ರಸ್ತೆ ಅಪಘಾತಗಳಲ್ಲಿ ಸಾವುಯುವವರ ಸಂಖ್ಯೆಯಲ್ಲಿ ಹಾಸನ ಜಿಲ್ಲೆಗೆ 4ನೇ ಸ್ಥಾನ

| Published : Jul 26 2024, 01:35 AM IST

ರಸ್ತೆ ಅಪಘಾತಗಳಲ್ಲಿ ಸಾವುಯುವವರ ಸಂಖ್ಯೆಯಲ್ಲಿ ಹಾಸನ ಜಿಲ್ಲೆಗೆ 4ನೇ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ರಸ್ತೆ ಅಪಘಾತಗಳಿಂದ ಸಾವು ಸಂಭವಿಸಿರುವ ಪ್ರಮಾಣದಲ್ಲಿ ಹಾಸನ ಜಿಲ್ಲೆ ರಾಜ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸುಧಾರಣಾ ಕ್ರಮಗಳನ್ನು ಅತ್ಯಂತ ಜರೂರಾಗಿ ಅನುಷ್ಠಾನಕ್ಕೆ ತರುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.ರಸ್ತೆ ಅಪಘಾತದಿಂದ ಸಾವು ಸಂಭವಿಸಲು ಕಾರಣ ತಿಳಿಯಲು ಬ್ಲಾಕ್‌ಸ್ಪಾಟ್‌ಗಳಿಗೆ ಅಧಿಕಾರಿಗಳು ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಸೂಚಿಸಿದರಲ್ಲದೆ, ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯಲ್ಲಿ ರಸ್ತೆ ಅಪಘಾತಗಳಿಂದ ಸಾವು ಸಂಭವಿಸದಂತೆ ಎಚ್ಚರ ವಹಿಸಿ ಅಗತ್ಯ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಸ್ತೆ ಅಪಘಾತಗಳಿಂದ ಸಾವು ಸಂಭವಿಸಿರುವ ಪ್ರಮಾಣದಲ್ಲಿ ಹಾಸನ ಜಿಲ್ಲೆ ರಾಜ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸುಧಾರಣಾ ಕ್ರಮಗಳನ್ನು ಅತ್ಯಂತ ಜರೂರಾಗಿ ಅನುಷ್ಠಾನಕ್ಕೆ ತರುವಂತೆ ನಿರ್ದೇಶನ ನೀಡಿದರು. ರಸ್ತೆ ಅಪಘಾತದಿಂದ ಸಾವು ಸಂಭವಿಸಲು ಕಾರಣ ತಿಳಿಯಲು ಬ್ಲಾಕ್‌ಸ್ಪಾಟ್‌ಗಳಿಗೆ ಅಧಿಕಾರಿಗಳು ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಸೂಚಿಸಿದರಲ್ಲದೆ, ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ ಎಂದು ತಿಳಿಸಿದರು. ರಸ್ತೆಯ ಬದಿಗಳಲ್ಲಿರುವ ಒಣಗಿದ ಮರಗಳು ಮಳೆಯಿಂದ ಯಾವುದೇ ಸಂದರ್ಭದಲ್ಲಾದರೂ ಬೀಳಬಹುದು. ಯಾವುದೇ ಅನಾಹುತಕ್ಕೆ ಆಸ್ಪದ ನೀಡದಂತೆ ನಿಗಾ ವಹಿಸಿ ಒಣಗಿದ ಮರಗಳನ್ನು ಗುರುತಿಸಿ ತೆರವುಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚಿಸಿದರು. ನಗರದಲ್ಲಿ ಎಲ್ಲೆಂದರಲ್ಲಿ ಜೆ.ಸಿ.ಬಿ ಹಾಗೂ ಹಳೆಯ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇವುಗಳನ್ನು ತೆರವುಗೊಳಿಸಲು ನಗರಸಭೆ ಆಯುಕ್ತರು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚಿಸಿದರು. ಸಾರ್ವಜನಿಕರ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ನಗರದ ಸಾಲಗಾಮೆ ರಸ್ತೆ ಹಾಗೂ ರೈಲ್ವೆ ನಿಲ್ದಾಣ ಬಳಿ ಪ್ರತಿ ಮಂಗಳವಾರ ರಸ್ತೆ ಬದಿಯಲ್ಲಿಯೇ ನಡೆಯುವ ಸಂತೆ ಸ್ಥಳಾಂತರ ಮಾಡಲು ಕ್ರಮ ವಹಿಸುವಂತೆ ನಗರಸಭೆ ಆಯುಕ್ತರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಅಧಿಕ ಮಳೆಯಾಗುತ್ತಿದ್ದು, ಸಂಚಾರಕ್ಕೆ ತೊಂದರೆಯಾಗದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿ ಮುಚ್ಚುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಶಾಲಾ ಕಾಲೇಜು ಮಕ್ಕಳಿಗೆ ರಸ್ತೆ ಸಂಚಾರ ಸುರಕ್ಷತೆ ಬಗ್ಗೆ ಅರಿವು ಮೂಡಿಸಬೇಕು ಜೊತೆಗೆ ಎನ್.ಎಸ್.ಎಸ್ ಹಾಗೂ ಎನ್.ಸಿ.ಸಿ.ವಿದ್ಯಾರ್ಥಿಗಳಿಂದ ವಾರಕ್ಕೋಮ್ಮೆ ರಸ್ತೆ ಸಂಚಾರಕ್ಕೆ ಸಂಬಂಧಿಸಿದಂತೆ ಪ್ರಾಯೋಗಿಕವಾಗಿ ಸಂಚಾರಿ ನಿಯಮಗಳನ್ನು ಪಾಲಿಸಲು ಅರಿವು ಮೂಡಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಬರುವ ಬೂವನಹಳ್ಳಿ ಹಾಗೂ ಚನ್ನಪಟ್ಟಣ ವೃತ್ತದಲ್ಲಿ ಕಾಮಗಾರಿ ನಡೆಸಲು ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ನಿಗಾ ವಹಿಸಿ ಪರ್ಯಾಯ ಮಾರ್ಗವನ್ನು ಮೊದಲು ಸಿದ್ಧತೆ ಮಾಡಿಕೊಂಡು ನಂತರ ಕಾಮಗಾರಿ ಪ್ರಾರಂಭಿಸಿ ಎಂದು ರಾಷ್ಟ್ರೀಯ ಹೆದ್ದಾರಿ ಅಭಿಯಂತರರಿಗೆ ತಿಳಿಸಿದರು. ನಗರದಲ್ಲಿ ಅಂಗಡಿ ಮಾಲೀಕರು ತಮ್ಮ ವಾಹನಗಳನ್ನು ಫುಟ್‌ಪಾತ್‌ನಲ್ಲಿಯೇ ನಿಲ್ಲಿಸುವುದರಿಂದ ಟ್ರಾಫಿಕ್ ಜಾಮ್ ಆಗುತ್ತದೆ. ಈ ನಿಟ್ಟಿನಲ್ಲಿ ಅಂಗಡಿ ಮಾಲೀಕರಿಗೆ ನಗರ ಸಭೆವತಿಯಿಂದ ನೋಟಿಸ್ ನೀಡಿ ವಾಹನಗಳ ತೆರವಿಗೆ ಕ್ರಮ ವಹಿಸಬೇಕು ಎಂದು ತಿಳಿಸಿದರು. ಇದೇ ರೀತಿ ತಾಲೂಕು ಮಟ್ಟದಲ್ಲಿಯೂ ಸಹ ಕ್ರಮ ಜರುಗಿಸಬೇಕಿದೆ ಎಂದು ತಿಳಿಸಿದರು.

