ಚುನಾವಣೆ ವೆಚ್ಚ ಮೀರಿದ್ರೆ ಕಠಿಣ ಕ್ರಮ

| Published : Apr 25 2024, 01:13 AM IST

ಸಾರಾಂಶ

ಕಾನೂನುಬದ್ಧವಾಗಿ ಮಾತ್ರ ಖರ್ಚು ಮಾಡಲು ಈ ಬಾರಿ ₹95 ಲಕ್ಷದವರೆಗೂ ಅನುಮೋದನೆ ಇದೆ. ಇದನ್ನು ಹೊರತುಪಡಿಸಿದ ಸಂಶಯಾಸ್ಪದ ವಹಿವಾಟುಗಳು ಕಂಡುಬಂದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯಪುರ ಮೀಸಲು ಲೋಕಸಭಾ ಚುನಾವಣೆಯ ಸಾಮಾನ್ಯ ವೀಕ್ಷಕ ಡಾ.ರತನಕನ್ವರ ಎಚ್.ಗಡವಿಚರಣ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕಾನೂನುಬದ್ಧವಾಗಿ ಮಾತ್ರ ಖರ್ಚು ಮಾಡಲು ಈ ಬಾರಿ ₹95 ಲಕ್ಷದವರೆಗೂ ಅನುಮೋದನೆ ಇದೆ. ಇದನ್ನು ಹೊರತುಪಡಿಸಿದ ಸಂಶಯಾಸ್ಪದ ವಹಿವಾಟುಗಳು ಕಂಡುಬಂದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯಪುರ ಮೀಸಲು ಲೋಕಸಭಾ ಚುನಾವಣೆಯ ಸಾಮಾನ್ಯ ವೀಕ್ಷಕ ಡಾ.ರತನಕನ್ವರ ಎಚ್.ಗಡವಿಚರಣ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಮತ್ತು ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಚುನಾವಣೆಗೆ ದಿನಾಂಕ ಘೋಷಣೆಯಾದ ದಿನದಿಂದ ಫಲಿತಾಂಶ ಪ್ರಕಟವಾಗುವವರೆಗೂ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಪಾರದರ್ಶಕ ಆಗಿರಬೇಕಾಗಿದ್ದು, ನೀವು ನೇಮಕ ಮಾಡಿಕೊಳ್ಳುವ ಏಜೆಂಟರು ಚುನಾವಣಾ ಆಯೋಗದ ಮಾರ್ಗಸೂಚಿಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೂಪದ ನಿರ್ದಿಷ್ಟವಾದ ದೂರು ಅಥವಾ ಸಮಸ್ಯೆ ಇದ್ದಲ್ಲಿ ಅದನ್ನು ಚುನಾವಣಾ ವೀಕ್ಷಕರ ಗಮನಕ್ಕೆ ತರಬೇಕು ಎಂದರು.

ವೆಚ್ಚ ವೀಕ್ಷಕ ಅನುಪಕುಮಾರ್ ಮಾತನಾಡಿ, ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿಯೊಬ್ಬ ಅಭ್ಯರ್ಥಿಯು ಈ ಚುನಾವಣೆಗಾಗಿಯೇ ಅಭ್ಯರ್ಥಿ ಹೆಸರಿನಲ್ಲಿ ಪ್ರತ್ಯೇಕವಾದ ಬ್ಯಾಂಕ್ ಖಾತೆಯನ್ನು ತೆರೆಯಬೇಕಾಗುತ್ತದೆ. ಚುನಾವಣಾ ಆಯೋಗವು ಅಭ್ಯರ್ಥಿಗಳು ನಡೆಸುವ ಸಾರ್ವಜನಿಕ ಸಭೆಗಳು, ರ‍್ಯಾಲಿ, ಬ್ಯಾನರ್ ಸೇರಿದಂತೆ ಚುನಾವಣಾ ಪ್ರಚಾರಕ್ಕೆ

