ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ತನಿಖೆಗೆ ಆದೇಶ ನೀಡಿರುವುದು ಆತುರದ ನಿರ್ಧಾರವಾಗಿದ್ದು, ಮತ್ತೊಂದು ಬಾರಿ ಈ ವಿಚಾರದ ಬಗ್ಗೆ ಪರಿಶೀಲನೆ ಮಾಡಬೇಕಾಗಿತ್ತು ಎಂದು ಜಿಪಂ ಮಾಜಿ ಸದಸ್ಯ ಆರ್.ಬಾಲರಾಜು ತಿಳಿಸಿದರು.ಚಾಮರಾಜನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕನ್ನಡಪ್ರಭವಾರ್ತೆ ಚಾಮರಾಜನಗರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ತನಿಖೆಗೆ ಆದೇಶ ನೀಡಿರುವುದು ಆತುರದ ನಿರ್ಧಾರವಾಗಿದ್ದು, ಮತ್ತೊಂದು ಬಾರಿ ಈ ವಿಚಾರದ ಬಗ್ಗೆ ಪರಿಶೀಲನೆ ಮಾಡಬೇಕಾಗಿತ್ತು. ಜನ ಬೆಂಬಲದ ಸರ್ಕಾರದ ವಿರುದ್ಧ ಇಂಥ ನಿರ್ಣಯಗಳು ಅಭಿವೃದ್ಧಿಗೆ ಮಾರಕವಾಗುತ್ತದೆ ಎಂದು ಜಿಪಂ ಮಾಜಿ ಸದಸ್ಯ ಆರ್.ಬಾಲರಾಜು ತಿಳಿಸಿದರು. ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನೀಡುವ ಜೊತೆಗೆ 136 ಶಾಸಕರ ಬೆಂಬಲದೊಂದಿಗೆ ಮುಖ್ಯಮಂತ್ರಿಗಳಾಗಿದ್ದಾರೆ. ಕಳೆದ 40 ವರ್ಷಗಳಿಂದ ಒಂದು ಕಪ್ಪುಚುಕ್ಕೆ ಇಲ್ಲದೇ ರಾಜಕಾರಣ ಮಾಡಿಕೊಂಡು ಬಂದಿರುವ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ಮಸಿಯನ್ನು ಹಾಕಲು ವಿರೋಧ ಪಕ್ಷಗಳು ಸಂಚು ಮಾಡಿದೆ. ಇದು ಯಾವುದೇ ಕಾರಣಕ್ಕೆ ಸಫಲವಾಗುವುದಿಲ್ಲ. ನ್ಯಾಯಾಲಯವು ಸಹ ಸಿದ್ದರಾಮಯ್ಯ ಅವರ ಪರವಾಗಿ ತೀರ್ಪು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯಪಾಲರು ಸಿಎಂ ವಿರುದ್ಧ ನೀಡಿರುವ ತನಿಖೆ ಆದೇಶವು ಜನಾಭಿಪ್ರಾಯದ ಸರ್ಕಾರದ ವಿರುದ್ಧ ಷಡ್ಯಂತರ ನಡೆಯುತ್ತಿದೆ ಎಂಬ ಭಾವನೆ ಮೂಡಿದೆ. ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಸರ್ಕಾರ ಅಸ್ಥಿರಗೊಳಿಸಲು ನಡೆಸುತ್ತಿರುವ ಪ್ರಯತ್ನ ವಿಫಲವಾಗಲಿದೆ. ವಿರೋಧ ಪಕ್ಷವಾದ ಬಿಜೆಪಿ, ಜೆಡಿಎಸ್ ಸರ್ಕಾರದ ತಪ್ಪುಗಳನ್ನು ರಚನಾತ್ಮಕವಾಗಿ ಟೀಕೆ ಮಾಡುವ ಮೂಲಕ ತಿದ್ದುಕೊಳ್ಳಲು ಅವಕಾಶ ನೀಡಬೇಕಾಗಿತ್ತು. ಇದನ್ನು ಬಿಟ್ಟು ಜನ ಬೆಂಬಲದ ಸರ್ಕಾರವನ್ನು ತೆಗೆಯುವ ಪ್ರಯತ್ನ ಸರಿಯಾದ ಕ್ರಮವಲ್ಲ.ಕಳೆದ ಆರು ತಿಂಗಳ ಹಿಂದೆಯೇ ರಾಜ್ಯ ಸರ್ಕಾರ ಪತನವಾಗುತ್ತದೆ ಎಂದು ಬಿಜೆಪಿ ಜೆಡಿಎಸ್ ಪಕ್ಷದ ಮುಖಂಡರು ಹೇಳುತ್ತಿದ್ದರು. ಈಗ ಇದರ ಒಳ ಮರ್ಮ ಅರ್ಥವಾಗುತ್ತಿದೆ. ಇದರ ವಿರುದ್ಧ ಈಗಾಗಲೇ ನಮ್ಮ ಪಕ್ಷದ ನಾಯಕರು ಧ್ವನಿ ಎತ್ತಿದ್ದಾರೆ. ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದಾರೆ. ವಾದ ವಿವಾದಗಳನ್ನು ಆಲಿಸುತ್ತಿರುವ ನ್ಯಾಯಾದೀಶರು ಅಂತಿಮವಾಗಿ ಸರ್ಕಾರ ಪರವಾಗಿ ತೀರ್ಪು ನೀಡಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ಬಾಲರಾಜು ತಿಳಿಸಿದರು. ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ವಕ್ತಾರ ಕೆರೆಹಳ್ಳಿ ನವೀನ್, ಮುಖಂಡರಾದ ಪುಟ್ಟಸ್ವಾಮಿ, ಶಿವಲಿಂಗೇಗೌಡ, ರಾಜಣ್ಣ, ಮರಿಸ್ವಾಮಿ, ಶಿವಕುಮಾರ್ ಇದ್ದರು.