ಸಾರಾಂಶ
ಪ್ರತಿದಿನ ರಾತ್ರಿ ಶಬರಿಮಲೆಯಲ್ಲಿ ದೇವಸ್ಥಾನದ ಬಾಗಿಲು ಹಾಕುವ ಮುನ್ನ ಹೇಳುವ "ಹರಿವರಾಸನಂ " ಗೀತೆಗೆ ಈಗ ಶತಮಾನದ ಸಂಭ್ರಮ. ಈ ಹಿನ್ನೆಲೆಯಲ್ಲಿ ನಗರದ ಶಿರೂರು ಪಾರ್ಕ್‌ನ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಡಿ. 25ರಂದು ಶತಮಾನೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಶಿರೂರ ಪಾರ್ಕ್‌ನಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನ ಟ್ರಸ್ಟಿನ ಉಪಾಧ್ಯಕ್ಷ ಡಾ. ಸಿ.ಎಚ್. ವಿ.ಎಸ್.ವಿ. ಪ್ರಸಾದ್ ಹೇಳಿದರು.
- ಶ್ರೀ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ಉಪಾಧ್ಯಕ್ಷ ವಿ.ಎಸ್.ವಿ. ಪ್ರಸಾದ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಪ್ರತಿದಿನ ರಾತ್ರಿ ಶಬರಿಮಲೆಯಲ್ಲಿ ದೇವಸ್ಥಾನದ ಬಾಗಿಲು ಹಾಕುವ ಮುನ್ನ ಹೇಳುವ "ಹರಿವರಾಸನಂ " ಗೀತೆಗೆ ಈಗ ಶತಮಾನದ ಸಂಭ್ರಮ. ಈ ಹಿನ್ನೆಲೆಯಲ್ಲಿ ನಗರದ ಶಿರೂರು ಪಾರ್ಕ್‌ನ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಡಿ. 25ರಂದು ಶತಮಾನೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ದೇವಸ್ಥಾನ ಟ್ರಸ್ಟ್ ಉಪಾಧ್ಯಕ್ಷ ಡಾ. ಸಿಎಚ್. ವಿಎಸ್‌ವಿ ಪ್ರಸಾದ್ ಹೇಳಿದರು.ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಶ್ರೀ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ವತಿಯಿಂದ ಅಂದು ಸಂಜೆ 4ಕ್ಕೆ ನಡೆಯಲಿದೆ. ಶತಮಾನೋತ್ಸವದ ಅಂಗವಾಗಿ ಅಂದು ಬೆಳಗ್ಗೆ 10ಕ್ಕೆ ಲಕ್ಷಾರ್ಚನೆ, ಮಧ್ಯಾಹ್ನ 1ಕ್ಕೆ ಅನ್ನದಾನ, ಸಂಜೆ 7ಕ್ಕೆ ಪಡಿಪೂಜೆ ನೆರವೇರಿಸಲಾಗುವುದು ಎಂದರು.
ಸಂಜೆ 4ಕ್ಕೆ ನಡೆಯುವ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ವಿಪ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ವಿಪ ಸದಸ್ಯ ಜಗದೀಶ ಶೆಟ್ಟರ, ಶಾಸಕ ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ, ಎಸ್.ವಿ. ಸಂಕನೂರ, ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ. ಶೇಖರ, ಪಾಲಿಕೆ ಮೇಯರ್ ವೀಣಾ ಬರದ್ವಾಡ, ಸದಸ್ಯ ಕಿಶನ್ ಬೆಳಗಾವಿ ಪಾಲ್ಗೊಳ್ಳುವರು. ಅಯ್ಯಪ್ಪಸ್ವಾಮಿ ದೇವಸ್ಥಾನದ ಅಧ್ಯಕ್ಷ ಆನಂದ ಸಂಕೇಶ್ವರ ಅಧ್ಯಕ್ಷತೆ ವಹಿಸುವರು.ಹಿನ್ನೆಲೆ
ಶಬರಿಮಲೆ ಸನ್ನಿಧಾನದ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ಮುಗಿದ ನಂತರ ಪ್ರತಿನಿತ್ಯ ರಾತ್ರಿ ದೇವಸ್ಥಾನ ಬಾಗಿಲು ಹಾಕುವ ಮುನ್ನ "ಹರಿವರಾಸನಂ " ಎಂದು ಕರೆಯಲ್ಪಡುವ "ಹರಿಹರಾತ್ಮಜ ಅಷ್ಟಕಂ " ಧ್ವನಿಮುದ್ರಣ ಪ್ರಸಾರ ಮಾಡಲಾಗುತ್ತದೆ. ಈ ಅಷ್ಟಕಂ ಅಥವಾ ಕೀರ್ತನೆಯನ್ನು ಕೇರಳದ ಅಲಪಳ ಜಿಲ್ಲೆಯ ಪುರಕ್ಕಾಡ್ ಬಳಿಯ ಆನಂದರೇಶ್ವರಂನ ನಿವಾಸಿಯಾಗಿದ್ದ ಕೊನ್ನಕತ್ ಜಾನಕಿ ಎಂಬುವವರು 1923ರಲ್ಲಿ ಬರೆದಿದ್ದರು. ಇವರ ತಂದೆ ಶಬರಿಮಲೆ ದೇವಾಲಯದ ಪುರೋಹಿತರಾಗಿದ್ದರು. 1950ರಿಂದ ಶಬರಿಮಲೆಯಲ್ಲಿ ಈ ಹರಿವರಾಸನಂ ಬಳಸಲಾಗುತ್ತಿದೆ.ಪ್ರಸಿದ್ಧವಾಗಿದ್ದು ಯಾವಾಗ?
