ಹಿಂದೂ-ಮುಸ್ಲಿಂ ಎತ್ತಿಕಟ್ಟಿ ಸಂಸದರಿಂದ ದ್ವೇಷ ರಾಜಕಾರಣ: ಹುಲ್ಮಾರ್

| Published : Feb 09 2024, 01:45 AM IST

ಹಿಂದೂ-ಮುಸ್ಲಿಂ ಎತ್ತಿಕಟ್ಟಿ ಸಂಸದರಿಂದ ದ್ವೇಷ ರಾಜಕಾರಣ: ಹುಲ್ಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಶಿಕಾರಿಪುರ ಪಟ್ಟಣದಲ್ಲಿ ಯುವಕನಿಗೆ ಚೂರಿ ಇರಿತದ ಪ್ರಕರಣದಲ್ಲಿ ರಾಘವೇಂದ್ರ ರಾಜಕೀಯ ಬೇಳೆ ಬೇಯಿಸುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಪಟ್ಟಣದಲ್ಲಿ ಯುವಕನೋರ್ವನಿಗೆ ಚೂರಿ ಇರಿತದ ಪ್ರಕರಣಕ್ಕೆ ಅನವಶ್ಯಕವಾಗಿ ಹಿಂದೂ ಮುಸ್ಲಿಂ ಎಂದು ಎತ್ತಿಕಟ್ಟಿ ದ್ವೇಷದ ರಾಜಕಾರಣದ ಮೂಲಕ ಚುನಾವಣಾ ಪೂರ್ವದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಂಸದ ರಾಘವೇಂದ್ರ ಸಂಚು ರೂಪಿಸಿದ್ದು, ಈ ಷಡ್ಯಂತ್ರದ ಭಾಗವಾಗಿ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ವಿನಾಕಾರಣ ಎಳೆದು ತಂದಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್ ಸಂಸದರ ವಿರುದ್ಧ ಕಿಡಿಕಾರಿದರು.

ಗುರುವಾರ ಪಟ್ಟಣದ ಶಿಶು ವಿಹಾರ ರಸ್ತೆಯಲ್ಲಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಖುದ್ದು ರಾಘವೇಂದ್ರ ಸಂಸದರಾಗಿದ್ದ ಸಂದರ್ಭದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಇಂದಿಗೂ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ದೊರೆತಿಲ್ಲ ಎಂಬುದನ್ನು ಮರೆತಿದ್ದಾರೆ ಎಂದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಗಳಿಸಿ ಕೇವಲ 6-8 ತಿಂಗಳಾಗಿದ್ದು ಇದುವರೆಗೂ ಸಂಪೂರ್ಣ ಪೊಲೀಸ್ ಸ್ಟೇಷನ್ ಕಪಿಮುಷ್ಠಿಯಲ್ಲಿಟ್ಟುಕೊಂಡಿರುವ ಸಂಸದರು ಸಹಜ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ವರ್ಗವಾದಲ್ಲಿ ಯಡಿಯೂರಪ್ಪನವರಿಂದ ಒತ್ತಡದ ಮೂಲಕ ರದ್ದುಪಡಿಸುತ್ತಿರುವುದು ಸಹಜವಾಗಿದೆ ಎಂದರು.

ಇದೀಗ ಸುಶೀಲ ಎಂಬ ಅಮಾಯಕನಿಗೆ ಚೂರಿ ಇರಿತ ಪ್ರಕರಣದಲ್ಲಿ ಪೊಲೀಸ್ ಸ್ಟೇಷನ್ ಮುಂಭಾಗ ಧರಣಿ ನಡೆಸಿ ಹಿಂದೂ ಮುಸ್ಲಿಂ ಎಂದು ಪ್ರತ್ಯೇಕಿಸಿ ದ್ವೇಷದ ರಾಜಕಾರಣದಿಂದ ಚುನಾವಣೆ ಎದುರಿಸಲು ಎಲ್ಲ ಸಿದ್ಧತೆಯನ್ನು ಕೈಗೊಳ್ಳುತ್ತಿದ್ದಾರೆ ಚೂರಿ ಇರಿತ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ,ಸಿದ್ದರಾಮಯ್ಯನವರನ್ನು ಎಳೆದು ತರುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.

ಚೂರಿ ಇರಿತದ ಪ್ರಕರಣ ಸಂಭವಿಸಿದ ಕೂಡಲೇ ಸಂಸದರು ಸ್ಥಳಕ್ಕೆ ಧಾವಿಸಿದಾಗ ಸಮ್ಮುಖದಲ್ಲಿ ನೆರೆದಿದ್ದವರು ಗಾಂಜಾ, ಅಫೀಮು ಘಟನೆಗೆ ಕಾರಣ ಎಂದು ಆರೋಪಿ ಸುತ್ತಿದ್ದು, ಈ ಜಾಲ ಹೆಚ್ಚಾಗಲು ಕಾರಣ ಯಾರು ಎಂಬ ಬಗ್ಗೆ ಪ್ರಶ್ನಿಸಿಕೊಳ್ಳುವಂತೆ ತಿಳಿಸಿದ ಅವರು 2015 ರ ಮೇ 13 ರಂದು ಕಾನೂರು ದುರ್ಗಮ್ಮನ ಕೇರಿಯಲ್ಲಿ ಕಿರಣ ಕುಮಾರ್ ಎಂಬ ಯುವಕನ ಹತ್ಯೆಯಾಗಿದ್ದು, 2021 ರ ಜ.1 ರಂದು ಆಶ್ರಯ ಬಡಾವಣೆಯಲ್ಲಿ ಗೋಪಿ ಎಂಬ ಯುವಕನ ಹತ್ಯೆಯಾಗಿದ್ದು ಇಂದಿಗೂ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ದೊರೆತಿಲ್ಲ ಆ ಸಂದರ್ಭದಲ್ಲಿ ಇಲ್ಲದ ಪ್ರತಿಭಟನೆ ಧರಣಿ ಇಂದೇಕೆ? ಎಂದು ಪ್ರಶ್ನಿಸಿದರು.

