ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಸಿಎಂ ವಿರುದ್ಧ ಎಫ್‌ಐಆರ್ ಆಗಿರುವುದನ್ನು ಕೇಳ್ತಿರಾ! ಕುಮಾರಸ್ವಾಮಿ ಮೇಲೆ ಎಫ್‌ಐಆರ್ ಆಗಿ ಬೇಲ್ ಮೇಲೆ ಹೊರಗೆ ಇದ್ದರೂ ಅದನ್ನು ಯಾರೂ ಕೇಳೋದೆ ಇಲ್ವಲ್ಲಾ! ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಗುಡುಗಿದರು.ತಾಲೂಕಿನ ಗೊರೂರಿನಲ್ಲಿ ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿ, ಕುಮಾರಸ್ವಾಮಿ ಅವರು ಅಧಿಕಾರಿದಲ್ಲಿ ಇದ್ದಾರೆ, ಕೇಂದ್ರದಲ್ಲಿ ಮಂತ್ರಿ ಆಗಿದ್ದಾರೆ. ಎಫ್‌ಐಆರ್ ಆಗಿ ತನಿಖೆ ಮಾಡಲು ಹೇಳಿದ್ದಾರೆ. ತನಿಖೆಯಲ್ಲಿ ಅರ್ಜಿದಾರನದ್ದು ಸರಿ ಇದೆಯಾ, ತಪ್ಪಿದೆಯಾ! ಇವರ ವಾದ ಸರಿ ಇದೆಯಾ ಅನ್ನೋದು ಗೊತ್ತಾಗುತ್ತದೆ. ಈಗಾಗಲೇ ಲೋಕಾಯುಕ್ತದಲ್ಲಿ ಎಫ್‌ಐಆರ್ ಆಗಿದೆ, ನಾಲ್ಕು ಟೀಂ ಆಗಿದೆ. ಡಿಸೆಂಬರ್ ೨೪ ರೊಳಗೆ ವರದಿಯನ್ನು ಕೊಡಬೇಕು. ಅವರು ಕಾನೂನಿನಯ್ವದಲ್ಲಿ ಏನೇನ್ ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಳ್ತಾರೆ. ಎಷ್ಟು ಜನರ ಮೇಲೆ ಎಫ್‌ಐಆರ್ ಆಗಿದೆ.ಎಫ್‌ಐಆರ್ ಇದ್ದು, ಕೋರ್ಟ್‌ನಲ್ಲಿ ಚಾರ್ಜ್‌ಶೀಟ್ ಫೈಲ್ ಮಾಡಿ ಬೇಲ್ ತಗೊಂಡಿರೋರು ರಾಜ್ಯದಲ್ಲಿ, ಕೇಂದ್ರದಲ್ಲಿ ಎಷ್ಟು ಜನ ಇದ್ದಾರೆ, ಹಾಲಿ ಕೇಂದ್ರ ಸರ್ಕಾರದಲ್ಲಿ ಎಷ್ಟು ಜನ ಇದ್ದಾರೆ, ಎಫ್‌ಐಆರ್ ಆದಕ್ಷಣಕ್ಕೆ ಅವರು ತಪ್ಪಿತಸ್ಥ ಅಂತ ಆಗಲ್ಲ. ದೂರು ಬಂದಿದೆ, ದೂರಿನ ಬಗ್ಗೆ ಸತ್ಯಾಸತ್ಯತೆ ಪರಿಶೀಲನೆ ಮಾಡಲು ಕಾನೂನಿನ ಕ್ರಿಯೆ ನಡೆಯುತ್ತಿರುವುದರಿಂದ ಅದಕ್ಕೆ ದೊಡ್ಡ ಮಹತ್ವ ಕೊಡುವುದು ಬೇಡ. ಕುಮಾರಸ್ವಾಮಿ ಮೇಲೆ ಕೇಸ್ ಇದೆ ಬೇಲ್ ತಗೊಂಡಿದ್ದಾರೆ. ಚಾರ್ಜ್‌ಶೀಟ್ ಆಯ್ತು, ಕೋರ್ಟ್‌ನಿಂದ ಸಮನ್ಸ್ ಬಂತು, ಆಮೇಲೆ ಬೇಲ್ ತಗೊಂಡಿದ್ದಾರೆ ಎಷ್ಟು ಹಂತ ಮುಂದೆ ಹೋಗಿದ್ದಾರೆ. ಅದನ್ನು ಯಾರೂ ಮೀಡಿಯದಲ್ಲಿ ಪ್ರಸ್ತಾಪ ಮಾಡಿಲ್ಲ.