ಚನ್ನಗಿರಿ ಕ್ಷೇತ್ರದ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮತ್ತು ಮಾಡಾಳು ಮಲ್ಲಿಕಾರ್ಜುನ್ ಬಿಜೆಪಿ ಮುಖಂಡರಾಗಿದ್ದು, ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ್ ಅವರ ವಿರುದ್ಧ ಮಾಧ್ಯಮಗಳಲ್ಲಿ ಲಘುವಾಗಿ ಮಾತನಾಡಿದ್ದಾರೆ. ಇದು ಅಕ್ಷಮ್ಯ ಎಂದು ಚನ್ನಗಿರಿ ತಾಲೂಕು ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ತಿಪ್ಪಗೊಂಡನಹಳ್ಳಿ ಮಲ್ಲಿಕಾರ್ಜುನ್ ಚನ್ನಗಿರಿಯಲ್ಲಿ ಹೇಳಿದ್ದಾರೆ.

- ನೀವಂದ್ರೆ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೆ ನೀವೇ: ಮಲ್ಲಿಕಾರ್ಜುನ ಆರೋಪ - - -

- ಮಾಡಾಳು ವಿರೂಪಾಕ್ಷಪ್ಪ, ಮಲ್ಲಿಕಾರ್ಜುನ್‌ ವಿರುದ್ಧ ಮಾತಾಡುವಾಗ ಎಚ್ಚರವಿರಲಿ ಎಂದು ಸಲಹೆ

- ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಕ್ಷೇತ್ರದಲ್ಲೇ 4500 ಮತ ಕಾಂಗ್ರೆಸ್‌ಗೆ ಲೀಡ್ ಕೊಡಿಸಿದ್ದೀರೆಂದು ಟೀಕೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಚನ್ನಗಿರಿ ಕ್ಷೇತ್ರದ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮತ್ತು ಮಾಡಾಳು ಮಲ್ಲಿಕಾರ್ಜುನ್ ಬಿಜೆಪಿ ಮುಖಂಡರಾಗಿದ್ದು, ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ್ ಅವರುಗಳ ವಿರುದ್ಧ ಮಾಧ್ಯಮಗಳಲ್ಲಿ ಲಘುವಾಗಿ ಮಾತನಾಡಿದ್ದಾರೆ. ಇದು ಅಕ್ಷಮ್ಯ ಎಂದು ಚನ್ನಗಿರಿ ತಾಲೂಕು ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ತಿಪ್ಪಗೊಂಡನಹಳ್ಳಿ ಮಲ್ಲಿಕಾರ್ಜುನ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಬಿ.ಪಿ ಹರೀಶ್ ಅವರೇ, ನಿವೇನು ಸಾಚಾ ಆಗಿದ್ದೀರಾ? ನೀವಂದ್ರೆ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೆ ನೀವೇ ಆಗಿದ್ದೀರಿ. ಶಾಸಕರಾಗಿ ಪ್ರಚಾರ ಮಾಡುವ ಸಂದರ್ಭ 25 ಸಾವಿರ ಮತಗಳ ಲೀಡ್ ಕೊಡುತ್ತೇವೆ ಎಂದು ಭಾಷಣ ಮಾಡುತ್ತಾ, ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಕ್ಷೇತ್ರದಲ್ಲೇ 4500 ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಕೊಡಿಸಿದ್ದೀರಿ ಎಂದು ಹರಿಹಾಯ್ದರು.

ನಿಮ್ಮ ತಟ್ಟೆಯಲ್ಲಿ ಸತ್ತ ಹೆಗ್ಗಣ ಬಿದ್ದಿದೆ, ನಮ್ಮ ತಟ್ಟೆಯಲ್ಲಿನ ನೋಣ ಹುಡುಕಲು ಬರಬೇಡಿ. ಮೊದಲು ನಿಮ್ಮ ಕ್ಷೇತ್ರ ನೋಡಿಕೊಳ್ಳಿ ಸ್ವಾಮಿ, ಇನ್ನು ಮುಂದೆ ಚನ್ನಗಿರಿ ಕ್ಷೇತ್ರ, ನಮ್ಮ ನಾಯಕರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿಹಿಡಿದುಕೊಳ್ಳಬೇಕು. ನಿಮ್ಮ ಕ್ಷೇತ್ರದ ಸೋಲನ್ನು ಮುಚ್ಚಿಹಾಕಲು ನಮ್ಮ ಕ್ಷೇತ್ರದ ಮೇಲೆ ಗೂಬೆ ಕೂರಿಸಬೇಡಿ ಎಂದರು.

