ಸಾರಾಂಶ
ರಾಮನಗರ: ಹಳ್ಳಿಮಾಳ ಸೊಸೈಟಿ ಅಧ್ಯಕ್ಷ ಸ್ಥಾನ ಚುನಾವಣೆಗಾಗಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನಡೆಸಿದ ದಬ್ಬಾಳಿಕೆ ಹೈಡ್ರಾಮಾ ಖಂಡನೀಯ. ಹಾಸನದ ಗೂಂಡಾಗಿರಿ ಸಂಸ್ಕೃತಿ ಅವರಿಗೂ ಬಂದಂತೆ ಕಾಣುತ್ತಿದೆ ಎಂದು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್‌ರ ಬೆದರಿಕೆ, ದರ್ಪ ದೌರ್ಜನ್ಯ ನೋಡಿದರೆ ಹಾಸನ ಸಂಸ್ಕೃತಿ ಕಾಣುತ್ತಿದೆ. ಅದೆಲ್ಲವನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳಲಿ. ದೇವೇಗೌಡ, ಕುಮಾರಸ್ವಾಮಿ ವಿರುದ್ಧ ನಾವೆಲ್ಲ ಹೋರಾಟ ಮಾಡಿಕೊಂಡು ಬಂದವರು. ಇದೆಲ್ಲ ಹೆಚ್ಚು ದಿನ ನಡೆಯುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.ನಿಖಿಲ್ ಗೂಂಡಾ ವರ್ತನೆ ಇಲ್ಲಿಗೆ ಬಿಡಬೇಕು. ದಬ್ಬಾಳಿಕೆ ಮತ್ತು ದೌರ್ಜನ್ಯವನ್ನು ತಮ್ಮಲ್ಲೇ ಇಟ್ಟುಕೊಳ್ಳಲಿ. ಚುನಾವಣೆಯಲ್ಲಿ ನಾಮಪತ್ರ ಹರಿದು ಹಾಕುವುದು. ಅಧಿಕಾರಿಗಳಿಗೆ ಧಮಕಿ ಹಾಕಿ, ದಬ್ಬಾಳಿಕೆ ನಡೆಸುವುದು ಸರಿಯಲ್ಲ. ಕೃಷ್ಣೇಗೌಡ ಮತ್ತು ಸುರೇಶ್ ವಿರುದ್ಧದ ಪ್ರಕರಣ ಇತ್ಯರ್ಥ ಆಗುವವರೆಗೆ ಚುನಾವಣೆ ಬೇಡ ಎಂಬುದು ನಮ್ಮ ಬೇಡಿಕೆ. ನಾನು ಗೆದ್ದೆ ಎಂಬ ಮನೋಭಾವ ನಿಖಿಲ್ ಬಿಡಬೇಕು. ಇದರಲ್ಲಿ ಶಾಸಕ ಹಾಗೂ ಸರ್ಕಾರದ ಮಧ್ಯಪ್ರವೇಶ ಇಲ್ಲ. ಬಿಡಿಸಿಸಿ ಬ್ಯಾಂಕ್ ಪ್ರತಿನಿಧಿ ಮಂಜುನಾಥ್ ಪ್ರವೇಶ ಮಾಡಿದ್ದು, ಇದು ಸಂಘದ ವ್ಯಾಪ್ತಿಗೆ ಸೀಮಿತ.ಈಗ ಜುಲೈ 22ರಂದು ಚುನಾವಣೆ ನಿಗದಿಯಾಗಿದ್ದು, ಇದಕ್ಕೆ ಕಾಂಗ್ರೆಸ್ ಅಭ್ಯಂತರ ಇಲ್ಲ ಎಂದು ಲಿಂಗಪ್ಪ ತಿಳಿಸಿದರು.
ಮಾಜಿ ಶಾಸಕ ಕೆ.ರಾಜು ಮಾತನಾಡಿ, ಕೇಂದ್ರ ಸಚಿವ ಕುಮಾರಸ್ವಾಮಿ ನಿಖಿಲ್ ಅವರಿಗೆ ಗೂಂಡಾವರ್ತನೆ ಅನುಸರಿಸುವುದನ್ನು ಬಿಡುವಂತೆ ತಿಳಿವಳಿಕೆ ಹೇಳಲಿ. ಅವರಿಗೆ ರಾಮನಗರ ಮತ್ತು ಚನ್ನಪಟ್ಟಣದ ಋಣ ತೀರಿಸುವ ಮನಸ್ಸಿದ್ದರೆ ಅಭಿವೃದ್ಧಿ ಕೆಲಸ ಮಾಡಲಿ. ಈ ರೀತಿ ಗೂಂಡಾವರ್ತನೆ ತೋರಿಸಿದರೆ ಪ್ರತಿಫಲ ಅನುಭವಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.ಸೊಸೈಟಿ ಅಧ್ಯಕ್ಷರ ಚುನಾವಣೆ ಶಾಂತಿಯುತವಾಗಿ ನಡೆಯಲಿ. ಇದರಲ್ಲಿ ಶಾಸಕರಾಗಲಿ ಅಥವಾ ಸರ್ಕಾರವಾಗಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾದವರ ಪರವಾಗಿ ನಿಖಿಲ್ ನಿಂತಿದ್ದಾರೆಂಬುದನ್ನು ಮರೆಯಬಾರದು ಎಂದು ಟಾಂಗ್ ನೀಡಿದರು.