ಕಲೆ, ಸಂಸ್ಕೃತಿ, ಸಂಗೀತದ ಸುಗ್ಗಿ ಸಂಕಲ್ಪ ಉತ್ಸವ

| Published : Oct 28 2025, 12:44 AM IST

ಸಾರಾಂಶ

ಸಾಂಸ್ಕೃತಿಕ ಹಬ್ಬ ಎಂದೇ ರಾಜ್ಯಾದ್ಯಂತ ಪರಿಚಿತವಾಗಿರುವ "ಸಂಕಲ್ಪ ಉತ್ಸವ-೨೦೨೫ " ಇದೇ ಅ. ೩೧ರಿಂದ ನ. ೪ರ ವರೆಗೆ ಪಟ್ಟಣದ ಗಾಂಧಿ ಕುಟೀರದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ಯಲ್ಲಾಪುರದ ಗಾಂಧೀ ಕುಟೀರದಲ್ಲಿ ಅ.31ರಿಂದ ನ.4ರ ತನಕ ಕಾರ್ಯಕ್ರಮ

ಶಂಕರ ಭಟ್ಟ ತಾರೀಮಕ್ಕಿ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಸಾಂಸ್ಕೃತಿಕ ಹಬ್ಬ ಎಂದೇ ರಾಜ್ಯಾದ್ಯಂತ ಪರಿಚಿತವಾಗಿರುವ "ಸಂಕಲ್ಪ ಉತ್ಸವ-೨೦೨೫ " ಇದೇ ಅ. ೩೧ರಿಂದ ನ. ೪ರ ವರೆಗೆ ಪಟ್ಟಣದ ಗಾಂಧಿ ಕುಟೀರದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ನಾಡಿನಲ್ಲಿಯೇ ೩೯ ವರ್ಷಗಳ ಸುದೀರ್ಘ ಕಾಲ ನಿರಂತರವಾಗಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿ, ಅದರಲ್ಲೂ ೫, ೭, ೯, ೧೫ ಇಷ್ಟು ದಿನಗಳ ಕಾಲ ಉತ್ಸವ ನಡೆಸಿಕೊಂಡು ಬಂದಿರುವುದು ತೀರಾ ಅಪರೂಪ. ಆ ನೆಲೆಯಲ್ಲಿ ಯಲ್ಲಾಪುರದ ಸಂಕಲ್ಪ ಸಂಸ್ಥೆ ೪ ದಶಮಾನವನ್ನು ತಲುಪುತ್ತಿರುವ ಯಶಸ್ಸಿನೊಂದಿಗೆ, ಸಮಾಜದ ಪರಂಪರೆಯ ಮೌಲ್ಯವನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎನ್ನುವುದಕ್ಕೆ ಸಂಕಲ್ಪ ಉತ್ಸವ ನಿದರ್ಶನ.

ಇಲ್ಲಿ ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಯಕ್ಷಗಾನ, ತಾಳಮದ್ದಳೆ, ಗಮಕ ಈ ಎಲ್ಲ ಕಲೆಗಳ ಪ್ರದರ್ಶನವನ್ನು ಮಾಡುತ್ತಾ ಇಂದು ನಮ್ಮ ಯುವಜನಾಂಗವನ್ನು ಮುನ್ನಡೆಸುತ್ತಿದೆ. ಸಂಸ್ಕಾರದಿಂದ ವಿಮುಖವಾಗುತ್ತಿರುವ ಕಾಲಘಟ್ಟದಲ್ಲಿ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವ ಮಹಾಕಾರ್ಯ ಮಾಡುತ್ತಿದೆ. ಈ ಮೂಲಕ ರಾಜ್ಯವ್ಯಾಪಿ ತಲುಪಿಸುವ ಕಾರ್ಯ ಪ್ರಮೋದ ಹೆಗಡೆ ಮತ್ತು ಅವರ ತಂಡ ಮಾಡುತ್ತಿರುವುದು ಶ್ಲಾಘನೀಯ. ಹಾಗಾಗಿ ಆವರಿಗೆ ಸಾಂಸ್ಕೃತಿಕ ರೂವಾರಿ ಎಂಬ ಖ್ಯಾತಿಯೂ ಇದೆ. ಸಂಘ-ಸಂಸ್ಥೆಗಳ, ಕಲಾಪೋಷಕರ ಸಹಕಾರದಲ್ಲಿ ಸರ್ಕಾರದ ಬೆಂಬಲವಿಲ್ಲದೇ ಇಂತಹ ಉತ್ಸವ ನಡೆಸುತ್ತಿರುವುದು ವಿಶೇಷವಾಗಿದೆ.

