ಕನ್ನಡಪ್ರಭ ವರ್ಷದ ವ್ಯಕ್ತಿ ಹರೇಕಳ ಹಾಜಬ್ಬರ ನ್ಯೂಪಡ್ಪುವಿಗೆ ಪಿಯು ಕಾಲೇಜು ಮಂಜೂರು

| Published : Feb 04 2024, 01:35 AM IST

ಕನ್ನಡಪ್ರಭ ವರ್ಷದ ವ್ಯಕ್ತಿ ಹರೇಕಳ ಹಾಜಬ್ಬರ ನ್ಯೂಪಡ್ಪುವಿಗೆ ಪಿಯು ಕಾಲೇಜು ಮಂಜೂರು
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಳೀಯ ಜನಪ್ರತಿನಿಧಿಗಳು, ಸಂಘಸಂಸ್ಥೆಗಳು, ಶಾಸಕರು, ಸಂಸದರು, ಸಚಿವರ ಪ್ರಯತ್ನದ ಫಲವಾಗಿ ಹಾಜಬ್ಬರ ಶಾಲೆಗೆ ಪಿಯು ಕಾಲೇಜು ಮಂಜೂರುಗೊಂಡಿದೆ. ಇದಕ್ಕೆ ಕಾರಣಕರ್ತರಾದ ಎಲ್ಲರಿಗೆ ಹಾಜಬ್ಬ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಅಕ್ಷರ ಸಂತ, ಕನ್ನಡಪ್ರಭ ವರ್ಷದ ವ್ಯಕ್ತಿ ಪ್ರಶಸ್ತಿ ಪುರಸ್ಕೃತ, ಪದ್ಮಶ್ರೀ ಗೌರವಕ್ಕೆ ಭಾಜನರಾದ ಹರೇಕಳ ಹಾಜಬ್ಬ ಅವರ ನ್ಯೂಪಡ್ಪುವಿಗೆ ಪದವಿ ಪೂರ್ವ ಕಾಲೇಜು ಮಂಜೂರಾಗಿದೆ.ಹಾಲಿ ಸರ್ಕಾರಿ ಪ್ರೌಢ ಶಾಲೆಯನ್ನು ಉನ್ನತೀಕರಿಸಿ ಹೊಸದಾಗಿ ಪದವಿ ಪೂರ್ವ ಕಾಲೇಜು ಆರಂಭಿಸುವ ಬಗ್ಗೆ ಸರ್ಕಾರ ಆದೇಶಿಸಿದೆ. ಈ ಕುರಿತ ಆದೇಶ ಪತ್ರ ಹಾಜಬ್ಬರ ಕೈಸೇರಿದೆ. ಪಿಯು ಕಾಲೇಜು ಆರಂಭಿಸುವ ಕುರಿತಂತೆ 1.30 ಎಕರೆ ಜಾಗ ಮಂಜೂರಾಗಿದ್ದು, ಹಾಲಿ ಹೈಸ್ಕೂಲ್‌ ಕಟ್ಟಡದಲ್ಲಿ ಪಿಯು ಕಾಲೇಜು ಕಾರ್ಯಾಚರಿಸಲಿದೆ. ಮುಂದಿನ(2024-25) ಶೈಕ್ಷಣಿಕ ವರ್ಷದಿಂದಲೇ ಕಾಲೇಜು ಕಾರ್ಯಾರಂಭಗೊಳ್ಳುವ ನಿರೀಕ್ಷೆ ಇದೆ.ನ್ಯೂಪಡ್ಪು ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಪಿಯು ಕಲಿಯಲು ದೂರದ ಪಟ್ಟಣಕ್ಕೆ ತೆರಳಬೇಕಿತ್ತು. ಸ್ಥಳೀಯವಾಗಿ ಪಿಯು ಕಾಲೇಜಿನ ಕೊರತೆ ಇರುವುದನ್ನು ಮನಗಂಡ ಶಿಕ್ಷಣ ಇಲಾಖೆ ಹರೇಕಳ ನ್ಯೂಪಡ್ಪು ಹೈಸ್ಕೂಲ್‌ನ್ನು ಉನ್ನತೀಕರಿಸಿ ಸರ್ಕಾರಿ ಪಿಯು ಕಾಲೇಜು ಆರಂಭಿಸುವಂತೆ ಪಿಯು ಇಲಾಖೆ ಅಧೀನ ಕಾರ್ಯದರ್ಶಿ ಪದ್ಮಿನಿ ಎಸ್‌.ಎನ್‌. ಹೊರಡಿಸಿದ ಆದೇಶ(9-1-2024)ದಲ್ಲಿ ತಿಳಿಸಿದ್ದಾರೆ. 2000ರ ಜೂನ್‌ 17ರಂದು ಕುಗ್ರಾಮ ಹರೇಕಳ ನ್ಯೂಪಡ್ಪುವಿನಲ್ಲಿ ಒಂದನೇ ತರಗತಿಯಿಂದ ಆರಂಭವಾಗಿ 2007ರಲ್ಲಿ ಹೈಸ್ಕೂಲ್‌ ತೆರೆಯಿತು. ಬಳಿಕ ಪಿಯು ಕಾಲೇಜಿಗಾಗಿ 2013ರಲ್ಲೇ ಶಾಲಾಭಿವೃದ್ಧಿ ಸಮಿತಿ ಕಾರ್ಯದರ್ಶಿ ಹಾಜಬ್ಬ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸುತ್ತಾ ಬಂದಿದ್ದರು. ಇದೀಗ ಸ್ಥಳೀಯ ಜನಪ್ರತಿನಿಧಿಗಳು, ಸಂಘಸಂಸ್ಥೆಗಳು, ಶಾಸಕರು, ಸಂಸದರು, ಸಚಿವರ ಪ್ರಯತ್ನದ ಫಲವಾಗಿ ಹಾಜಬ್ಬರ ಶಾಲೆಗೆ ಪಿಯು ಕಾಲೇಜು ಮಂಜೂರುಗೊಂಡಿದೆ. ಇದಕ್ಕೆ ಕಾರಣಕರ್ತರಾದ ಎಲ್ಲರಿಗೆ ಹಾಜಬ್ಬ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.