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಹಿಂದೂ ಮತಗಳಿಸುವ ಏಕೈಕ ದುರುದ್ದೇಶದಿಂದ ಹಿಂದೂ ಮುಸ್ಲಿಂ ಎಂದು ಸಮಾಜದಲ್ಲಿ ದ್ವೇಷವನ್ನು ಹುಟ್ಟಿಹಾಕದಂತೆ ತಿಳಿಸಿದ ಅವರು, ಕಾಂಗ್ರೆಸ್ ಪಕ್ಷ ಮಾತ್ರ ಜಾತ್ಯಾತೀತ ನಿಲುವು ಹೊಂದಿದ್ದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜಾರಿಗೊಳಿಸಿದ 5 ಗ್ಯಾರೆಂಟಿಯಿಂದಾಗಿ ಕಂಗೆಟ್ಟು ಕೋಮು ಸಂಘರ್ಘ ಹುಟ್ಟಿಹಾಕಿ ಚುನಾವಣೆಯಲ್ಲಿ ಗೆಲ್ಲುವ ತಂತ್ರಗಾರಿಕೆ ಪ್ರತಿಬಾರಿ ನಡೆಯಲು ಸಾದ್ಯವಿಲ್ಲ ಸೂತಕದ ಮನೆಯಲ್ಲಿ ರಾಜಕೀಯಕ್ಕೆ ಈ ಬಾರಿ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.

ತರಲಘಟ್ಟ ಗ್ರಾಮದಲ್ಲಿ ನಡೆದ ಹೋರಿ ಹಬ್ಬದಲ್ಲಿ ಅನಾವಶ್ಯಕವಾಗಿ ಯುವಕರ ವಿರುದ್ಧ ದೂರು ದಾಖಲಿಸಲಾಗಿದ್ದು, ಬಿಜೆಪಿ ಕಚೇರಿಗೆ,ಸಂಸದರ ಮನೆ ಕಡೆ ಹೋಗದವರು ಹಿಂದೂಗಳಲ್ಲ ಎಂಬ ರಾಜಕೀಯ ದೊಂಬರಾಟ ಹೆಚ್ಚು ಕಾಲ ನಡೆಯುವುದಿಲ್ಲ ಎಂದ ಅವರು, ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಹಿಂದೆ ಯಡಿಯೂರಪ್ಪನವರು ಜೈಲಿಗೆ ಹೋದಾಗ ಏಕೆ ಪ್ರತಿಭಟಿಸಲಿಲ್ಲ ? ಇದೀಗ ಜಾತಿ ಎಂಬ ಏಕೈಕ ಕಾರಣಕ್ಕೆ ರಾಘವೇಂದ್ರರನ್ನು ಪುನಃ ಗೆಲ್ಲಿಸುವಂತೆ ಕಾರ್ಯಕರ್ತರಲ್ಲಿ ಗೊಂದಲ ಹುಟ್ಟಿಹಾಕದಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಡಿಕೆಶಿ ಅಭಿಮಾನಿ ಬಳಗದ ಅಧ್ಯಕ್ಷ ಸುರೇಶ್ ಕಲ್ಮನೆ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ತಿಮ್ಮಣ್ಣ, ಪ್ರ.ಕಾ ವೀಣಾ ನೆಲವಾಗಿಲು, ಯುವ ಕಾಂಗ್ರೆಸ್ ಅಧ್ಯಕ್ಷ ನಾಗರಾಜನಾಯ್ಕ, ಎಸ್ಸಿ ಘಟಕದ ಅಧ್ಯಕ್ಷ ಮಂಜಾನಾಯ್ಕ,ತಾ.ಪಂ ಮಾಜಿ ಸದಸ್ಯ ಈಶಣ್ಣ ಕಲವತ್ತಿ, ಕಸಬಾ ಬ್ಯಾಂಕ್ ಅಧ್ಯಕ್ಷ ಬಡಗಿ ಪಾಲಾಕ್ಷಪ್ಪ, ಮುಷೀರ್ ಅಹ್ಮದ್,ಮಂಜುನಾಥ್, ಮಾಲತೇಶ, ಹಾಲೇಶ್, ಪ್ರಕಾಶ್, ರಾಜು ಮತ್ತಿತರರು ಉಪಸ್ಥಿತರಿದ್ದರು.