ಹರಿನಾರಾಯಣ ಬೈಪಡಿತ್ತಾಯರಿಗೆ ನಾಳೆ ಪ್ರಶಸ್ತಿ ಪ್ರದಾನ

| Published : Dec 28 2024, 01:00 AM IST

ಸಾರಾಂಶ

ಸಂಜೆ 4 ಗಂಟೆಗೆ ಪಿಲಾತಬೆಟ್ಟು ಸಿ.ಎ.ಬ್ಯಾಂಕ್ ಅಧ್ಯಕ್ಷ ತುಂಗಪ್ಪ ಬಂಗೇರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಹಿಮ್ಮೇಳ ವಾದಕರಾದ ಹರಿನಾರಾಯಣ ಬೈಪಡಿತ್ತಾಯ ಅವರಿಗೆ ಶ್ರೀ ವಿಷ್ಣು ಮೂರ್ತಿ ಯಕ್ಷಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಕಲಿಕಾಕೇಂದ್ರದ ವಿದ್ಯಾರ್ಥಿಗಳ ರಂಗಪ್ರವೇಶ, ಗುರುವಂದನಾ ಹಾಗೂ ‘ಶ್ರೀ ವಿಷ್ಣು ಮೂರ್ತಿ ಯಕ್ಷಶ್ರೀ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮ ಭಾನುವಾರ ಅಪರಾಹ್ನ 2.30ಕ್ಕೆ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಕಲಿಕಾ ಕೇಂದ್ರದ ಅಧ್ಯಕ್ಷ ರಾಘವೇಂದ್ರ ಬಲ್ಲಾಳ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಲಿಕಾ ಕೇಂದ್ರದ ಗುರು ಚಂದ್ರಶೇಖರ ಭಟ್ ಕೊಂಕಣಾಜೆ ಅವರ ಸುಮಾರು 10 ಕ್ಕು ಹೆಚ್ಚು ಮಂದಿ ಶಿಷ್ಯಂದಿರು ರಂಗಪ್ರವೇಶ ಮಾಡಲಿದ್ದು, ಮಧ್ಯಾಹ್ನ 2.30 ಕ್ಕೆ ಈ ಕಾರ್ಯಕ್ರಮವನ್ನು ಕ್ಷೇತ್ರದ ತಂತ್ರಿ ವೇ.ಮೂ.ಬಾಲಕೃಷ್ಣ ಪಾಂಗಣ್ಣಾಯ ಉದ್ಘಾಟಿಸಲಿದ್ದಾರೆ ಎಂದರು.

ಸಂಜೆ 4 ಗಂಟೆಗೆ ಪಿಲಾತಬೆಟ್ಟು ಸಿ.ಎ.ಬ್ಯಾಂಕ್ ಅಧ್ಯಕ್ಷ ತುಂಗಪ್ಪ ಬಂಗೇರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಹಿಮ್ಮೇಳ ವಾದಕರಾದ ಹರಿನಾರಾಯಣ ಬೈಪಡಿತ್ತಾಯ ಅವರಿಗೆ ಶ್ರೀ ವಿಷ್ಣು ಮೂರ್ತಿ ಯಕ್ಷಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಯಕ್ಷಗುರು ಚಂದ್ರಶೇಖರ ಭಟ್ ಕೊಂಕಣಾಜೆ ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ‌.

ಉದ್ಯಮಿಗಳಾದ ಶ್ರೀಪತಿ ಭಟ್ ಮೂಡುಬಿದಿರೆ, ರೋ.ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ, ಪಾಂಗಲ್ಪಾಡಿ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ರಾಮಕೃಷ್ಣ ಎಸ್., ಮಂಗಳೂರು ಹಾಪ್‌ಕಾಮ್ಸ್ ನಿರ್ದೇಶಕ ಲಕ್ಷ್ಮೀ ನಾರಾಯಣ ಉಡುಪ ಭಾಗವಹಿಸಲಿದ್ದಾರೆ ಎಂದರು.

ಬಳಿಕ ಚಂದ್ರಶೇಖರ ಭಟ್ ಕೊಂಕಣಾಜೆ ಅವರ ಶಿಷ್ಯರಿಂದ ‘ಅಬ್ಬರತಾಳ’, ಸಂಜೆ 6ರಿಂದ ಪ್ರೇಮ್ ರಾಜ್ ಕೊಯಿಲ ನಿರ್ದೇಶನದಲ್ಲಿ ‘ಯಕ್ಷಕೌಸ್ತಭ’ ಮಕ್ಕಳ ತಂಡದಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಯಕ್ಷಗುರು ಚಂದ್ರಶೇಖರ ಭಟ್ ಕೊಂಕಣಾಜೆ, ಸಮಿತಿ ಪದಾಧಿಕಾರಿಗಳಾದ ಹರಿಪ್ರಸಾದ್ ರಾವ್ ಕೊಯಿಲ,ಡಾ.ರಾಮಕೃಷ್ಣ ಎಸ್, ಕೀರ್ತನ್ ಶೆಟ್ಟಿ ಮೊದಲಾದವರಿದ್ದರು.