ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಬೆಳಗಾವಿ ಮಹಾನಗರ ಪಾಲಿಕೆ ಸಭೆಯಲ್ಲಿ ಅಂಗೀಕರಿಸುವಂತೆ ಕನ್ನಡಪರ ಸಂಘಟನೆಗಳು ಕಳೆದ ಹಲವು ತಿಂಗಳಿಂದ ನಿರಂತರ ಹೋರಾಟ ನಡೆಸುತ್ತಿವೆ. ಪ್ರತಿಭಟನೆಗಳು, ಧರಣಿಗಳು, ಮನವಿಗಳು, ಜಾಗೃತಿ ಸಭೆಗಳು, ಪ್ರಾದೇಶಿಕ ಆಯುಕ್ತರಿಗೆ ಪ್ರತಿದಿನ ಮನವಿ ಸಲ್ಲಿಸುವ ಅಭಿಯಾನ ಸೇರಿದಂತೆ ವಿವಿಧ ರೀತಿಯಲ್ಲಿ ಒತ್ತಡ ಹೇರಿದರೂ ಈವರೆಗೆ ಪಾಲಿಕೆಯಲ್ಲಿ ನಿರ್ಣಯ ಮಂಡನೆಯಾಗಿಲ್ಲ. ಇದೀಗ ಮೇಯರ್ ಪ್ರೀತಿ ಕಾಮಕರ ಅವರ ಪತ್ರ ಹೊಸ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಜೂ.12ರಂದು ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿಯವರಿಗೆ ಬರೆದ ಪತ್ರದಲ್ಲಿ, ಕನ್ನಡಪರ ಸಂಘಟನೆಗಳು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ವಿಷಯವನ್ನು ಪಾಲಿಕೆ ಸಭೆಯಲ್ಲಿ ಠರಾವಾಗಿ ಮಂಡಿಸುವಂತೆ ಮನವಿ ಮಾಡಿರುವುದಾಗಿ ಮೇಯರ್ ಉಲ್ಲೇಖಿಸಿದ್ದಾರೆ. ಆದರೆ, ಈ ಕುರಿತು ಕಾನೂನು ಅಭಿಪ್ರಾಯ ಪಡೆಯಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ಜೊತೆಗೆ, ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿರುವುದರಿಂದ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಿದೆ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.ಇಲ್ಲಿಯೇ ಪ್ರಮುಖ ಪ್ರಶ್ನೆ ಉದ್ಭವಿಸಿದೆ. ಬೆಳಗಾವಿ ಕರ್ನಾಟಕದ ಭಾಗ ಎನ್ನುವುದು ಹೊಸದಾಗಿ ನಿರ್ಧರಿಸಬೇಕಾದ ವಿಚಾರವೇ? ಇದಕ್ಕಾಗಿ ಪ್ರತ್ಯೇಕ ಕಾನೂನು ಅಭಿಪ್ರಾಯ ಪಡೆಯುವ ಅಗತ್ಯವಿದೆಯೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. 