ಮುಂಬರುವ ಗೌರಿ ಗಣೇಶ ಹಬ್ಬ ಅಂಗವಾಗಿ ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನಾ ಕಾರ್ಯಕ್ರಮಗಳನ್ನು ಭಕ್ತಿ ಪೂರ್ವಕವಾಗಿ ಸಂಭ್ರಮಿಸುವ ಮೂಲಕ ಜವಾಬ್ದಾರಿಯಿಂದ ಆಚರಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಎನ್ ಬಿಂದು ಮಣಿ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಮುಂಬರುವ ಗೌರಿ ಗಣೇಶ ಹಬ್ಬ ಅಂಗವಾಗಿ ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನಾ ಕಾರ್ಯಕ್ರಮಗಳನ್ನು ಭಕ್ತಿ ಪೂರ್ವಕವಾಗಿ ಸಂಭ್ರಮಿಸುವ ಮೂಲಕ ಜವಾಬ್ದಾರಿಯಿಂದ ಆಚರಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಎನ್ ಬಿಂದು ಮಣಿ ಕರೆ ನೀಡಿದರು.

ಅವರು ಕುಶಾಲನಗರ ರೈತ ಸಹಕಾರ ಭವನದ ಸಭಾಂಗಣದಲ್ಲಿ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ವ್ಯಾಪ್ತಿಯ ಗಣೇಶ ಹಬ್ಬ ಸಮಿತಿಗಳ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಈ ಸಂಬಂಧ ಈಗಾಗಲೇ ತಾಲೂಕು ಕಚೇರಿಗಳಲ್ಲಿ ಏಕಗವಾಕ್ಷಿ ಸಮಿತಿ ಕಾರ್ಯ ಆರಂಭಿಸಿದ್ದು ಗೌರಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಸಂಬಂಧ ಸಮಿತಿಯವರು ಅರ್ಜಿ ಸಲ್ಲಿಸಿ ಅನುಮತಿ ಪಡೆಯುವುದು ಕಡ್ಡಾಯ ಎಂದರು.

ಗೌರಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯಿಂದ ವಿಸರ್ಜನೆಯ ತನಕ ನಡೆಯುವ ಕಾರ್ಯಕ್ರಮಗಳಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲದಂತೆ ಸಮಿತಿಗಳ ಪ್ರತಿಯೊಬ್ಬರು ಎಚ್ಚರ ವಹಿಸಬೇಕಾಗಿದೆ ಎಂದು ಹೇಳಿದರು.

ಪೊಲೀಸ್ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಶಾಂತಿಯುತವಾಗಿ ಹಬ್ಬ ಆಚರಣೆ ನಡೆಯುವಂತೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಕಳೆದ ಬಾರಿ ಶೇ. 90ರಷ್ಟು ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಆ ಸಂದರ್ಭದಲ್ಲಿ ಕಂಡು ಬಂದ ನ್ಯೂನತೆಗಳು ಲೋಪದೋಷಗಳನ್ನು ಸರಿಪಡಿಸುವಂತೆ ಸಲಹೆ ನೀಡಿದರು.

ತಹಸೀಲ್ದಾರ್ ಕೃಷ್ಣಮೂರ್ತಿ ಮಾತನಾಡಿ ತಮ್ಮ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದಲ್ಲಿ ಏಕಗವಾಕ್ಷಿ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. ಸೆ. 13ರ ಒಳಗಾಗಿ ಅನುಮತಿ ಪಡೆಯಬೇಕಾಗಿದ್ದು ಶನಿವಾರ ಮತ್ತು ಭಾನುವಾರ ಎರಡು ದಿನಗಳು ಏಕಗವಾಕ್ಷಿ ಕಚೇರಿಗಳು ಕಾರ್ಯನಿರ್ವಹಿಸಲಿದೆ ಎಂದರು.

ಡಿವೈಎಸ್ಪಿ ಚಂದ್ರಶೇಖರ್ ಮಾತನಾಡಿ ಗಣಪತಿ ಪ್ರತಿಷ್ಠಾಪನೆ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯವಾಗಿದೆ ಹಾಗೂ ದಿನದ 24 ಗಂಟೆ ಕಾಲ ಸ್ಥಳದಲ್ಲಿ ಸ್ವಯಂಸೇವಕರ ಅಥವಾ ಕಾವಲುಗಾರರ ನೇಮಕ ಅಗತ್ಯ ಎಂದರು.

ಪೊಲೀಸ್ ಇನ್ಸ್ಪೆಕ್ಟರ್ ದಿನೇಶ್ ಕುಮಾರ್, ಠಾಣಾಧಿಕಾರಿಗಳು ಪೊಲೀಸ್ ಸಿಬ್ಬಂದಿಗಳು, ಇತರೆ ಇಲಾಖೆ ಅಧಿಕಾರಿಗಳು, ತಾಲೂಕಿನ ವಿವಿಧ ಸಮಿತಿಗಳ ಪದಾಧಿಕಾರಿಗಳು ಇದ್ದರು.

ಪೊಲೀಸ್ ಪೋಲಿಸ್ ಅಧಿಕಾರಿ ಆರ್ ಎನ್ ಬಿಂದು ಮಣಿ ಅವರು ಕುಶಾಲನಗರ ಟೌನ್ ಪೊಲೀಸ್ ಠಾಣಾ ಆವರಣದಲ್ಲಿ ಪೊಲೀಸ್ ಸಮುದಾಯ ಭವನದಲ್ಲಿ ಏಕಗವಾಕ್ಷಿ ಸಮಿತಿಯ ಕಚೇರಿಗೆ ತೆರಳಿ ಅಲ್ಲಿನ ಅಧಿಕಾರಿ ಸಿಬ್ಬಂದಿಗಳಿಂದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಅರ್ಜಿಗಳ ಬಗ್ಗೆ ಮಾಹಿತಿ ಪಡೆದರು.