ಜಿಲ್ಲೆಯ ಪ್ರವಾಸಿ ತಾಣಗಳಾದ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಹಾಗೂ ಸಕಲೇಶಪುರದ ಟ್ರೆಕ್ಕಿಂಗ್‌ ಸ್ಥಳಗಳಿಗೆ ವಾರಾಂತ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ಸುರಕ್ಷತಾ ದೃಷ್ಟಿಯಿಂದ ಪೊಲೀಸ್ ಇಲಾಖೆ ಸಿಬ್ಬಂದಿ ಜೊತೆಗೆ ಸ್ಥಳೀಯವಾಗಿ ಹೋಂ ಗಾರ್ಡ್‌ ಅನ್ನು ನೇಮಿಸುವಂತೆ ತಿಳಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಬ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಗಿರೀಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜ್ ಕುಮಾರ್, ಕೆ.ಎಸ್.ಆರ್.ಟಿ.ಸಿ ವಿಭಾಗಾಧಿಕಾರಿ, ನಗರಸಭೆ ಆಯುಕ್ತರಾದ ಯೋಗಾನಂದ ಹಾಗೂ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

* ಬಾಕ್ಸ್‌ನ್ಯೂಸ್‌..ನೆರವಿಗೆ ಬಂದವರನ್ನು ಸನ್ಮಾನಿಸಬೇಕು ರಸ್ತೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಿ ನೆರವಿಗೆ ಧಾವಿಸಿ ಪ್ರಾಣ ಉಳಿಸಲು ಸಹಕರಿಸಿದ ಸಾರ್ವಜನಿಕರನ್ನು ಗುರುತಿಸಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಸಂದರ್ಭದಲ್ಲಿ ಅವರನ್ನು ಸನ್ಮಾನಿಸುವುದರ ಮೂಲಕ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ರೀತಿ ಕೆಲಸಗಳನ್ನು ಮಾಡುವಂತೆ ಉತ್ತೇಜಿಸಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.