ನೀವು ಈ ಹಿಂದೆ ಕಾಂಗ್ರೆಸ್ ಗೆ ಹೋಗಿ ವಾಪಸ್ ಬಂದವರು. ನಮ್ಮ ನಾಯಕ ಮಾಡಾಳು ಮಲ್ಲಿಕಾರ್ಜುನ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿ, 63 ಸಾವಿರ ಮತಗಳನ್ನು ಪಡೆದವರು ನಮ್ಮ ಸ್ವಾಭಿಮಾನಿ ಬಳಗದ ಕಾರ್ಯಕರ್ತರ ಪರಿಶ್ರಮದ ಮೇಲೆ. ಲೋಕಸಭಾ ಚುನಾವಣೆಯುಲ್ಲಿ ಕಾರ್ಯಕರ್ತರು, ಮುಖಂಡರು, ಜನಪ್ರತಿನಿಧಿಗಳು ಹಾಗೂ ಬಿಜೆಪಿ ಪಕ್ಷದ ಎಲ್ಲರೂ ಪ್ರಾಮಾಣಿಕವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಅದರ ಪ್ರತಿಫಲವಾಗಿ ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ 73 ಸಾವಿರ ಮತಗಳನ್ನು ಕೊಡಿಸಿದ್ದೇವೆ. ಇದು ನಮ್ಮ ಕಾರ್ಯಕರ್ತರ ಪರಿಶ್ರಮದಿಂದ ಆಗಿದೆ ಎಂದು ಸಮರ್ಥಿಸಿಕೊಂಡರು.

2014ರಲ್ಲಿ ಮಾಡಾಳು ವಿರೂಪಾಕ್ಷಪ್ಪ, ರೇಣುಕಾಚಾರ್ಯ, ರವೀಂದ್ರನಾಥ್, ಎಸ್.ವಿ. ರಾಮಚಂದ್ರಪ್ಪ ಅವರು ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುವಲ್ಲಿ ಶ್ರಮಿಸಿದ್ದಾರೆ, ನೀವಲ್ಲ. ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ಹಗುರವಾಗಿ ಮಾತನಾಡಿದ್ದೀರಿ. ಇಂತಹ ಸಣ್ಣತನದ ಹೇಳಿಕೆಗಳು ಬಿಜೆಪಿಗೆ ಶೋಭೆ ತರುವುದಿಲ್ಲ. ನಿಮ್ಮ ಹೇಳಿಕೆ ವಾಪಸ್‌ ಪಡೆದು ನಾಯಕರಾದ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ಮಾಡಾಳು ಮಲ್ಲಿಕಾರ್ಜುನ್ ಅವರಲ್ಲಿ ಕ್ಷಮೆಯಾಚಿಸಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಮುಖಂಡರಾದ ಪುರಸಭಾ ಸದಸ್ಯ ಪಟ್ಲಿ ನಾಗರಾಜ್, ಚಿಕ್ಕೊಲಿಕೆರೆ ಸಂಗಮೇಶ್, ಸಂತೆಬೆನ್ನೂರು ಬಸವರಾಜ್, ದಿಗ್ಗೇನಹಳ್ಳಿ ನಾಗರಾಜ್, ಬಿಲ್ಲಹಳ್ಳಿ ಪರಮೇಶ್, ಗಂಗಗೊಂಡನಹಳ್ಳಿ ಜಗದೀಶ್, ಮಲಹಾಳ್ ಕುಮಾರ್, ಉಮೇಶ್ ಉಪಸ್ಥಿತರಿದ್ದರು.

- - - -11ಕೆಸಿಎನ್‌ಜಿ1:

ಪತ್ರಿಕಾಗೋಷ್ಠಿಯಲ್ಲಿ ಚನ್ನಗಿರಿ ತಾಲೂಕು ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ತಿಪ್ಪಗೊಂಡನಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿದರು. ಪುರಸಭಾ ಸದಸ್ಯ ಪಟ್ಲಿ ನಾಗರಾಜ್, ಚಿಕ್ಕೊಲಿಕೆರೆ ಸಂಗಮೇಶ್, ಸಂತೆಬೆನ್ನೂರು ಬಸವರಾಜ್ ಇತರರು ಇದ್ದರು.