1956ರ ರಾಜ್ಯಗಳ ಪುನರ್‌ರಚನೆ ಬಳಿಕ ಬೆಳಗಾವಿ ಜಿಲ್ಲೆ ಕರ್ನಾಟಕದ ಆಡಳಿತ ವ್ಯಾಪ್ತಿಗೆ ಸೇರಿದೆ. ಅಂದಿನಿಂದ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನ್ಯಾಯಾಂಗ, ಮಹಾನಗರ ಪಾಲಿಕೆ, ಶಿಕ್ಷಣ ಸಂಸ್ಥೆಗಳು, ತೆರಿಗೆ ವ್ಯವಸ್ಥೆ, ಚುನಾವಣೆಗಳು ಸೇರಿದಂತೆ ಎಲ್ಲ ಆಡಳಿತಾತ್ಮಕ ಚಟುವಟಿಕೆಗಳು ಕರ್ನಾಟಕ ಸರ್ಕಾರದ ಅಧೀನದಲ್ಲಿಯೇ ಕಾರ್ಯನಿರ್ವಹಿಸುತ್ತಿವೆ.2ನೇ ರಾಜಧಾನಿಯಾದ ಬೆಳಗಾವಿ:ಬೆಳಗಾವಿಯಲ್ಲಿ ಕರ್ನಾಟಕ ವಿಧಾನಮಂಡಲದ ಅಧಿವೇಶನಗಳು ನಡೆಯುತ್ತಿವೆ. ಸುವರ್ಣ ವಿಧಾನಸೌಧ ನಿರ್ಮಾಣವಾಗಿದೆ. ರಾಜ್ಯದ ಎರಡನೇ ರಾಜಧಾನಿ ಎಂಬ ಸ್ಥಾನಮಾನವೂ ದೊರೆತಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂತಹ ಸಂದರ್ಭದಲ್ಲಿ ಬೆಳಗಾವಿ ಕರ್ನಾಟಕದ ಭಾಗವೇ ಎಂಬುವುದನ್ನು ಮತ್ತೊಮ್ಮೆ ನಿರ್ಧರಿಸಬೇಕಾದ ಪ್ರಶ್ನೆಯೇ ಇಲ್ಲ ಎಂಬುದು ಕಾನೂನು ತಜ್ಞರು ಹಾಗೂ ಕನ್ನಡಪರ ಸಂಘಟನೆಗಳ ಅಭಿಪ್ರಾಯ.ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ ಸುಪ್ರೀಂನಲ್ಲಿ ವಿಚಾರಣೆಯಲ್ಲಿದೆ. ಆದರೆ, ಆ ವಿಚಾರಣೆಯ ಅರ್ಥ ಬೆಳಗಾವಿ ಕರ್ನಾಟಕದ ಆಡಳಿತ ವ್ಯಾಪ್ತಿಯಿಂದ ಹೊರಗಿದೆ ಎಂಬುದಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿದೆ ಎಂಬ ಕಾರಣಕ್ಕೆ ಸ್ಥಳೀಯ ಸಂಸ್ಥೆಗಳು ತಮ್ಮ ಸಾಂಕೇತಿಕ ಮತ್ತು ಭಾವನಾತ್ಮಕ ನಿಲುವನ್ನು ವ್ಯಕ್ತಪಡಿಸಬಾರದು ಎಂಬ ಯಾವುದೇ ಕಾನೂನು ನಿರ್ಬಂಧ ಇಲ್ಲ ಎಂದು ಕಾನೂನು ತಜ್ಞರು ಹೇಳುತ್ತಾರೆ. ದೇಶದ ವಿವಿಧ ಭಾಗಗಳಲ್ಲಿ ಸ್ಥಳೀಯ ಸಂಸ್ಥೆಗಳು ತಮ್ಮ ಅಭಿಪ್ರಾಯವನ್ನು ಗೊತ್ತುವಳಿಗಳ ಮೂಲಕ ದಾಖಲಿಸುವ ಪದ್ಧತಿ ಇದೆ. ಇಂತಹ ಗೊತ್ತುವಳಿಗಳು ಕಾನೂನುಬದ್ಧ ಗಡಿ ಬದಲಾವಣೆ ಮಾಡುವುದಿಲ್ಲ. ಅವು ಸಂಬಂಧಿತ ಸಂಸ್ಥೆಯ ನಿಲುವಿನ ದಾಖಲೆಯಾಗಿರುತ್ತವೆ.ಕಾನೂನು ಅಭಿಪ್ರಾಯದ ಅಗತ್ಯವೇನು?:


