ಕನ್ನಡಪ್ರಭ ವಾರ್ತೆ ಹಾಸನ

ಬೆಂಗಳೂರಿನ ಕೋರಮಂಗಲದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ೪೩ನೇ ಕರ್ನಾಟಕ ರಾಜ್ಯ ಮಟ್ಟದ ಟೈಕ್ವಂಡೊ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಹಾಸನ ಜಿಲ್ಲಾ ಹಾಸನಾಂಬ ಕರಾಟೆ ಸಂಸ್ಥೆಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ ಹಲವು ಪದಕಗಳನ್ನು ಗೆದ್ದು ಜಿಲ್ಲೆಗೆ ಹಾಗೂ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರತಿಭಾನ್ವಿತ ಕರಾಟೆ ಪಟುಗಳ ನಡುವೆ ನಡೆದ ತೀವ್ರ ಪೈಪೋಟಿಯಲ್ಲಿ ಹಾಸನದ ಕ್ರೀಡಾಪಟುಗಳು ತಮ್ಮ ಕೌಶಲ್ಯ, ಆತ್ಮವಿಶ್ವಾಸ ಮತ್ತು ಶಿಸ್ತಿನ ಪ್ರದರ್ಶನದ ಮೂಲಕ ಗಮನ ಸೆಳೆದರು. ಹಲವು ವಿಭಾಗಗಳಲ್ಲಿ ಪದಕಗಳನ್ನು ಗೆದ್ದು ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲೆಯ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಸ್ಪರ್ಧೆಯಲ್ಲಿ ಅನಿತಾ ಹಾಗೂ ಆರ್ಯನ್ ಬಿ.ವಿ. ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಭಾಜನರಾದರೆ, ವಿಸ್ಮಯ್ ಕೆ. ಹಾಗೂ ಧನುಷ್ ದ್ವಿತೀಯ ಸ್ಥಾನ ಗಳಿಸಿದರು. ಅನುಷ್ಕಾ ಆರ್.ವಿ., ಲಕ್ಷ್ಮಿತ, ಶಶಾಂಕ್ ಎಸ್.ಆರ್. ಹಾಗೂ ತ್ರಿಷಲಿ ಕೆ. ಆರ್‌. ತೃತೀಯ ಸ್ಥಾನ ಪಡೆದು ಕಂಚಿನ ಪದಕ ತಮ್ಮದಾಗಿಸಿಕೊಂಡರು.

ವಿಜೇತ ಕ್ರೀಡಾಪಟುಗಳಿಗೆ ಹಾಸನ ಜಿಲ್ಲಾ ಅಮೇಚೂರ್ ಬಾಡಿ ಬಿಲ್ಡರ್ಸ್ ಸಂಸ್ಥೆಯ ಅಧ್ಯಕ್ಷ ಶರತ್‌ಚಂದ್ರ ಎ.ಎಂ., ಸಂಸ್ಥೆಯ ಸದಸ್ಯರು, ಹಾಸನಾಂಬ ಕರಾಟೆ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಪೋಷಕರು ಮತ್ತು ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿ, ಮುಂದಿನ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿಯೂ ಇದೇ ರೀತಿಯ ಸಾಧನೆ ಮುಂದುವರಿಯಲಿ ಎಂದು ಶುಭ ಹಾರೈಸಿದರು. ವಿಜೇತ ಕ್ರೀಡಾಪಟುಗಳಿಗೆ ಕರಾಟೆ ತರಬೇತುದಾರ ಮಹದೇವ್ ಉಚಿತವಾಗಿ ತರಬೇತಿ ನೀಡುತ್ತಿದ್ದು, ಅವರ ಶ್ರಮ ಮತ್ತು ಮಾರ್ಗದರ್ಶನವೇ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ ಎಂದು ಪೋಷಕರು ಹಾಗೂ ಸಂಸ್ಥೆಯ ಪದಾಧಿಕಾರಿಗಳು ಅಭಿಪ್ರಾಯಪಟ್ಟರು. ಹಾಸನಾಂಬ ಕರಾಟೆ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ಮಕ್ಕಳಲ್ಲಿ ಕ್ರೀಡಾ ಪ್ರತಿಭೆಯನ್ನು ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ತರಬೇತಿ ನೀಡುತ್ತಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಅನೇಕ ಚಾಂಪಿಯನ್‌ಗಳನ್ನು ರೂಪಿಸುತ್ತಿದೆ. ಇತ್ತೀಚಿನ ಈ ಸಾಧನೆಯು ಸಂಸ್ಥೆಯ ಮತ್ತೊಂದು ಹೆಮ್ಮೆಯ ಮೈಲಿಗಲ್ಲಾಗಿದ್ದು, ಜಿಲ್ಲೆಯ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದೆ.