ಸಾರಾಂಶ
- ಶಾಸಕರಾಗಿ ಹಿರಿಯ ನಾಯಕರು, ಅಧಿಕಾರಸ್ಥರು, ಅಧಿಕಾರಿಗಳ ನಿಂದಿಸೋದೇ ಅವರಿಗೆ ಕೆಲಸ: ಶ್ರೀನಿವಾಸ ನಂದಿಗಾವಿ ವಾಗ್ದಾಳಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಶಾಮನೂರು ಕುಟುಂಬ, ಯಡಿಯೂರಪ್ಪ ಕುಟುಂಬದ ವಿರುದ್ಧ ಆರೋಪ ಮಾಡುವುದಕ್ಕೆ ಸೀಮಿತವಾಗಿರುವ ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ ಅವರು ಕ್ಷೇತ್ರ ಅಭಿವೃದ್ಧಿ, ಜನಪರ ಕೆಲಸ ಮಾಡಲು ಆಗದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ಕಾಂಗ್ರೆಸ್ ಮುಖಂಡ ಎನ್.ಎಚ್.ಶ್ರೀನಿವಾಸ ನಂದಿಗಾವಿ ತಾಕೀತು ಮಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಬಿ.ಪಿ.ಹರೀಶ ಶಾಸಕರಾಗಿರೋದು ಹರಿಹರಕ್ಕಾ ಅಥವಾ ಬೆಂಗಳೂರಿಗಾ ಎಂದು ಕ್ಷೇತ್ರದ ಜನತೆ ವ್ಯಂಗ್ಯವಾಡುತ್ತಿದ್ದಾರೆ. ಹರಿಹರ ತಾಲೂಕು ಚಿಕ್ಕಬಿದರಿ ಹಳ್ಳ, ರೈತರ ಜಮೀನು ವಿಚಾರವಾಗಿ ಶಾಮನೂರು ಕುಟುಂಬದ ವಿರುದ್ಧ ಬಿ.ಪಿ.ಹರೀಶ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಹಿರಿಯ ನಾಯಕರು, ಅಧಿಕಾರಸ್ಥರು, ಅಧಿಕಾರಿಗಳನ್ನು ಬೈಯ್ಯುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ. ಸಮಾರಂಭ, ಮದುವೆ ಇತರೆಗಳಲ್ಲಿ ಭಾಗಿ ಆಗುವುದಕ್ಕಷ್ಟೇ ಸೀಮಿತರಾಗಿದ್ದಾರೆ ಎಂದು ದೂರಿದರು.ನಮ್ಮ ಸಚಿವರಿಗೆ ಅಭಿವೃದ್ಧಿ ಹುಚ್ಚು:
ಈ ಹಿಂದೆ ಡಾ. ವೈ.ನಾಗಪ್ಪ ಶಾಸಕ, ಸಚಿವರಿದ್ದಾಗ ಹರಿಹರದ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ಕಟ್ಟಿಸಿದರು. ಆದರೆ, 2 ಸಲ ಶಾಸಕರಾದ ಹರೀಶ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಏನು? ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಹುಚ್ಚು ಹಿಡಿದಿದೆಯೆಂಬ ಆರೋಪವನ್ನು ಹರೀಶ ಮಾಡಿದ್ದಾರೆ. ಹೌದು, ನಮ್ಮ ಸಚಿವರಿಗೆ ಜಿಲ್ಲೆಯ ಅಭಿವೃದ್ಧಿಪಡಿಸುವ ಹುಚ್ಚು ಹಿಡಿದಿದೆ. ಶಾಶ್ವತ ಕಾಮಗಾರಿ ಕೈಗೊಳ್ಳಬೇಕೆಂಬ ಹುಚ್ಚು ಹಿಡಿದಿದೆ. ಆದರೆ, ಹರೀಶರಿಗೆ ಏನಾಗಿದೆ ಎಂದು ಖಾರವಾಗಿ ಪ್ರಶ್ನಿಸಿದರು.ಸರ್ಕಾರಕ್ಕೆ, ಸಿಎಂಗೆ, ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಿಸಿದ ಸಚಿವರಿಗೆ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೋರಿ ಒಂದೇ ಒಂದು ಪತ್ರ ಬರೆದಿಲ್ಲ, ಭೇಟಿ ಮಾಡಿಲ್ಲ. ಇಂದಿರಾ ಕ್ಯಾಂಟೀನನ್ನು ಮಲೇಬೆನ್ನೂರಿನಲ್ಲಿ ಸ್ಥಾಪಿಸಲು ಇನ್ನಿಲ್ಲದ ಕಿರಿಕಿರಿ ಮಾಡಿದ್ದು ಇದೇ ಬಿ.ಪಿ.ಹರೀಶ್. ಇಲ್ಲಿವರೆಗೆ ಒಂದೇ ಒಂದು ಆಶ್ರಯ ಸಮಿತಿ ಸಭೆ ಕರೆದಿಲ್ಲ. ತಮ್ಮ ಮನೆಗೆ ಅಧಿಕಾರಿಗಳನ್ನು ಕರೆಸಿ, ದಾಖಲೆಗಳಿಗೆ ಸಹಿ ಮಾಡುತ್ತಾರೆ. ಮನೆಯಲ್ಲೇ ದಾಖಲೆಗಳಲ್ಲಿ ಬದಲಾವಣೆ ಮಾಡಿಸಿ, ಸಹಿ ಮಾಡುತ್ತಾರೆ. ಆಶ್ರಯ ಸಮಿತಿ ಸಭೆ ಕರೆದು, ಚರ್ಚಿಸಬೇಕೆಂಬ ಸಾಮಾನ್ಯ ಜ್ಞಾನ ಸಹ ಶಾಸಕ ಹರೀಶ ಅವರಿಗೆ ಇಲ್ಲವೇ ಎಂದು ತಿಳಿಸಿದರು.
