ಸಾರಾಂಶ
ಗದಗ: ಹರ್ಡೇಕರ ಮಂಜಪ್ಪನವರ ಜೀವನವೇ ತ್ಯಾಗಮಯವಾಗಿದ್ದು, ಶಿಕ್ಷಕರಾಗಿದ್ದ ಮಂಜಪ್ಪ ದೇಶ ಸೇವೆ, ಸಮಾಜ ಸೇವೆಗಾಗಿ ಶಿಕ್ಷಕ ಹುದ್ದೆ ಬಿಟ್ಟು ಜನತೆಯಲ್ಲಿ ಬೇರು ಬಿಟ್ಟಿರುವ ದುಶ್ಚಟಗಳ ವಿರುದ್ಧ ಸಮರ ಸಾರಿ ೫೫ ಹಳ್ಳಿಗಳಿಗೆ ಪಾದಯಾತ್ರೆಯ ಮೂಲಕ ತೆರಳಿ ತಂಬಾಕು, ಮದ್ಯ, ಬೀಡಿ ಸೇವನೆಯಂತ ದುಶ್ಚಟಗಳಿಂದುಂಟಾಗುವ ಹಾನಿ ವಿವರಿಸಿ ತ್ಯಜಿಸುವಂತೆ ಜಾಗೃತಿ ಮೂಡಿಸಿದರು ಎಂದು ಡಾ. ಗಿರಿಜಾ ಹಸಬಿ ಹೇಳಿದರು.
ನಗರದ ಬಸವ ಮಂಟಪದಲ್ಲಿ ನಡೆದ ಬಸವ ದಳದ ೧೫೭೫ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ಶರಣ ಹರ್ಡೇಕರ ಮಂಜಪ್ಪನವರ ೭೭ನೇ ಸ್ಮರಣೆ ಹಾಗೂ ಶರಣೆ ಸಾವಿತ್ರಿಬಾಯಿ ಪುಲೆ ೧೯೪ನೇ ಜಯಂತಿ ಅಂಗವಾಗಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಹೆಣ್ಣುಮಕ್ಕಳ ಸ್ಥಿತಿ ಅಂದು ಶೋಚನೀಯವಾಗಿದ್ದ ಸಂದರ್ಭದಲ್ಲಿ ಸ್ತ್ರೀ ಸಬಲೀಕರಣಕ್ಕಾಗಿ ಕೈ ಕಸಬುಗಳಿಗೆ ಪ್ರೇರಣೆ ನೀಡುತ್ತಿದ್ದರು. ಅಲ್ಲದೇ ಬಸವ ಸೇವಾದಳ ಕಟ್ಟಿಕೊಂಡು ಜನತೆ ಮೂಲಕ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ನೀಡಿದವರು ಹರ್ಡೇಕರ ಮಂಜಪ್ಪನವರು ಎಂದರು.
ದಾವಣಗೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಬಸವ ಜಯಂತಿ ಆಚರಿಸುವ ಮೂಲಕ ನಾಡಿನಾದ್ಯಂತ ಬಸವ ಜಯಂತಿ ಆಚರಣೆಗೆ ಮುನ್ನುಡಿ ಬರೆಯುವ ಮೂಲಕ ಧರ್ಮ ಜಾಗೃತಿಗೂ ಕಾರಣರಾದರು. ಆಲಮಟ್ಟಿಯಲ್ಲಿ ಶಾಲೆಯೊಂದನ್ನು ತೆರೆಯುವ ಮೂಲಕ ಶಿಕ್ಷಣವು ಗ್ರಾಮೀಣ ಮಕ್ಕಳಿಗೂ ದೊರೆಯವಂತೆ ಮಾಡಿದರು. ಒಟ್ಟಾರೆ ಒಂದೆಡೆ ಸಮಾಜ ಸೇವೆ, ಧರ್ಮ ಪ್ರಸಾರ, ದೇಶ ಸೇವೆಯಂತಹ ವಿಧಾಯಕ ಕಾರ್ಯ ನಡೆಸಿ ಸಾರ್ಥಕ ಬದುಕನ್ನು ನಡೆಸಿದರು ಎಂದರು.
ಹಿಂದುಳಿದ ಜನಾಂಗದಲ್ಲಿ ಜನಿಸಿದ ಸಾವಿತ್ರಿಬಾಯಿ ಅಂದಿನ ಸಮಾಜದಲ್ಲಿದ್ದ ಜಾತಿ ಪದ್ಧತಿ, ಮೂಢನಂಬಿಕೆ ವಿರುದ್ಧ ಹೋರಾಡಿ ದಲಿತರು ಶಿಕ್ಷಣ ಪಡೆಯುವುದೇ ಈ ಶೋಷಣೆ, ದಾಸ್ಯಗಳಿಂದ ಮುಕ್ತರಾಗಲು ದಾರಿಯೆಂದು ಅರಿತರು. ಈ ಪರಿಣಾಮ ಸಾವಿತ್ರಿಬಾಯಿ ಶಿಕ್ಷಣ ಪಡೆಯಲು ಶಾಲೆಗೆ ಹೋಗ ತೊಡಗಿದರು. ಆದರೆ ಇದರಿಂದ ಕ್ರುದ್ಧರಾಗಿದ್ದ ಮೇಲುವರ್ಗದವರು ಅವರಿಗೆ ನಾನಾ ತರಹದ ಕಿರುಕಳ ನೀಡಿದರು.
ಆದರೆ ದೃಢ ಮನಸ್ಕರಾಗಿದ್ದ ಸಾವಿತ್ರಿ ಇವನ್ನೆಲ್ಲ ಎದುರಿಸಿ ಶಿಕ್ಷಣ ಪಡೆದರು. ಮುಂದೆ ಆಡಳಿತ ನಡೆಸುತ್ತಿದ್ದ ಆಂಗ್ಲ ಅಧಿಕಾರಿಗಳ ಸಹಾಯ ಪಡೆದು ತಮ್ಮದೇ ಶಾಲೆ ತೆರೆದರು. ಈ ಮೂಲಕ ದಲಿತರಿಗೆ ಶಿಕ್ಷಣ ನೀಡ ತೊಡಗಿದರು. ಜತೆಗೆ ಇನ್ನು ಹಲವಾರು ವಿವಿಧ ಸಮಾಜಮುಖಿ ಸೇವೆ ಮಾಡಿ ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಅಪರೂಪದ ರತ್ನ ಸಾವಿತ್ರಿಬಾಯಿ ಪುಲೆಯಾಗಿದ್ದಾರೆಂದರು.
ಈ ವೇಳೆ ಅಧ್ಯಕ್ಷತೆ ವಹಿಸಿದ್ದ ಎಸ್.ಎನ್. ಹಕಾರಿ ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಸವದಳದ ಸದಸ್ಯರು ಇದ್ದರು. ಎಂ.ಬಿ. ಲಿಂಗಧಾಳ ಸ್ವಾಗತಿಸಿದರು. ಗಂಗಮ್ಮ ಹೂಗಾರ ನಿರೂಪಿಸಿದರು.