1950ರಿಂದ ದೇವಸ್ಥಾನದಲ್ಲಿ ಬಳಸಲಾಗುತ್ತಿದ್ದರೂ, ಹೆಚ್ಚು ಪ್ರಸಿದ್ಧಿ ಪಡೆದಿದ್ದು 1975ರಲ್ಲಿ ಬಿಡುಗಡೆಯಾದ "ಸ್ವಾಮಿ ಅಯ್ಯಪ್ಪನ " ಎಂಬ ಮಲಯಾಳಿ ಭಾಷೆಯ ಚಲನಚಿತ್ರ ಬಿಡುಗಡೆಯಾದಾಗ. ಆ ಚಿತ್ರದಲ್ಲಿ ಈ ಗೀತೆಯನ್ನು ಬಳಸಲಾಗಿತ್ತು. ಆ ಚಿತ್ರದ ಗೀತೆಗಳಿಗೆ ದೇವರಾಜ ಮಾಸ್ಟರ್ ರಾಗ ಸಂಯೋಜನೆ ಮಾಡಿದ್ದರು. ಈ ಗೀತೆಯನ್ನು ಡಾ. ಕೆ.ಜೆ. ಯೇಸುದಾಸ್ ಹಾಡಿದ್ದರು. ಆಗಿನಿಂದ ಇದು ಜನಪ್ರಿಯವಾಗಿದೆ. ಈ ಮಾಹಿತಿ ಎಷ್ಟೋ ಜನರಿಗೆ ಗೊತ್ತಿಲ್ಲ. ಅದನ್ನು ಹೆಚ್ಚೆಚ್ಚು ಪ್ರಸಾರ ಮಾಡುವುದು. ಯುವಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಶತಮಾನೋತ್ಸವ ಸಮಾರಂಭವನ್ನು ಆಯೋಜಿಸಲಾಗಿದೆ ಎಂದರು.ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ (ಎಸ್‌ಎಎಸ್‌ಎಸ್) ಆಗಸ್ಟ್ 2022 ರಿಂದ ಜನೆವರಿ 2024ರ ವರೆಗೆ ಈ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಅದೇ ಪ್ರಕಾರ ಶಿರೂರು ಪಾರ್ಕ್ ಅಯ್ಯಪ್ಪ ಭಕ್ತವೃಂದ ಟ್ರಸ್ಟ್ ಧಾರವಾಡ ಜಿಲ್ಲೆಯಲ್ಲಿ ಕಾರ್ಯಕ್ರಮ ಆಯೋಜಿಸಿದೆ ಎಂದರು.
ಈ ವೇಳೆ ಎಸ್‌ಎಎಸ್‌ಎಸ್‌ನ ಗೌರವಾಧ್ಯಕ್ಷ ಆನಂದ ಗುರುಸ್ವಾಮಿ, ಸಂಜೀವ ಸುಗತೆ, ಕಾಶಿನಾಥ ಹೊಸಪೇಟ, ಮಲ್ಲಿಕಾರ್ಜುನ ಅನಂತಪೂರ, ವೆಂಕಟೇಶ ಹೊಸಮನಿ, ಸುದರ್ಶನ ಬಳಿಗಾರ ಸೇರಿದಂತೆ ಹಲವರಿದ್ದರು.