ಕಳೆದ 5 ತಿಂಗಳಿಂದ ಹರಿಹರದಲ್ಲಿ ಕೆಡಿಪಿ ಸಭೆ ಕರೆಯರ ಶಾಸಕ ಬಿ.ಪಿ.ಹರೀಶ ಸಾರ್ವಜನಿಕವಾಗಿ ನಗೆಪಾಟಿಲಿಗೆ ಈಡಾಗಿದ್ದಾರೆ. ರೈತರಿಗೆ ಭದ್ರಾ ಕಾಲುವೆಯಲ್ಲಿ ಸಮರ್ಪಕ ನೀರು ಸಿಗುತ್ತಿಲ್ಲ. ಒಂದು ಸಲವಾದರೂ ಭದ್ರಾ ನಾಲೆಗೆ ಭೇಟಿ ನೀಡಿ, ರೈತರ ಅಹವಾಲನ್ನು ಶಾಸಕ ಹರೀಶ ಆಲಿಸಿದ್ದಾರಾ? ನಾಲೆ ಹೂಳು ತೆಗೆಸುವ ಕೆಲಸ ಮಾಡಿದ್ದಾರಾ? ಭೈರನಪಾದ ಏತ ನೀರಾವರಿ ಯೋಜನೆಗೆ ಶಾಸಕರೇ ಅಡ್ಡಿಯಾಗಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಂಜುನಾಥ ಪಾಟೀಲ, ಸಿಗ್ಭತ್ತುಲ್ಲಾ, ರಜನಿಕಾಂತ್, ಹಬೀದ್ ಅಲಿ, ಸೈಯದ್ ಜಾಕೀರ್, ದೇವರ ಬೆಳಕೆರೆ ಮಹೇಶಪ್ಪ, ಬಿ.ಎಚ್.ಶಿವಕುಮಾರ, ಬಿ.ಬಿ.ಮಲ್ಲೇಶ ಇತರರು ಇದ್ದರು.
- - -(ಬಾಕ್ಸ್) * ಶಾಸಕರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಬಗರ್‌ಹುಕುಂ ಸಮಿತಿ, ಕೆಡಿಪಿ ಸಭೆ, ಆಶ್ರಯ ಸಮಿತಿ ಹೀಗೆ ಯಾವುದೇ ಸಭೆ ಮಾಡದ ಶಾಸಕ ಬಿ.ಪಿ.ಹರೀಶ ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟನೆಗೆ ಸಿದ್ಧವಾಗಿ 3 ತಿಂಗಳುಗಳೇ ಕಳೆದರೂ ಉದ್ಘಾಟನೆಗೆ ಸಮಯ ನೀಡುತ್ತಿಲ್ಲ. ಹರಿಹರದ ರಸ್ತೆಗಳಲ್ಲಿನ ಗುಂಡಿ ಮುಚ್ಚಿಸಲು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭೇಟಿ ಮಾಡಿ, ₹10 ಕೋಟಿ ಅನುದಾನವನ್ನು ವೈಯಕ್ತಿಕ ಪ್ರಯತ್ನದಿಂದ ಬಿಡುಗಡೆ ಮಾಡಿಸಿದ್ದೇನೆ. ನಮ್ಮ ಕ್ಷೇತ್ರ ಪಕ್ಷಾತೀತವಾಗಿ ಅಭಿವೃದ್ಧಿ ಹೊಂದಬೇಕೆಂಬ ನಿರೀಕ್ಷೆ ನಮ್ಮದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಶಾಸಕರು ಕೆಲಸ ಮಾಡಲಿ ಎಂದು ಶ್ರೀನಿವಾಸ ನಂದಿಗಾವಿ ಸಲಹೆ ನೀಡಿದರು.
- - --10ಕೆಡಿವಿಜಿ1.ಜೆಪಿಜಿ: ದಾವಣಗೆರೆಯಲ್ಲಿ ಸೋಮವಾರ ಹರಿಹರ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎನ್.ಎಚ್. ಶ್ರೀನಿವಾಸ ನಂದಿಗಾವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
;Resize=(128,128))
;Resize=(128,128))
;Resize=(128,128))