ಸಾರಾಂಶ
ಹಾಸನ : ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಹಾಸನ ಜಿಲ್ಲೆಯನ್ನು ಮೂರು ರಾಜಕೀಯ ಪಕ್ಷಗಳು ಕಡೆಗಣಿಸಿವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ .ಪುಟ್ಟಸಿದ್ದ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಕೇವಲ ಮಂಡ್ಯ, ಮೈಸೂರು ಜಿಲ್ಲೆಯ ಅಭ್ಯರ್ಥಿಗಳಿಗೆ ಮಣೆ ಹಾಕಲಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ ಅರ್ಹ ಅಭ್ಯರ್ಥಿಗಳು ಇಲ್ಲವೇ? ಕಾಂಗ್ರೆಸ್ ಸರ್ಕಾರ ಶಿಕ್ಷರಿಗೆ ಅನ್ಯಾಯ ಮಾಡಿದೆ. ಅತಿಥಿ ಉಪನ್ಯಾಸಕರಿಗೆ ಕಳೆದ ೭ ತಿಂಗಳಿನಿಂದ ವೇತನ ಆಗಿಲ್ಲ. ಅತಿಥಿ ಉಪನ್ಯಾಸಕರಿಗೆ ಮತದಾನದ ಹಕ್ಕನ್ನು ನೀಡಿಲ್ಲ. ಕೇವಲ ಭರವಸೆಗಳನ್ನು ನೀಡಿ ಕಾಂಗ್ರೆಸ್ ಸರ್ಕಾರ ಶಿಕ್ಷಕರಿಗೆ ಅನ್ಯಾಯ ಮಾಡಿದೆ’ ಎಂದು ಆರೋಪಿಸಿದರು.
‘ಮುಂದಿನ ದಿನಗಳಲ್ಲಿ ಹಾಸನ ಜಿಲ್ಲೆಯ ಅಭ್ಯರ್ಥಿಗಳಿಗೆ ಅವಕಾಶ ನೀಡದೆ ಇದ್ದರೆ ಉಗ್ರ ಹೋರಾಟ ನಡೆಸಲಾಗುವುದು. ಜೂನ್ ತಿಂಗಳಲ್ಲಿ ನಡೆಯುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಯಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದು, ಮುಂದಿನ ಹೋರಾಟಗಳನ್ನು ಸಿದ್ಧಪಡಿಸಿಕೊಂಡಿದ್ದೇವೆ, ಪ್ರಮುಖವಾಗಿ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸುವುದು, ೭ನೇ ವೇತನ ಆಯೋಗ ಜಾರಿಗೆ ಹೋರಾಟ ನಡೆಸುವುದು, ಹಳೆಯ ಪಿಂಚಣಿ ಪದ್ಧತಿ (ಒಪಿಎಸ್) ಜಾರಿಗೆ ಬರುವಂತೆ ಮಾಡಲಾಗುವುದು. ಖಾಸಗಿ ಅನುದಾನಿತ ಶಿಕ್ಷಕರಿಗೆ ಸರ್ಕಾರಿ ಶಿಕ್ಷಕರು ಗಳಿಸಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸುವುದು, ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಕಡಿಮೆ ಮಾಡುವುದು, ಈ ಉದ್ದೇಶಗಳ ಈಡೇರಿಕೆಗೆ ತಮ್ಮ ಮತ ನೀಡಿ ಜಯಶೀಲನನ್ನಾಗಿ ಮಾಡಬೇಕು’ ಎಂದು ವಿನಂತಿಸಿದರು.