ಸಾರಾಂಶ
ಚನ್ನಮ್ಮನ ಕಿತ್ತೂರು: ಹಸುಳೆ ಮಾರಾಟ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪಟ್ಟಣದ ನಿವಾಸಿ ಅಬ್ದುಲ ಗಫಾರ ಲಾಡಖಾನ ಮಾಲೀಕತ್ವದ ಜಮೀನಿನಲ್ಲಿರುವ ಮನೆಗೆ ಪೊಲೀಸ್ ಬಂದೂಬಸ್ತ್ ಒದಗಿಸಲಾಗಿದೆ. ಮಕ್ಕಳ ಮಾರಾಟ ಜಾಲದಲ್ಲಿ ಅಬ್ದುಲ್ ಗಫಾರ ಲಾಡಖಾನ ಸಿಕ್ಕಿ ಬೀಳುತ್ತಿದ್ದಂತೆಯೇ ಅವರ ಜಮೀನಿನಲ್ಲಿನ ಮನೆಯಲ್ಲಿಯೂ ಭ್ರೂಣಹತ್ಯೆ ನಡೆಸಲಾಗುತ್ತಿತ್ತು ಸೇರಿದಂತೆ ಇತರೆ ಗಂಭೀರ ಆರೋಪಗಳು ಸ್ಥಳೀಯರಿಂದ ಕೇಳಿ ಬಂದಿದ್ದವು. ಈ ಪ್ರಕರಣದಲ್ಲಿ ಕೃತ್ಯದ ಸ್ಥಳದಲ್ಲಿ ಯಾವುದೇ ಸಾಕ್ಷಿಗಳು ನಾಶವಾಗದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ. ಈ ಸಂಬಂಧ ಪೊಲೀಸ್ ಇಲಾಖೆ ಬಂದೋಬಸ್ತ್‌ಗಾಗಿ ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಮೀನಿನಲ್ಲಿರುವ ಮನೆಯ ಆಸುಪಾಸು ಸಹ ಇಂಜಕ್ಷನ್ ಕವರಗಳು ಹಾಗೂ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಪಟ್ಟ ಪರಿಕರಗಳು ಸಹ ಕಾಣಸಿಗುತ್ತಿವೆ. ಅಲ್ಲದೆ ಅಬ್ದುಲಗಫಾರ ಲಾಡಖಾನ ಮೇಲೆ ಗಂಭೀರ ಆರೋಪ ಮಾಡಿರುವ ಸ್ಥಳೀಯರು ಆರೋಪಿಯ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಹಾಗೂ ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.