ಲೇ ಮಣ್ಣು ತಂದು ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾದರು. ಗುಂಡಿಗಳಿಗೆ ಮಣ್ಣು ಕಲ್ಲು ತುಂಬಿ ದುರಸ್ತಿ ಕಾರ್ಯ ನಡೆಸಿ ವಾಹನಗಳು ಅಪಘಾತವಾಗದಂತೆ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಶ್ರಮದಾನದಲ್ಲಿ ಕೊಟ್ಟಮುಡಿಯ ಜೀನತ್, ಯುವಕ ಸಂಘದ ಅಧ್ಯಕ್ಷ ಶೌಕತ್ ಆಲಿ ಕೆ.ಎಚ್, ಉಪಾಧ್ಯಕ್ಷ ನೌಶದ್ ಹೆಚ್ ಎಂ , ಕಾರ್ಯದರ್ಶಿ ರಹಿಂ ಕೆ. ಎ, ಸಹ ಕಾರ್ಯದರ್ಶಿ ಮಹಮ್ಮದ್ ಕೆ.ಕೆ ಹಾಗೂ ಇತರ ಪದಾಧಿಕಾರಿ ಸದಸ್ಯರು ಪಾಲ್ಗೊಂಡಿದ್ದರು.ರಸ್ತೆಗಳು ಸಂಪೂರ್ಣ ಗುಂಡಿಗಳಾಗಿ ತೀವ್ರ ಹದಗೆಟ್ಟು ವಾಹನ ಸಂಚಾರಕ್ಕೆ ದುಸ್ತರವಾಗಿದೆ. ಇಲ್ಲಿ ದಿನನಿತ್ಯ ವಾಹನಗಳು ಅಪಘಾತವಾಗುತ್ತಿದ್ದು ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದೀಗಾಗಲೇ ರಸ್ತೆ ಗುಂಡಿಯಿಂದಾಗಿ ಇಲ್ಲಿ ನಾಲ್ಕು ಅಪಘಾತಗಳು ಸಂಭವಿಸಿ ಜೀವ ಪಾಯದಿಂದ ಪಾರಾಗಿದ್ದಾರೆ.ಶೌಕತ್ ಆಲಿ ಕೆ.ಎಚ್, ಅಧ್ಯಕ್ಷ ಕೊಟ್ಟಮುಡಿಯ ಜೀನತ್ ಯುವಕ ಸಂಘ