ಕೂಲಿಕಾರರ ಕೊರತೆ ನೀಗಿಸುವ ಬೆಳೆ ಕಟಾವು ಯಂತ್ರ

| Published : Dec 08 2024, 01:15 AM IST

ಸಾರಾಂಶ

ಮುಂಗಾರು ಹಂಗಾಮಿನಲ್ಲಿ ಬೆಳೆಯಲಾದ ತೊಗರಿ ಸೇರಿದಂತೆ ವಿವಿಧ ಬೆಳೆ ಕಟಾವು ಮಾಡಲು ಅನ್ನದಾತರು ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಬೆಳೆ ಕಟಾವು ಯಂತ್ರಗಳ ಮೊರೆ ಹೋಗಿದ್ದಾರೆ.

ಹಣ ಮತ್ತು ಸಮಯ ಎರಡೂ ಉಳಿತಾಯ । ಕಡಿಮೆಯಾದ ಕೂಲಿ ಕಾರ್ಮಿಕರ ಸಂಖ್ಯೆ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಮುಂಗಾರು ಹಂಗಾಮಿನಲ್ಲಿ ಬೆಳೆಯಲಾದ ತೊಗರಿ ಸೇರಿದಂತೆ ವಿವಿಧ ಬೆಳೆ ಕಟಾವು ಮಾಡಲು ಅನ್ನದಾತರು ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಬೆಳೆ ಕಟಾವು ಯಂತ್ರಗಳ ಮೊರೆ ಹೋಗಿದ್ದಾರೆ.

ಪಟ್ಟಣ ಹಾಗೂ ತಾಲೂಕಿನ ದೋಟಿಹಾಳ, ಕೇಸೂರು, ಮುದೇನೂರು, ಹನುಮನಾಳ, ಹನುಮಸಾಗರ ಸೇರಿದಂತೆ ಅನೇಕ ಗ್ರಾಮಗಳ ಜಮೀನಿನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ಈ ಸಮಸ್ಯೆ ನೀಗಿಸಲು ರೈತಾಪಿ ವರ್ಗವು ಯಂತ್ರಗಳ ಮೂಲಕ ಬೆಳೆ ಕಟಾವು ಮಾಡುತ್ತಿದ್ದಾರೆ.

ವರ್ಷದಿಂದ ವರ್ಷಕ್ಕೆ ತಾಲೂಕಿನಲ್ಲಿ ಕೂಲಿ ಕಾರ್ಮಿಕರ ಕೊರತೆಯು ಹೆಚ್ಚಾಗುತ್ತಿದೆ. ತೊಗರಿ, ಮೆಕ್ಕೆಜೋಳ ಸೇರಿದಂತೆ ಅನೇಕ ಬೆಳೆ ಬೆಳೆದಿರುವ ರೈತರು ಕಟಾವು ಮಾಡಲು ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಹೆಚ್ಚಿನ ಕೂಲಿ ನೀಡಿದರೂ ಸಹಿತ ಬೆಳೆ ಕಟಾವು ಮಾಡಲು ಕೂಲಿ ಕಾರ್ಮಿಕರು ಸಿಗುವುದಿಲ್ಲ ಎಂಬುದು ರೈತರ ಅಳಲು.

ತೊಗರಿ ಕಟಾವಿಗೆ ಯಂತ್ರಗಳು:

ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಕೆಲವು ರೈತರು ಗೋಕಾಕ, ಸೋಲಾಪೂರ. ಪಂಜಾಬ್‌ ಸೇರಿ ವಿವಿಧ ಭಾಗಗಳಿಂದ ತಾಲೂಕಿಗೆ ಬಂದಿರುವ ತೊಗರಿ ಕಟಾವು ಮಾಡುವ ಯಂತ್ರ ಬಳಸುತ್ತಿದ್ದಾರೆ. ಹತ್ತಾರು ಕೂಲಿ ಕಾರ್ಮಿಕರು ಎರಡು ದಿನ ಮಾಡುವ ಕೆಲಸವನ್ನು ಈ ಯಂತ್ರವು ಕೆಲವು ಗಂಟೆಗಳಲ್ಲಿ ಮಾಡುತ್ತದೆ. ಹಣ ಮತ್ತು ಸಮಯ ಎರಡೂ ಉಳಿತಾಯವಾಗುತ್ತದೆ.

ಒಂದು ಬೆಳೆ ಕಟಾವು ಯಂತ್ರವೂ ಸುಮಾರು 14 ಕ್ವಿಂಟಲ್ ತೊಗರಿ ಬೆಳೆಯನ್ನು ಶೇಖರಣೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ. ಒಂದು ಎಕರೆಗೆ ಕೇವಲ ₹1200 ಪಡೆದುಕೊಳ್ಳುವ ಮೂಲಕ ಉತ್ತಮವಾದ ಕಾರ್ಯ ಮಾಡುತ್ತಿದ್ದು ರೈತರಿಗೆ ಒಳಿತಾಗಿದೆ.