ಯಾರ ಮೇಲೆ ಎಫ್‌ಐಆರ್ ಇಲ್ಲ ಹೇಳಿ ಎಂದು ಗುಡುಗಿದರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ದ ಎಡಿಜಿಪಿ ಪತ್ರ ಬರೆದ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಎಡಿಜಿಪಿ ಯಾರಿಗೆ ಹಂದಿಗಳು ಅಂತ ಹೇಳಿದ್ದಾರೆ. ಸಗಣಿಯವನ ಹತ್ತಿರ ಸರಸ ಆಡಬಾರದು, ಗಂಧದವನ ಜೊತೆ ಗುದ್ದಾಡಿ ಅಂತ ನಾವು ಹಳ್ಳಿಯಲ್ಲಿ ಹೇಳಲ್ವಾ. ಜಾರ್ಜ್ ಬರ್ನಾಡ್ ಷಾ ಅವರು ಹೇಳಿದ್ದನ್ನು ಹೇಳಿದ್ದಾರೆ. ಅದರಲ್ಲಿ ದೊಡ್ಡದಾಗಿ ಅರ್ಥೈಸುವುದು ಏನಿದೆ? ತನಿಖಾಧಿಕಾರಿಗಳು ಯಾರ ಬೆದರಿಕೆಗೆ ಹೆದರುವುದು ಬೇಡ ನಾನು ರಕ್ಷಣೆ ಕೊಡ್ತೀನಿ ಅಂತ ಹೇಳಿದ್ದಾರೆ. ಅವರು ಯಾರಿಗೆ ಹೇಳಿದ್ದಾರೆ ಹೇಳಿ. ಕುಮಾರಸ್ವಾಮಿ ವಿರುದ್ಧ ಅಂತ ಎಲ್ಲಿದೆ ಅದರಲ್ಲಿ ಕುಮಾರಸ್ವಾಮಿ ಉಲ್ಲೇಖ ಇಲ್ಲ. ಹಂದಿಗಳು ಅಂತ ಯಾರಿಗೆ ಹೇಳಿದ್ದಾರೆ ಎಂದು ಪ್ರಶ್ನೆ ಮಾಡಿದರು. ಸಿಬಿಐ ಗುಪ್ತ ತನಿಖೆ ಅಧಿಕಾರ ಮೊಟಕುಗೊಳಿಸಿರುವ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಇದು ನಿರಂತರವಾಗಿ ನಡೆಯುವಂತಹದ್ದು. ಹಿಂದೆ ೧೯೭೭ರಲ್ಲಿ ದೇವರಾಜ ಅರಸು ವಾಪಾಸ್ ತೆಗೆದಿದ್ದಾರೆ. ಬೇರೆ, ಬೇರೆ ಮುಖ್ಯಮಂತ್ರಿಗಳು ಇದ್ದಾಗ ಈ ರೀತಿ ಪ್ರಕ್ರಿಯೆ ನಡೆದಿದೆ, ಹೊಸದಲ್ಲ. ಮುಂದೆ ಅಗತ್ಯತೆ ಬಿದ್ದರೆ ಮತ್ತೆ ತನಿಖೆ ಮಾಡಲು ಅವಕಾಶ ಕೊಡಬಹುದು. ಕರ್ನಾಟಕ ಸರ್ಕಾರ ಮಾಡಿದೆ ಅಂತ ಅಲ್ಲ. ಬಿಜೆಪಿ ಅಧಿಕಾರದಲ್ಲಿರುವ ಎಷ್ಟು ಕಡೆ ವಾಪಾಸ್ ತೆಗೆದುಕೊಂಡಿರುವುದಿಲ್ಲ ಎಂದರು. ಇಲ್ಲಿ ಮಾಡಿದ್ರೆ ಮಾತ್ರ ದೊಡ್ಡದು ಅಂತ ಮೋದಿಯವರು ಮಾತಾಡ್ತಾರೆ. ಮಹಾನ್ ತಪ್ಪು ಮಾಡಿದ್ದಾರೆ ಅಂತ ಬಿಂಬಿಸುವುದು ಸರಿಯಲ್ಲ ಎಂದು ಅಭಿಪ್ರಾಯಿಸಿದರು.ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರ ಮಾತನಾಡುತ್ತಾ, ಯಾರು ಬಿಜೆಪಿಯವರು ಹೇಳ್ತಾವ್ರೆ ಅವರು ಆ ಜಾಗದಲ್ಲಿ ಎಷ್ಟು ದಿನ ಇರ್ತಾರೆ ಎಂದರು. ಜಾತಿಗಣತಿ ಜಾರಿ ಬಗ್ಗೆ ಸಿಎಂ ಹೇಳಿಕೆ ವಿಚಾರ ಮಾತನಾಡಿ, ಸಿಎಂ ಅವರು ಹೇಳಿದ ಮೇಲೆ ನಾವು ಭಿನ್ನಾಭಿಪ್ರಾಯ ಹೇಳುವುದಿಲ್ಲ. ಅವರು ಹೇಳಿದ್ದಾರೆ ನಾವು ಒಪ್ಪಿದ್ದೇವೆ. ೨೦೧೩ರಲ್ಲಿ ಆಗಿದ್ದು, ಈಗ ವರದಿ ಕೊಟ್ಟಿದ್ದಾರೆ. ಕ್ಯಾಬಿನೆಟ್ ಮುಂದೆ ಬಂದು ಅದನ್ನು ಒಪ್ಪಬಹುದು ಅಂತ ನಾನು ಅಂದುಕೊಂಡಿದ್ದೇನೆ. ಇನ್ನುಮುಂದೆ ತಡ ಆಗದ ರೀತಿಯಲ್ಲಿ ಜಾತಿಗಣತಿ ಬಗ್ಗೆ ನಿರ್ಣಯ ತೆಗೆದುಕೊಳ್ತಾರೆ ಎಂದರು.
ಮುಡಾ ದಾಖಲೆ ಕೊಟ್ಟಿದ್ದೇ ಕಾಂಗ್ರೆಸ್‌ನವರು ಎಂಬ ಯತ್ನಾಳ್ ಹೇಳಿಕೆ ವಿಚಾರ ಹೇಳಿಕೆ ನೀಡುತ್ತಾ, ನಮ್ಮ ಪಕ್ಷದವರು ಕೊಟ್ಟಿದ್ದಾರೋ, ಅವರ ಪಕ್ಷದವರು ಕೊಟ್ಟಿದ್ದಾರೋ ನಮಗೂ ಗೊತ್ತಿಲ್ಲ, ಅವರಿಗೂ ಗೊತ್ತಿಲ್ಲ. ಕೊಡುವಂತದ್ದು, ತಗಳುವಂತಹದ್ದು ಏನು ಇರಲ್ಲ. ನಮ್ಮ ಪಕ್ಷದಲ್ಲೂ ಷಡ್ಯಂತ್ರಗಳು ನಡೆಯುತ್ತವೆ ಎನ್ನುವುದನ್ನು ನಾವು ತಳ್ಳಿ ಹಾಕುವಂತಿಲ್ಲ. ಅವರು ಪಕ್ಷದಲ್ಲಿ ಷಡ್ಯಂತ್ರ ನಡೆಯಲ್ಲ ಅಂತ ಹೇಳೋಕೆ ಆಗುವುದಿಲ್ಲ. ರಾಜಕಾರಣದಲ್ಲಿ ಇವೆಲ್ಲಾ ಇದ್ದಂತದೆ ಅಧಿಕಾರ ಪಡೆಯಲು ಎಲ್ಲಾ ಪಾರ್ಟಿಯವರು ಪ್ರಯತ್ನ ಮಾಡ್ತಾರೆ. ಎಲ್ಲಾ ರಾಜಕೀಯ ಮುಖಂಡರು ಅಧಿಕಾರಕ್ಕೆ ಬರಬೇಕೆಂದು ಪ್ರಯತ್ನ ಮಾಡ್ತಾರೆ ಅದರಲ್ಲಿ ತಪ್ಪೇನಿಲ್ಲ ಎಂದರು.ಹಿಂದೂ ಧರ್ಮದ ಬಗ್ಗೆ ಪ್ರೊ. ಕೆ.ಎಸ್.ಭಗವಾನ್ ಹೇಳಿಕೆ ವಿಚಾರ ಮಾತನಾಡಿ, ಅವರು ಹಿಂದೂಗಳ ಧರ್ಮ ಅಲ್ಲ. ಬ್ರಾಹ್ಮಣರ ಧರ್ಮ ಅಂತ ಹೇಳಿದ್ದಾರೆ. ಅದು ಅವರ ಅಭಿಪ್ರಾಯ ನನ್ನದೇನು ರಿಯಾಕ್ಷನ್ ಇಲ್ಲ. ಹಿಂದೂ ಧರ್ಮ ಅಂತ ನಾನು ಒಪ್ಪಲ್ಲ, ಇದು ಬ್ರಾಹ್ಮಣರ ಧರ್ಮ ಅಷ್ಟೇ. ಅಹಿಂದ ವರ್ಗಗಳ ಧರ್ಮ ಅಲ್ಲ ಅಂತ ಹೇಳಿದ್ದಾರೆ. ಅದು ಅವರ ಅಭಿಪ್ರಾಯ ಇದೆ, ಅದರ ಬಗ್ಗೆ ನನ್ನ ಅಭಿಪ್ರಾಯ ಇಲ್ಲ ಎಂದು ಹೇಳಿದರು. ಇದೇ ವೇಳೆ ಸಂಸದ ಶ್ರೇಯಸ್ ಎಂ. ಪಟೇಲ್, ಶಾಸಕ ಕೆ.ಎಂ. ಶಿವಲಿಂಗೇಗೌಡ ಇತರರು ಉಪಸ್ಥಿತರಿದ್ದರು.