ಸಾರಾಂಶ
- ಹಕ್ಕೊತ್ತಾಯ ಸಲ್ಲಿಸಲು ಸಿಎಂ ಬಳಿಗೆ ನಿಯೋಗ ತೆರಳೋಣ: ಡಾ.ಬಸವಪ್ರಭು ಶ್ರೀ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಪ್ರತಿವರ್ಷ ಶರಣರು, ಮಹಾತ್ಮರು, ದಾರ್ಶನಿಕರ ಜಯಂತಿಯನ್ನು ನಮ್ಮ ಸರ್ಕಾರ ಆಚರಣೆ ಮಾಡುತ್ತಿದೆ. ಅದೇ ರೀತಿಯಾಗಿ ಕರ್ನಾಟಕದ ಗಾಂಧಿ, ಸ್ವಾತಂತ್ರ್ಯ ಹೋರಾಟಗಾರಗಿ, ಪತ್ರಕರ್ತ, ಸರಳ ಜೀವನ ನಡೆಸಿದಂತಹ ಹರ್ಡೆಕರ್ ಮಂಜಪ್ಪ ಅವರ ಜಯಂತಿಯನ್ನು ಸರ್ಕಾರ ಆಚರಣೆ ಮಾಡಬೇಕು ಎಂಬ ಹಕ್ಕೊತ್ತಾಯ ನಾವೆಲ್ಲರೂ ನಿಯೋಗದ ಮುಖಾಂತರ ಮುಖ್ಯಮಂತಿ ಅವರಿಗೆ ಮನವಿ ಮಾಡಿ ಇಡೀ ರಾಜ್ಯಾದ್ಯಂತ ಆಚರಣೆ ಮಾಡುವಂತಾಗಲು ಪ್ರಯತ್ನ ಮಾಡೋಣ ಎಂದು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ನುಡಿದರು.
ನಗರದ ಹೊಸ ಅಂಡರ್ ಬ್ರಿಡ್ಜ್ ಸಮೀಪದ ಶರಣ ಹರ್ಡೆಕರ್ ಮಂಜಪ್ಪ ಪುತ್ಥಳಿ ಬಳಿ ಮಂಗಳವಾರ ಬಸವ ಬಳಗ, ಜಾಗತಿಕ ಲಿಂಗಾಯತ ಮಹಾಸಭಾ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ವಿರಕ್ತ ಮಠ, ಬಸವ ಕಲಾಲೋಕದ ಸಹಯೋಗದಲ್ಲಿ ಆಯೋಜಿಸಿದ ಕರ್ನಾಟಕದ ಗಾಂಧಿ ಹರ್ಡೆಕರ್ ಮಂಜಪ್ಪನವರ 139ನೇ ಜಯಂತಿ ಕಾರ್ಯಕ್ರಮದಲ್ಲಿ ಪುತ್ಥಳಿಗೆ ಪುಷ್ಪಾರ್ಪಣೆ ಮಾಡಿ ಅವರು ಮಾತನಾಡಿದರು.ವಿಶ್ವಗುರು ಬಸವಣ್ಣನವರ ಹೆಸರು ಇಡೀ ಕರ್ನಾಟಕ, ಭಾರತಕ್ಕೆ ಅಲ್ಲ. ಇಡೀ ವಿಶ್ವಕ್ಕೇ ಮುಟ್ಟಿದೆ ಅದಕ್ಕೆ ಕಾರಣರೆಂದರೆ ಹರ್ಡೆಕರ್ ಮಂಜಪ್ಪ. ದಾವಣಗೆರೆಯ ವಿರಕ್ತ ಮಠದಲ್ಲಿ ಮೊಟ್ಟಮೊದಲ ಬಾರಿಗೆ ಬಸವ ಜಯಂತಿಯನ್ನು 1913ರಲ್ಲಿ ಪ್ರಾರಂಭ ಮಾಡಿದವರು. ಅಂದಿನಿಂದ ಪ್ರಾರಂಭವಾದ ಬಸವ ಜಯಂತಿ ಇಂದು ಇಡೀ ವಿಶ್ವಾದ್ಯಂತ ಆಚರಣೆ ಮಾಡಲಾಗುತ್ತಿದೆ ಎಂದರು.
ಹರ್ಡೆಕರ್ ಮಂಜಪ್ಪನವರು ಬರೀ ದಾವಣಗೆರೆಗೆ ಸೀಮಿತವಾಗಿಲ್ಲ. ಇಡೀ ದೇಶಕ್ಕೆ ಸ್ವಾತಂತ್ರ್ಯ ಬರಬೇಕು ಎಂದು ದೊಡ್ಡ ಕ್ರಾಂತಿ ಮಾಡಿದವರು. ಶಿಕ್ಷಕ ವೃತ್ತಿ ತೊರೆದು ದೇಶ ಮೊದಲು, ಭಾರತಕ್ಕೆ ಸ್ವಾತಂತ್ರ್ಯ ಸಿಗಬೇಕು ಎಂದು ದಾವಣಗೆರೆಗೆ ಬಂದು ಧನುರ್ದಾರಿ ಪತ್ರಿಕೆ ಆರಂಭಿಸಿದರು. ದಾವಣಗೆರೆ ಮಂಡಿಪೇಟೆಯ ಪಕ್ಕದ ರಸ್ತೆಗೆ ಅವರ ಹೆಸರು ಇದೆ. ಆದರೂ, ಇಂದು ಬೇರೆ ಹೆಸರಿನಿಂದಲೇ ಕರೆಯುತ್ತಿರುವುದು ಬೇಸರದ ಸಂಗತಿ ಎಂದರು.ಮಹಾನಗರ ಪಾಲಿಕೆ ಉಪ ಮೇಯರ್ ಸೋಗಿ ಶಾಂತಕುಮಾರ ಮಾತನಾಡಿ, ಬಸವಣ್ಣನವರ ವಿಚಾರಗಳು, ಅವರು ನಡೆದು ಬಂದಂತಹ ದಾರಿಯನ್ನು ಬೆಳಕು ಚೆಲ್ಲುವಂತಹ ನಿಜವಾದ ಪ್ರಯತ್ನವನ್ನು ಹರ್ಡೆಕರ್ ಮಂಜಪ್ಪ ಮಾಡಿದ್ದಾರೆ. ಅವರು ನಮಗೆ ಸದಾ ಸ್ಮರಣೀಯರು ಎಂದರು.
ಬಾಗಲಕೋಟೆಯ ಮಹಾಮಲ್ಲಪ್ಪ ಪಟ್ಟಣಶೆಟ್ಟಿ ಹರ್ಡೆಕರ್ ಮಂಜಪ್ಪ ಬಗ್ಗೆ ಮಾತನಾಡಿದರು. ಬಸವ ಬಳಗದ ಹುಚ್ಚಪ್ಪ ಮೇಸ್ಟ್ರು, ಜಾಗತಿಕ ಲಿಂಗಾಯತ ಮಹಾಸಭಾದ ಆವರಗೆರೆ ರುದ್ರಮುನಿ, ವಿರಕ್ತ ಮಠದ ಕಾರ್ಯದರ್ಶಿ ಕಣಕುಪ್ಪಿ ಮುರುಗೇಶಪ್ಪ, ಅಗಡಿ ಮಹಾಂತೇಶ, ಬಸವ ಕಲಾಲೋಕದ ಶಶಿಧರ, ರುದ್ರೇಗೌಡ, ಶರಣ ಸಾಹಿತ್ಯ ಪರಿಷತ್ತಿನ ಪರಮೇಶ್ವರಪ್ಪ, ಬಸವ ಬಳಗದ ಶಿವಾನಂದ ಗುರೂಜಿ, ಲಂಬಿ ಮುರುಗೇಶ, ಚನ್ನಬಸವ ಶೀಲವಂತ್, ಕುಸುಮ ಲೋಕೇಶ, ವೀಣಾ ಮಂಜುನಾಥ, ಭುವನೇಶ್ವರಿ ತಾಯಿ, ಶಿವಬಸಮ್ಮ, ಮರುಳಸಿದ್ದಯ್ಯ, ಶರಣಪ್ಪ, ಶಾಂತಮೂರ್ತಿ, ಭಕ್ತರು ಇದ್ದರು.- - -
ಕೋಟ್ ಮಕ್ಕಳಿಗೆ, ಯುವಜನತೆಗೆ ತಿಳಿಸುವ ನಿಟ್ಟಿನಲ್ಲಿ ಕರ್ನಾಟಕದ ಗಾಂಧಿ ಎಂದೇ ಕರೆಸಿಕೊಂಡಿದ್ದ ಹರ್ಡೆಕರ್ ಮಂಜಪ್ಪನವರ ಜೀವನದ ಆದರ್ಶಗಳು, ವಿಚಾರಧಾರೆಗಳನ್ನು ಅವರ ಕುರಿತು ಪಠ್ಯಗಳಲ್ಲಿ ಅಳವಡಿಸಬೇಕು- ಡಾ. ಬಸವಪ್ರಭು ಸ್ವಾಮೀಜಿ, ವಿರಕ್ತ ಮಠ
- - --18ಕೆಡಿವಿಜಿ37, 38:
ದಾವಣಗೆರೆಯಲ್ಲಿ ಬಸವ ಪರ ಸಂಘಟನೆಗಳಿಂದ ಕರ್ನಾಟಕದ ಗಾಂಧಿ ಹರ್ಡೆಕರ್ ಮಂಜಪ್ಪ ಜಯಂತಿಯನ್ನು ಆಚರಿಸಲಾಯಿತು.