ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿಲ್ಲ ಎಂದರೆ ಬಿಳಿಗುಂಡ್ಲುವಿನಲ್ಲಿರುವ ಜಲಮಾಪನ ಕೇಂದ್ರದಿಂದ ಮಾಹಿತಿ ಪಡೆದು ದಾಖಲಾತಿ ಪ್ರಕಟಿಸಲಿ ಎಂದು ರೈತ ನಾಯಕಿ ಸುನಂದಾ ಜಯರಾಂ ಜಿಲ್ಲೆಯ ಶಾಸಕರಿಗೆ ಸವಾಲು ಹಾಕಿದರು.ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಕಾವೇರಿಗಾಗಿ 7ನೇ ಸೋಮವಾರದ ಚಳವಳಿಯಲ್ಲಿ ಭಾಗಿಯಾಗಿ ಮಾತನಾಡಿ, ಗ್ಯಾರಂಟಿ ಸಮಾವೇಶದಲ್ಲಿ ಜಿಲ್ಲೆಯ ಶಾಸಕರು ಜನರ ಮೆಚ್ಚಿಸಲು ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿಲ್ಲ. ನೀರು ಮಳವಳ್ಳಿಯ ದಾಟಿಲ್ಲ. ಕಾವೇರಿ ಹೋರಾಟಗಾರರು, ಚಳವಳಿ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಖಂಡಿಸಿದರು.
ಪ್ರಚಾರಕ್ಕಾಗಿ ಹೋರಾಟಗಾರರು ಸುಳ್ಳು ಹೇಳುತ್ತಿದ್ದಾರೆ ಎಂದೇಳುವ ಜನಪ್ರತಿನಿಗಳು ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಅಧಿಕೃತ ವರದಿ ಪಡೆದು ಮಾತನಾಡಲಿ. ಆಡಳಿತರೂಢ ಪಕ್ಷದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಈ ಬಗ್ಗೆ ದಾಖಲಾತಿ ಪ್ರಕಟಿಸಲಿ ಎಂದು ಆಗ್ರಹಿಸಿದರು.ಕಾವೇರಿ ನದಿಗೆ ನೀರು ಬಿಟ್ಟ ಸಂದರ್ಭದಲ್ಲಿ ತಮಿಳುನಾಡಿಗೆ 6 ಸಾವಿರ ಕ್ಯುಸೆಕ್ ನೀರು ಹರಿದಿದೆ. ಕಬಿನಿ ಜಲಾಶಯದಿಂದ ನದಿಗೆ 2 ಸಾವಿರ ಕ್ಯುಸೆಕ್ ನೀರು ಬಿಡಲಾಗಿದೆ. ಆ ದಿನಗಳಲ್ಲಿ ತಮಿಳುನಾಡಿಗೆ ಎಷ್ಟು ಪ್ರಮಾಣದ ನೀರು ಹರಿದು ಹೋಗಿದೆ ಎಂಬುದನ್ನು ಬಿಳಿಗುಂಡ್ಲು ಜಲಮಾಪನ ಕೇಂದ್ರದಿಂದ ಮಾಹಿತಿ ಪಡೆಯಲಿ ಎಂದು ಒತ್ತಾಯಿಸಿದರು.
ಕಾವೇರಿ ಹೋರಾಟಗಾರರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಶಾಸಕರು ಮಾತನಾಡಬೇಕು. ಜನರ ಮೆಚ್ಚಿಸಲು ಬಾಯಿ ಹರಿಯ ಬಿಡಬಾರದು. ಮುಂದಿನ ದಿನಗಳಲ್ಲಿ ಕಾವೇರಿ ಚಳವಳಿ ಬಗ್ಗೆ ಮಾತನಾಡುವಾಗ ಎಚ್ಚರ ಇರಲಿ ಎಂದು ಎಚ್ಚರಿಸಿದರು.ಬೆಳೆದು ನಿಂತಿರುವ ಬೆಳೆ ರಕ್ಷಣೆ ಮತ್ತು ರೈತರ ಹಿತ ಕಾಪಾಡುವುದು ನಮ್ಮ ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿ ಹೋದರು. ಆದರೆ, ಈಗ ಪರಿಸ್ಥಿತಿ ಏನಾಗಿದೆ. ನಾಲೆ ಮತ್ತು ಕೆರೆಕಟ್ಟೆಗಳಲ್ಲಿ ನೀರಿಲ್ಲದಂತಾಗಿದೆ. ಬೆಳೆ ರಣ ಬಿಸಿಲಿನಲ್ಲಿ ಒಣಗುತ್ತಿದೆ. ಜನ ಜಾನುವಾರಗಳು ನೀರು ಇಲ್ಲದೆ ದಾಹ ಇಂಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ತಕ್ಷಣ ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಒಳ್ಳೆಯದನ್ನು ಮಾಡಿದ್ದೇವೆ ಎಂದು ಹೊಗಳಿಕೆ ಮಾಡುತ್ತಿದ್ದಾರೆ. ಆದರೆ, ಇವರು ಏನು ಒಳ್ಳೆಯ ಕೆಲಸ ಮಾಡಿದ್ದಾರೆ. ವಿನಾಕಾರಣ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಮಗೆ ಯಾವುದೇ ಗ್ಯಾರಂಟಿಗಿಂತ ನೀರು ಮುಖ್ಯ. ಆ ಕೆಲಸವನ್ನು ಸರ್ಕಾರ ಮಾಡಲಿ ಎಂದರು.ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ತನ್ನ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಲಿಲ್ಲ. ಜಲ ಸಂಕಷ್ಟವನ್ನು ಪರಿಹರಿಸಲು ನಿರ್ಲಕ್ಷ್ಯ ತೋರಿದೆ. ಕಾನೂನಿನ ಚೌಕಟ್ಟು ಮುಂದಿಟ್ಟುಕೊಂಡು ಕರ್ನಾಟಕಕ್ಕೆ ದ್ರೋಹ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್ , ಮುದ್ದೇಗೌಡ, ಜವರಯ್ಯ, ಸುಜಾತ ಸಿದ್ದಯ್ಯ, ಪಣಕನಹಳ್ಳಿ ನಾಗೇಂದ್ರ, ತಮ್ಮಣ್ಣ ಗೌಡ, ಈ.ಬಸವರಾಜ್ ಹಲವರು ಭಾಗವಹಿಸಿದ್ದರು.