ಯತಿರೇವಣ್ಯರು ಉಪಸ್ಥಿತಿ:

ಪ್ರತಿವರ್ಷದಂತೆ ಈ ವರ್ಷವೂ ಪೂಜ್ಯ ಸ್ವರ್ಣವಲ್ಲೀ ಶ್ರೀಗಳ ಅಮೃತ ಹಸ್ತದಿಂದ ಅ.೩೧ರಂದು ಉತ್ಸವ ಉದ್ಘಾಟನೆಯಾಗಲಿದೆ. ಸಮಾರೋಪದಲ್ಲಿ ರಾಮಚಂದ್ರಾಪುರ ಮಠದ ಶ್ರೀಗಳು ಸಾನ್ನಿಧ್ಯ ವಹಿಸುವರು. ಅಲ್ಲದೇ ಐವರು ಯತಿರೇವಣ್ಯರು ಉಪಸ್ಥಿತಿ ಈ ವರ್ಷದ ಸಂಕಲ್ಪ ಉತ್ಸವಕ್ಕೆ ವಿಶೇಷ ಚೈತನ್ಯ ನೀಡುವರು. ಪ್ರಮೋದ ಹೆಗಡೆ ಸಂಕಲ್ಪದ ತಂಡವನ್ನೇ ಕಟ್ಟಿ ಬೆಳೆಸಿದ್ದಾರೆ. ಕಳೆದ ಹಲವು ವರ್ಷಗಳಿಂದ ತೆರೆಮರೆಯಲ್ಲಿ ನಿಂತು ಅವರು ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ.

ಸಂಕಲ್ಪ ಉತ್ಸವದಲ್ಲಿ ನಾಡಿನ ಯತಿವರೇಣ್ಯರು, ಮುಖ್ಯಮಂತ್ರಿಗಳು, ಮಂತ್ರಿಗಳು, ಸಿನೆಮಾ ನಟರು, ಶಾಸಕರು, ಸಾಹಿತ್ಯ ಕ್ಷೇತ್ರದ ಖ್ಯಾತನಾಮರು, ಮಾಧ್ಯಮ ಕ್ಷೇತ್ರದ ಹಿರಿಯ ಪತ್ರಕರ್ತರು, ಯಕ್ಷಗಾನ ಕಲಾವಿದರು ಹೀಗೆ ಎಲ್ಲ ಕ್ಷೇತ್ರದ ಸಾಧಕರನ್ನು ಕರೆಸಿ, ಸಂಕಲ್ಪ ಉತ್ಸವದ ಮೂಲಕ ಗುರುತಿಸಿ, ಗೌರವಿಸಿ, ಜಿಲ್ಲೆಗೆ ಒಂದು ಹೊಸತನ ಕಲ್ಪಿಸಿಕೊಡಲಾಗುತ್ತಿದೆ. ಅಲ್ಲದೇ, ವಿವಿಧ ಕ್ಷೇತ್ರಗಳಲ್ಲಿ ಸಮಾಜದಲ್ಲಿ ಆದರ್ಶಪ್ರಾಯರಾಗಿ ಗುರುತಿಸಿಕೊಂಡ ಹಿರಿಯರನ್ನು ಗೌರವಿಸುವ ಸಂಪ್ರದಾಯ ಕೂಡ ಮಹತ್ವದ್ದಾಗಿದೆ.