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯಾಗಿರುವ ಟಿ.ಭೂಬಾಲನ್ ಮಾತನಾಡಿ, ಮತಯಾಚನೆಯ ಜಾಹೀರಾತುಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಬೇಕಾದಲ್ಲಿ ಮತ್ತು ಕರಪತ್ರಗಳನ್ನು ಮುದ್ರಿಸಲು ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಪಕ್ಷದ ಬಾವುಟಗಳನ್ನು ರಾಜಕೀಯ ಪಕ್ಷಗಳ ಕಾರ್ಯಾಲಯದ ಕಚೇರಿ ಹೊರತುಪಡಿಸಿ ಯಾರ ಮನೆಯ ಮೇಲೆ ಪ್ರದರ್ಶಿಸಲು ಅವಕಾಶವಿರುವುದಿಲ್ಲ. ಈ ಎಲ್ಲ ಮಾರ್ಗಸೂಚಿಗಳನ್ನು ಎಲ್ಲ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಅನುಸರಿಸಬೇಕಾಗಿರುತ್ತದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಾಣೆ ಮಾತನಾಡಿ, ಮೆರವಣಿಗೆಯನ್ನು ಸಂಘಟಿಸುವ ಪಕ್ಷ ಅಥವಾ ಅಭ್ಯರ್ಥಿ ಮುಂಚಿತವಾಗಿಯೇ ಸ್ಥಳೀಯ ಪೊಲೀಸ್ ಅಧಿಕಾರಿಗೆ ಮೆರವಣಿಗೆಯ ದಿನಾಂಕ, ಸಮಯ, ಅದು ಸಾಗುವ ಮಾರ್ಗ, ಕೊನೆಗೊಳ್ಳುವ ಸಮಯ ಇತ್ಯಾದಿಯಾಗಿ ತಿಳಿಸತಕ್ಕದ್ದು. ಯಾವುದೇ ರಾಜಕೀಯ ಪಕ್ಷವಾಗಿರಲಿ, ಅಭ್ಯರ್ಥಿಯಾಗಿರಲಿ ಕಾನೂನನ್ನು ಉಲ್ಲಂಘನೆ ಮಾಡುವಂತಿಲ್ಲ, ಎಲ್ಲರೂ ನಿಯಮಗಳನ್ನು ಪಾಲಿಸಬೇಕು. ಮತದಾನ ಮತ್ತು ಮತ ಏಣಿಕೆ ದಿನದಂದು ವಾಹನಗಳ ಸಂಚಾರದ ಮೇಲೆ ವಿಧಿಸುವ ನಿರ್ಭಂದಗಳನ್ನು ಪಾಲಿಸುವಲ್ಲಿ ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಶಂಕರಗೌದ ಸೋಮನಾಳ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ರಾಜಕೀಯ ಪಕ್ಷಗಳ ಮತ್ತು ಅಭ್ಯರ್ಥಿಗಳಿಗೆ ಮಾದರಿ ನಡತೆ ಸಂಹಿತೆ ಕುರಿತು ತಿಳಿವಳಿಕೆ ನೀಡಿದರು.

ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ ಸೇರಿದಂತೆ ಇತರರು ಇದ್ದರು.

---

ಕೋಟ್‌

ಭಾರತ ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಈ ಕುರಿತು ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಮತ್ತು ಪೋಲಿಂಗ್ ಏಜೆಂಟರಿಗೆ ಗಂಭೀರವಾಗಿ ತಿಳಿವಳಿಕೆ ನೀಡುವ ಕಾರ್ಯವಾಗಬೇಕು.

-ಡಾ.ರತನಕನ್ವರ ಹೆಚ್.ಗಡವಿಚರಣ, ವಿಜಯಪುರ ಮೀಸಲು ಲೋಕಸಭಾ ಚುನಾವಣೆಯ ಸಾಮಾನ್ಯ ವೀಕ್ಷಕ