ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದಲ್ಲಿ ದೇವರಾಜ ಅರಸು ನಂತರ ಹೆಚ್ಚು ಅ‍ವದಿಗೆ ಸಿಎಂ ಆದವನು ತಾನೇ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸಿ, 21 ಲಕ್ಷ ಎಕರೆ ಭೂಮಿಯನ್ನು ಬಡವರಿಗೆ ಹಂಚಿದ ಅರಸುರಂತಹ ಯಾವುದಾದರೂ ಒಂದೇ ಒಂದು ಕೆಲಸ ಮಾಡಿದ್ದಾರಾ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ ಮುಖ್ಯಮಂತ್ರಿಗೆ ಪ್ರಶ್ನಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತನಗೆ ತಾನೇ ಅನ್ನದ ರಾಮಯ್ಯ ಅಂತಾ ಹೇಳಿಕೊಂಡ ಸಿದ್ದರಾಮಯ್ಯ ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿಯನ್ನು ತಾನೇ ಕೊಡುತ್ತಿರುವುದಾಗಿ ಸುಳ್ಳು ಹೇಳುತ್ತಿದ್ದು, ಸಿದ್ದರಾಮಯ್ಯ ಯಾವ ಅನ್ನದ ರಾಮಯ್ಯ ಎಂದರು.

ದಾವಣಗೆರೆಯಲ್ಲಿ ಅಹಿಂದವನ್ನು ಸಿದ್ದರಾಮಯ್ಯ ಸಾಯಿಸಿದ್ದಾರೆ. ಜಿಲ್ಲೆಯ ಅಹಿಂದ ವರ್ಗದವರು ಸಿದ್ದರಾಮಯ್ಯ ಬಗ್ಗೆ ಸದಾ ಎಚ್ಚರ, ಜಾಗ್ರತೆಯಿಂದಿದ್ದಾರೆ. ಉಪಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಅಹಿಂದ ವರ್ಗದ ಜನರು ತಕ್ಕ ಪಾಠ ಕಲಿಸಲಿದ್ದಾರೆ. ತಾನು ಅಹಿಂದ ನಾಯಕನೆನ್ನುವ ಸಿದ್ದರಾಮಯ್ಯ ಅದೇ ವರ್ಗಗಳಿಗೆ ಹೇಳಿಕೊಳ್ಳುವಂತಹ ಕೆಲಸ ಮಾಡಿಲ್ಲ. ಅಹಿಂದ ಪರ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಟೀಕಿಸಿದರು.

ಸಿದ್ದರಾಮಯ್ಯ ತಮ್ಮ ಅವದಿಯಲ್ಲಿ 5.5 ಲಕ್ಷ ಕೋಟಿ ಸಾಲ ಮಾಡಿದ್ದು, ಸಾಲದ ರಾಮಯ್ಯನಾಗಿದ್ದಾರೆ. ಪ್ರಧಾನಿಗೆ ಏಕವಚನದಲ್ಲಿ ಮಾತನಾಡುವ ಅವರೊಬ್ಬ ದುರಂಹಕಾರಿ. ಬಿಜೆಪಿಯವರು ಸುಳ್ಳು ಹೇಳುತ್ತಾರೆನ್ನುವ ಸಿದ್ಧರಾಮಯ್ಯ ಸ್ವತಃ ಸುಳ್ಳು ಹೇಳುತ್ತಿದ್ದಾರೆ. ಒಮ್ಮೆ ಬೆಂಗಳೂರಿನಿಂದ ಮೈಸೂರಿಗೆ ಸಿಎಂ ವಿಶೇಷ ವಿಮಾನದಲ್ಲಿ ಬಂದು ಹೋದರೆ 6.5 ಲಕ್ಷ ರು. ತೆರಿಗೆ ಹಣ ಹೋಗುತ್ತದೆ. ಇನ್ಫೋಸಿಸ್ ನಾರಾಯಣ ಮೂರ್ತಿ, ಸುಧಾ ನಾರಾಯಣ ಮೂರ್ತಿ ಸಾಮಾನ್ಯ ವಿಮಾನದಲ್ಲಿ ಸಂಚರಿಸುತ್ತಾರೆ. ಆದರೆ, ಸಿದ್ದರಾಮಯ್ಯಗೆ ವಿಶೇಷ ವಿಮಾನವೇ ಬೇಕು. ಜನರ ತೆರಿಗೆ ಹಣದಲ್ಲಿ ಮೋಜು ನಡೆಸಿದ್ದಾರೆ ಎಂದು ಆರೋಪಿಸಿದರು.