ಕನ್ನಡಪರ ಸಂಘಟನೆಗಳು ಈಗ ಇದೇ ಪ್ರಶ್ನೆಯನ್ನು ಕೇಳುತ್ತಿವೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಮಾತು ಸಂವಿಧಾನ ವಿರೋಧಿಯೂ ಅಲ್ಲ, ಕಾನೂನು ಬಾಹಿರವೂ ಅಲ್ಲ. ಇದು ಈಗಿರುವ ಆಡಳಿತಾತ್ಮಕ ವಾಸ್ತವವನ್ನು ಪುನರುಚ್ಚರಿಸುವ ಹೇಳಿಕೆಯಷ್ಟೇ. ಆದರೆ, ಸರ್ಕಾರಕ್ಕೆ ಪತ್ರ ಬರೆದು ಕಾನೂನು ಅಭಿಪ್ರಾಯ ಕೇಳುವುದು ಹಾಗೂ ನ್ಯಾಯಾಲಯದ ವಿಚಾರಣೆಯನ್ನು ಮುಂದಿಡುವುದು ನೇರ ನಿರ್ಧಾರ ತೆಗೆದುಕೊಳ್ಳುವುದನ್ನು ಮುಂದೂಡುವ ಪ್ರಯತ್ನದಂತೆ ಕಾಣುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹಿಂದೆ ಗಡಿ, ಭಾಷೆ ಮತ್ತು ಗುಂಪುಗಾರಿಕೆಯ ಆಧಾರದ ಮೇಲೆ ಚುನಾವಣೆಗಳು ನಡೆಯುತ್ತಿದ್ದವು. ಆದರೆ ಈಗ ರಾಜಕೀಯ ಪಕ್ಷಗಳ ಚಿಹ್ನೆ ಆಧಾರದ ಮೇಲೆ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಸ್ಪಷ್ಟ ಬಹುಮತ ಹೊಂದಿದೆ. ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿದೆ. ಮೇಯರ್ ಪ್ರೀತಿ ಕಾಮಕರ ಹಾಗೂ ಉಪಮೇಯರ್ ಹನುಮಂತ ಕೊಂಗಾಲಿ ಅವರು ಕನ್ನಡಿಗರಾಗಿರುವುದು ವಿಶೇಷ. ಆದ್ದರಿಂದ ಈ ಅವಧಿಯಲ್ಲೇ ಕನ್ನಡಪರ ಗೊತ್ತುವಳಿಯನ್ನು ಅಂಗೀಕರಿಸಬೇಕು ಎಂಬುದು ಕನ್ನಡಪರ ಸಂಘಟನೆಗಳ ಪ್ರಮುಖ ಒತ್ತಾಯವಾಗಿದೆ.ನಿರಂತರ ಹೋರಾಟ:

ಕಳೆದ ಮಾರ್ಚ್ 26ರಿಂದ ಕನ್ನಡಪರ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತಿವೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಗೊತ್ತುವಳಿಯನ್ನು ಅಂಗೀಕರಿಸುವಂತೆ ಒತ್ತಾಯಿಸಿ ಪ್ರತಿಭಟನೆಗಳು, ಮನವಿಗಳು, ಸಭೆಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಪ್ರಾದೇಶಿಕ ಆಯುಕ್ತರಿಗೆ ಪ್ರತಿದಿನ ಮನವಿ ಸಲ್ಲಿಸುವ ಅಭಿಯಾನವನ್ನೂ ಆರಂಭಿಸಿವೆ. ಸಂಘಟನೆಗಳ ಅಭಿಪ್ರಾಯದಲ್ಲಿ, ಈ ನಿರ್ಣಯ ಕೇವಲ ರಾಜಕೀಯ ಪ್ರಸ್ತಾವನೆಯಲ್ಲ. ಇದು ಗಡಿನಾಡಿನ ಕನ್ನಡಿಗರ ಭಾವನೆಗೆ ಗೌರವ ಸಲ್ಲಿಸುವ, ಬೆಳಗಾವಿ ಕುರಿತು ಪಾಲಿಕೆಯ ಅಧಿಕೃತ ನಿಲುವನ್ನು ದಾಖಲಿಸುವ ಮತ್ತು ಮುಂದಿನ ಪೀಳಿಗೆಗೆ ಐತಿಹಾಸಿಕ ದಾಖಲೆಯಾಗಿ ಉಳಿಯುವ ಮಹತ್ವದ ನಿರ್ಣಯವಾಗಿದೆ.ಎಲ್ಲರ ಚಿತ್ತ ಪಾಲಿಕೆ ಸಭೆಯತ್ತ:

ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿಯಾಗಿರುವ ಸಂದರ್ಭದಲ್ಲಿ, ವಿಧಾನಮಂಡಲ ಅಧಿವೇಶನಗಳಿಗೆ ಆತಿಥ್ಯ ನೀಡುತ್ತಿರುವ ಸಂದರ್ಭದಲ್ಲಿ ಹಾಗೂ ರಾಜ್ಯದ ಆಡಳಿತ ವ್ಯವಸ್ಥೆಯ ಪ್ರಮುಖ ಕೇಂದ್ರವಾಗಿ ಬೆಳೆದಿರುವ ಹಿನ್ನೆಲೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಮಂಡಿಸಲು ಇನ್ನೂ ಏಕೆ ಹಿಂಜರಿಕೆ ಎಂಬ ಪ್ರಶ್ನೆ ತೀವ್ರವಾಗಿದೆ. ಕಾನೂನು ಅಭಿಪ್ರಾಯ ಮತ್ತು ನ್ಯಾಯಾಲಯದ ನೆಪಗಳು ಮುಂದುವರಿಯುತ್ತವೆಯೇ? ಅಥವಾ ಮಹಾನಗರ ಪಾಲಿಕೆ ತನ್ನ ಸ್ಪಷ್ಟ ನಿಲುವನ್ನು ದಾಖಲಿಸಿ ಐತಿಹಾಸಿಕ ಹೆಜ್ಜೆ ಇಡುತ್ತದೆಯೇ? ಎಂಬ ಕುತೂಹಲ ಈಗ ಗಡಿನಾಡಿನ ಜನರಲ್ಲಿ ಹೆಚ್ಚಾಗಿದೆ.ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ಚರ್ಚೆಯ ವಿಷಯವಲ್ಲ, ಅದು ಐತಿಹಾಸಿಕ ಮತ್ತು ಆಡಳಿತಾತ್ಮಕ ಸತ್ಯ. ಮಹಾನಗರ ಪಾಲಿಕೆ ಈ ಕುರಿತು ಸ್ಪಷ್ಟ ನಿಲುವು ದಾಖಲಿಸಿ ಕನ್ನಡಿಗರ ಭಾವನೆಗೆ ಗೌರವ ಸಲ್ಲಿಸಬೇಕು.

ಡಾ.ಅಲ್ಲಮಪ್ರಭು ಸ್ವಾಮೀಜಿ,
ನಾಗನೂರು ರುದ್ರಾಕ್ಷಿಮಠ ಬೆಳಗಾವಿ.ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಈ ಸತ್ಯವನ್ನು ಗೊತ್ತುವಳಿಯ ಮೂಲಕ ಪುನರುಚ್ಚರಿಸುವುದು ಯಾರ ವಿರುದ್ಧದ ಹೋರಾಟವಲ್ಲ. ಕಾನೂನು ನೆಪಗಳ ಹಿಂದೆ ಅಡಗಿಕೊಳ್ಳುವ ಬದಲು ಮಹಾನಗರ ಪಾಲಿಕೆ ತನ್ನ ಸ್ಪಷ್ಟ ನಿಲುವನ್ನು ಪ್ರಕಟಿಸಬೇಕು.

ಅಶೋಕ ಚಂದರಗಿ,

ಹಿರಿಯ ಕನ್ನಡ ಹೋರಾಟಗಾರ.