ಸಾರಾಂಶ
ಹೊಸಪೇಟೆ: ಭಾಷೆಯ ಮಹತ್ವ, ಸಾಹಿತ್ಯ ತಿಳಿದು ಅನುವಾದಿಸಬೇಕು. ಅವಸರದಿಂದ ಅನುವಾದಿಸಿದರೆ ಮೂಲ ಸಾಹಿತ್ಯಕ್ಕೆ ಧಕ್ಕೆಯಾಗಲಿದೆ ಎಂದು ಗಂಗಾವತಿಯ ಎಸ್ ಕೆಎನ್ ಜಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಜಾಜಿ ದೇವೇಂದ್ರಪ್ಪ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಸಹಯೋಗದಲ್ಲಿ ಭಾಷಾಂತರ ಅಧ್ಯಯನ ವಿಭಾಗದಲ್ಲಿ ಸೋಮವಾರ ನಡೆದ ಅಂತಾರಾಷ್ಟ್ರೀಯ ಭಾಷಾಂತರ ದಿನಾಚರಣೆ ಕಾರ್ಯಕ್ರಮದಲ್ಲಿಭಾಷಾಂತರ ಕಲೆ ಕುರಿತು ಮಾತನಾಡಿದರು.ಭಾಷೆ, ಜ್ಞಾನ ಇದ್ದ ಕೂಡಲೇ ಅನುವಾದಕರಾಗಲು ಸಾಧ್ಯವಿಲ್ಲ. ಬಹುತ್ವ ಭಾರತದಲ್ಲಿ ಅನುವಾದ ಎನ್ನುವುದು ಭಿನ್ನ ಮಾದರಿಯಾಗಿದ್ದು, ಪ್ರಾದೇಶಿಕ ಭಾಷೆಗಳು ತುಂಬ ಕಠಿಣವಾಗಿವೆ. ಇತ್ತೀಚಿನ ದಿನಗಳಲ್ಲಿ ಹಲವಾರು ಜನ ಯಥಾವತ್ತಾಗಿ ಸಿದ್ಧಾಂತಗಳನ್ನು ಓದಿ ಅನುವಾದ ಮಾಡುತ್ತಾರೆ. ಸಿದ್ಧಾಂತಗಳೇ ಬೇರೆ ಪ್ರಾಯೋಗಿಕವೇ ಬೇರೆಯಾಗಿದೆ. ಇನ್ನು ಭಾಷಾಂತರ ಮೂಲಕವೇ ಹೊಸ ಲೋಕ ಸೃಷ್ಟಿ ಮಾಡಬೇಕು. ಈ ನಿಟ್ಟಿನಲ್ಲಿ ಭಾಷಾಂತರ ವಿಭಾಗದಿಂದ ಹಲವಾರು ಭಾಷಾ ಕೃತಿಗಳು ಬಂದಿದ್ದು, ಇವು ಸಂಶೋಧನೆ ಸಂಬಂಧಿಸಿದಂತೆ ಮಾತ್ರ ಬರುತ್ತಿವೆ. ಅದರ ಆಚೆಗೂ ಬರಬೇಕು ಎಂದರು.
ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾಷೆ ಎಂಬುದು ಸಂಸ್ಕೃತಿಯ ಪ್ರತೀಕ. ಭಾಷೆ ಮನುಷ್ಯನಿಗೆ ಪ್ರಕೃತಿ ಕೊಟ್ಟ ಕೊಡುಗೆಯಾಗಿದ್ದು, ಭಾಷೆಯಿಂದ ಸಂವಹನ ಸುಲಭವಾಗುತ್ತದೆ. ಆದರೆ ಸಂಸ್ಕೃತಿ ನಾಶವಾಗುತ್ತದೆ. ಪ್ರಮುಖವಾಗಿ ಕವಿಗಳು ಮತ್ತು ವಚನಕಾರರು ಭಾಷೆಯನ್ನು ಜ್ಞಾನವನ್ನಾಗಿ ರೂಪಿಸಿಕೊಂಡಿದ್ದವರಾಗಿದ್ದರು. ಹಾಗೆಯೇ ಬಿಎಂಶ್ರೀ ಅವರು ಭಾಷಾಂತರದ ಮಹತ್ವವನ್ನು ಕಂಡುಕೊಂಡಿದ್ದರು. ಭಾಷೆಯೇ ನಮ್ಮ ಶಕ್ತಿಯಾಗಿದ್ದು, ಕನ್ನಡದ ಶ್ರೇಷ್ಠ ಗುಣವನ್ನು ಜಗತ್ತಿಗೆ ಪರಿಚಯಿಸೋಣ ಎಂದರು.ಭಾಷಾಂತರ ಅಧ್ಯಯನ ವಿಭಾಗದ ಮುಖ್ಯಸ್ಥರು ಹಾಗೂ ಐಕ್ಯೂಎಸಿ ಘಟಕದ ನಿರ್ದೇಶಕ ಡಾ.ಎ. ಮೋಹನ್ ಕುಂಟಾರ್ ಪ್ರಾಸ್ತಾವಿಕ ಮಾತನಾಡಿದರು. ಐಕ್ಯೂಎಸಿ ಘಟಕದ ಉಪನಿರ್ದೇಶಕಿ ಪ್ರಭಾ ಡಿ. ಇದ್ದರು.