ಕನ್ನಡಪ್ರಭ ವಾರ್ತೆ ಅರಸೀಕೆರೆ
ಧರ್ಮಗಳ ನಡುವೆ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಸಹಬಾಳ್ವೆಯ ಸಂದೇಶ ಸಾರುವ ಮೊಹರಂ ಹಬ್ಬದ ಅಂಗವಾಗಿ ನಗರದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನರು ಸಂಪ್ರದಾಯಬದ್ಧವಾಗಿ ಕೆಂಡದ ಗುಂಡಿಗೆ ಉಪ್ಪು ಹಾಗೂ ಮೆಣಸು ಸಮರ್ಪಿಸುವ ಮೂಲಕ ಭಾವೈಕ್ಯತೆಯನ್ನು ಮೆರೆದರು. ಎರಡೂ ಸಮುದಾಯದ ಜನರು ಯಾವುದೇ ಭೇದಭಾವವಿಲ್ಲದೆ ಒಂದಾಗಿ ಪಾಲ್ಗೊಂಡು ಹಬ್ಬವನ್ನು ಆಚರಿಸಿದ್ದು ಗಮನ ಸೆಳೆಯಿತು.ಮೊಹರಂ ಆಚರಣೆಯ ಒಂಬತ್ತನೇ ದಿನದ ವಿಶೇಷ ಸಂಪ್ರದಾಯದಂತೆ ಬಾಬಯ್ಯನ ಆರಾಧನೆ ನಡೆಯಿತು. ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರೆ, ಹಿಂದೂ ಸಮುದಾಯದ ಭಕ್ತರು ಬಾಬಯ್ಯನಿಗೆ ಸಕ್ಕರೆ ಮತ್ತು ಕಡಲೆ ಸಮರ್ಪಿಸಿ, ಬಳಿಕ ಕೆಂಡದ ಗುಂಡಿಗೆ ಉಪ್ಪು ಹಾಗೂ ಮೆಣಸು ಅರ್ಪಿಸಿದರು. ಹೀಗೆ ಸಮರ್ಪಣೆ ಮಾಡಿದರೆ ಮನೋಕಾಮನೆಗಳು ಈಡೇರುತ್ತವೆ ಎಂಬ ನಂಬಿಕೆ ಇದ್ದು, ಈ ಸಂಪ್ರದಾಯ ಹಲವು ವರ್ಷಗಳಿಂದ ಎರಡೂ ಸಮುದಾಯಗಳ ಸಹಭಾಗಿತ್ವದಲ್ಲಿ ನಡೆಯುತ್ತಿರುವುದು ಈ ಹಬ್ಬದ ವಿಶೇಷವಾಗಿದೆ.ಬಾಬಯ್ಯನ ದರ್ಶನ ಪಡೆದು ಕೆಂಡದ ಗುಂಡಿಗೆ ಉಪ್ಪು ಮತ್ತು ಮೆಣಸು ಸಮರ್ಪಿಸಿದ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಯಾವುದೇ ಧರ್ಮದ ಹಬ್ಬವನ್ನು ಆ ಧರ್ಮದವರು ಮಾತ್ರ ಆಚರಿಸುವುದಕ್ಕಿಂತ ಇತರೆ ಸಮುದಾಯದವರೂ ಭಾಗಿಯಾಗುವ ಮೂಲಕ ಆಚರಿಸಿದರೆ ಅದರ ಮಹತ್ವ ಮತ್ತಷ್ಟು ಹೆಚ್ಚುತ್ತದೆ. ಅಂತಹ ಆಚರಣೆಗಳು ಸಮಾಜದಲ್ಲಿ ಪರಸ್ಪರ ವಿಶ್ವಾಸ, ಸೌಹಾರ್ದತೆ ಹಾಗೂ ಸಾಮರಸ್ಯವನ್ನು ಬಲಪಡಿಸುತ್ತವೆ. ಮೊಹರಂ ಆಚರಣೆ ಈ ನಿಟ್ಟಿನಲ್ಲಿ ಮಾದರಿಯಾಗಿದ್ದು, ಧರ್ಮಗಳ ನಡುವೆ ಬಾಂಧವ್ಯವನ್ನು ಬೆಸೆಯುವ ಉತ್ಸವವಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಎಂ. ಸಮೀವುಲ್ಲಾ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸಿಕಂದರ್, ಸುನ್ನಿ ಮುಸ್ಲಿಂ ಜಮಾತ್ ಸಮಿತಿ ಅಧ್ಯಕ್ಷ ಅಫ್ರೋಜ್ ಪಾಷಾ, ಉಪಾಧ್ಯಕ್ಷ ಸೈಯದ್ ದಸ್ತಿಗೀರ್, ಕಾರ್ಯದರ್ಶಿ ಮಹಮ್ಮದ್ ಶರೀಫ್, ನಗರಸಭೆಯ ಮಾಜಿ ಸದಸ್ಯರಾದ ಅಬ್ದುಲ್ ಜಮೀಲ್, ಯೂನಸ್, ರೋಷನ್, ಮುಸ್ಲಿಂ ಸಮಾಜದ ಮುಖಂಡರಾದ ಟಿಪ್ಪು, ಮೊಯ್ದೀನ್ ಪಾಷಾ, ಮನ್ಸೂರ್ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.ಮೊಹರಂ ಆಚರಣೆಯಲ್ಲಿ ಅರಳಿದ ಸೌಹಾರ್ದತೆ
ಮೊಹರಂ ಆಚರಣೆಯ ಒಂಬತ್ತನೇ ದಿನದ ವಿಶೇಷ ಸಂಪ್ರದಾಯದಂತೆ ಬಾಬಯ್ಯನ ಆರಾಧನೆ ನಡೆಯಿತು. ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರೆ, ಹಿಂದೂ ಸಮುದಾಯದ ಭಕ್ತರು ಬಾಬಯ್ಯನಿಗೆ ಸಕ್ಕರೆ ಮತ್ತು ಕಡಲೆ ಸಮರ್ಪಿಸಿ, ಬಳಿಕ ಕೆಂಡದ ಗುಂಡಿಗೆ ಉಪ್ಪು ಹಾಗೂ ಮೆಣಸು ಅರ್ಪಿಸಿದರು. ಹೀಗೆ ಸಮರ್ಪಣೆ ಮಾಡಿದರೆ ಮನೋಕಾಮನೆಗಳು ಈಡೇರುತ್ತವೆ ಎಂಬ ನಂಬಿಕೆ ಇದ್ದು, ಈ ಸಂಪ್ರದಾಯ ಹಲವು ವರ್ಷಗಳಿಂದ ಎರಡೂ ಸಮುದಾಯಗಳ ಸಹಭಾಗಿತ್ವದಲ್ಲಿ ನಡೆಯುತ್ತಿರುವುದು ಈ ಹಬ್ಬದ ವಿಶೇಷವಾಗಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.