ದಾವಣಗೆರೆ ದಕ್ಷಿಣ ಮತದಾರರು ಬಿಜೆಪಿಯ ಶ್ರೀನಿವಾಸ ದಾಸಕರಿಯಪ್ಪಗೆ ಗೆಲ್ಲಿಸಲು ತೀರ್ಮಾನ ಮಾಡಿದ್ದಾರೆ. ಎಲ್ಲಾ ಕಡೆ ಶ್ರೀನಿವಾಸ ಗೆಲುವಿನ ವಾತಾವರಣ ನಿರ್ಮಾಣವಾಗುತ್ತಿದೆ. ಈ ಕ್ಷೇತ್ರದ ಜನರು ಬಲವಾದ, ಚರಿತ್ರಾರ್ಹ ತೀರ್ಮಾನ ಕೈಗೊಂಡಿದ್ದಾರೆ. ಗಿರಿಜನ ಕುಟುಂಬಕ್ಕೆ ಸೇರಿದ ಸಾಮಾನ್ಯ ಯುವಕ ಶ್ರೀನಿವಾಸನ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ 136 ಕ್ಷೇತ್ರ ಗೆಲ್ಲಲು ಅಲ್ಪಸಂಖ್ಯಾತರೆ ಕಾರಣ. ಆದರೂ, ದಾವಣಗೆರೆಯಲ್ಲಿ ಮುಸ್ಲಿಮರಿಗೆ ಒಂದೇ ಒಂದು ಟಿಕೆಟ್ ಕೊಡಲು ಕಾಂಗ್ರೆಸ್ಸಿಗೆ ಆಗಿಲ್ಲ ಎಂದು ದೂರಿದರು.

ದುರಂಹಕಾರಿ ಸಿದ್ದರಾಮಯ್ಯ ಈಗ ಅಹಿಂದ ನಾಯಕನಾಗಿ ಉಳಿದಿಲ್ಲ. ಇಲ್ಲಿ ತಾತ ಆಯಿತು, ಈಗ ಮೊಮ್ಮಗ. ಏನ್ರಿ ಇದು? ಎಲ್ಲಿದೆ ಪ್ರಜಾಪ್ರಭುತ್ವ? ದಕ್ಷಿಣ ಉಪ ಚುನಾವಣೆಯಲ್ಲಿ ಅಹಿಂದವನ್ನೇ ಸಿದ್ದರಾಮಯ್ಯ ಹರಾಜಿಗೆ ಹಾಕಿದ್ದಾರೆ. ಓರ್ವ ಮುಖ್ಯಮಂತ್ರಿಯಾದವರು ಒಂದು ಕುಟುಂಬದ ಗುಲಾಮರಂತೆ ವರ್ತಿಸಿದ್ದಾರೆ. ಇಂತಹ ಕುಟುಂಬ ರಾಜಕಾರಣ ಕೊನೆಯಾಗಬೇಕು. ಎಲ್ಲಿಯೂ ಕುಟುಂಬ ರಾಜಕಾರಣವಾಗಬಾರದು. ಅಹಿಂದ ಇಲ್ಲಿ ಸತ್ತು ಹೋಗಿದ್ದು, ಹಿಂದೆಲ್ಲಾ ಕ್ಷೇತ್ರದಲ್ಲಿ ಬೇರೆ ಬೇರೆ ಸಮುದಾಯಗಳ ಶಾಸಕರಿರುತ್ತಿದ್ದರು. ಮಾಯಕೊಂಡ, ಜಗಳೂರು ಬಿಟ್ಟರೆ ಎಲ್ಲಾ ಕ್ಷೇತ್ರದಲ್ಲೂ ಒಂದೇ ಸಮುದಾಯದವರಿದ್ದಾರೆ ಎಂದು ಹೇಳಿದರು.

ಜೆಡಿಎಸ್ ಮುಖಂಡರಾದ ಎಚ್.ಸಿ.ಗುಡ್ಡಪ್ಪ, ಚಂದ್ರು ಬಸವಂತಪ್ಪ, ಎಚ್.ಸಿ.ಪಾಟೀಲ, ಮಲ್ಲಾಪುರ ದೇವರಾಜ ಇತರರು ಇದ್ದರು. ನಂತರ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಎಚ್.ವಿಶ್ವನಾಥ ಬಿಜೆಪಿ ಮಾಜಿ ಸಚಿವ ಬಿ.ಶ್ರೀರಾಮುಲು, ಶಿವನಗೌಡ ನಾಯಕ, ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ಜೊತೆ ಪಾದಯಾತ್ರೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಪರ ಪ್ರಚಾರ ನಡೆಸಿದರು.

ಕೃತಜ್ಞತೆ ಇಲ್ಲದ ಸಾರ್ವಜನಿಕ ಜೀವನ, ರಾಜಕಾರಣ, ನಾಯಕ ಇರಲೇಬಾರದು. ಸಿದ್ದರಾಮಯ್ಯನ ಮೇಲೆ ನನಗೆ ಯಾವುದೇ ವೈಯಕ್ತಿಕ ವಿರೋಧವೂ ಇಲ್ಲ. ನಾವಿಬ್ಬರೂ ಫ್ರೆಂಡ್ಸ್. ಇಬ್ಬರೂ ಜೊತೆಯಾಗಿಯೇ ಲಾಯರ್ ಆದವರು. ಸಿದ್ದರಾಮಯ್ಯ ನನ್ನ ಆಸ್ತಿಯನ್ನು, ನಾನು ಅವರ ಆಸ್ತಿಯನ್ನು ಬರೆಸಿಕೊಂಡಿಲ್ಲ. ಒಬ್ಬ ಮುಖ್ಯಮಂತ್ರಿಯಾಗಿ ಅವರ ನಡವಳಿಕೆ ಬಗ್ಗೆ ಮಾತನಾಡಿದ್ದೇನೆ. ವೈಯಕ್ತಿಕವಾಗಿ ಅಲ್ಲ.

ಎಚ್.ವಿಶ್ವನಾಥ ವಿಪ ಸದಸ್ಯ.