ಸಾಮಾಜಿಕ ಸ್ವಾಸ್ಥ್ಯದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ದ್ವೇಷ ಭಾಷಣ ತಡೆ ಮಸೂದೆ ಸ್ವಾಗತಾರ್ಹವಾಗಿದ್ದು, ಬಿಜೆಪಿಯವರು ಹೊರತುಪಡಿಸಿ ರಾಜ್ಯದ ಎಲ್ಲ ಜನರು ಇದನ್ನು ಮೌನವಾಗಿ ಒಪ್ಪಿಕೊಂಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.

ಶಿವಮೊಗ್ಗ: ಸಾಮಾಜಿಕ ಸ್ವಾಸ್ಥ್ಯದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ದ್ವೇಷ ಭಾಷಣ ತಡೆ ಮಸೂದೆ ಸ್ವಾಗತಾರ್ಹವಾಗಿದ್ದು, ಬಿಜೆಪಿಯವರು ಹೊರತುಪಡಿಸಿ ರಾಜ್ಯದ ಎಲ್ಲ ಜನರು ಇದನ್ನು ಮೌನವಾಗಿ ಒಪ್ಪಿಕೊಂಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾಜದಲ್ಲಿ ದ್ವೇಷ ಬಿತ್ತುವ, ಉದ್ರೇಕಗೊಳಿಸುವ ಭಾಷಣಗಳೇ ಇಂದು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಾಂತಿ, ಸಹನೆ ಕಾಪಾಡುವ ಹಿನ್ನೆಲೆಯಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದಿದೆ. ಆದರೆ, ಬಿಜೆಪಿಯವರಿಗೆ ಮಾತ್ರ ಇದರಿಂದ ದೊಡ್ಡ ಆತಂಕವಾಗಿದೆ. ಅದರಲ್ಲೂ ಕೆಲವು ಬಿಜೆಪಿ ನಾಯಕರುಗಳಿಗೆ ಇದು ನುಂಗಲಾರದ ತುತ್ತಾಗಿದೆ ಎಂದು ಟೀಕಿಸಿದರು.

ಬಿಜೆಪಿಯವರಿಗೆ ದ್ವೇಷ ಭಾಷಣ ಮಾಡುವುದೇ ನಮ್ಮ ಹಕ್ಕು ಎಂದು ಭಾವಿಸಿಕೊಂಡಿದ್ದರು. ನಮ್ಮ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಈ ಕಾಯ್ದೆಯನ್ನು ಅವರು ವಿರೋಧಿಸುತ್ತಿದ್ದಾರೆ. ಇದು ಖಂಡನಾರ್ಹವಾದುದು. ಮಾತನಾಡುವುದು ಹೇಗೆ ಮೂಲಭೂತ ಹಕ್ಕೋ ಹಾಗೆಯೇ ಮಾತನಾಡದೇ ಇರುವುದೂ ಒಂದು ಹಕ್ಕಾಗಿದೆ. ಈಗ ಬಿಜೆಪಿಯವರಿಗೆ ನಾವು ದ್ವೇಷ ಭಾಷಣ ಮಾಡುವ ಹಾಗಿಲ್ಲವಲ್ಲ ಎಂಬ ಆತಂಕ ಶುರುವಾಗಿದ್ದು, ತಳಮಳಗೊಳ್ಳುತ್ತಿದ್ದಾರೆ ಎಂದರು.

ಬಿಜೆಪಿಯವರಿಗೆ ಮಾತ್ರ ಈ ಕಾಯ್ದೆಯಿಂದ ಏಕೆ ತಳಮಳವೋ ಗೊತ್ತಿಲ್ಲ. ಆದರೆ, ಈ ಕಾಯ್ದೆ ಎಲ್ಲರಿಗೂ ಅನ್ವಯಿಸುತ್ತದೆ. ದ್ವೇಷ ಭಾಷಣ ಮಾಡುವ ಕಾಂಗ್ರೆಸ್, ದಳ, ಬಿಜೆಪಿ ಸೇರಿದಂತೆ ರಾಜಕೀಯ ನಾಯಕರು, ಯಾವುದೇ ಧರ್ಮದವರು ಮತ್ತೊಂದು ಧರ್ಮದ ವಿರುದ್ಧ ದ್ವೇಷ ಕಾರಿದರೆ ಅವರಿಗೂ ಈ ಕಾಯ್ದೆ ಅನ್ವಯವಾಗುತ್ತದೆ. ಹಾಗಾಗಿ ಈ ಕಾಯ್ದೆ ಸಾರ್ವತ್ರಿಕವಾದುದು. ಇದನ್ನು ವಿರೋಧಿಸುವ ಬಿಜೆಪಿಯವರಿಗೆ ಏಕೆ ಸಂಕಟವೋ ಗೊತ್ತಿಲ್ಲ. ಇನ್ನಾದರೂ ಧರ್ಮ ನಿಂದನೆ, ಜಾತಿ ನಿಂದನೆ ಮಾತನಾಡುವವರು ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದರು.

ಪೊಲೀಸ್ ಇಲಾಖೆಗೆ ಇನ್ನಷ್ಟು ಸುಧಾರಣೆ ಬೇಕಿದೆ:

ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಕೊಡುಗೆಯನ್ನೇ ನೀಡಿದೆ. ವಾರ್ಷಿಕವಾಗಿ 13 ತಿಂಗಳ ವೇತನ ಘೋಷಣೆ ಮಾಡಿದೆ. ಅಂದರೆ ಒಂದು ತಿಂಗಳು ಹೆಚ್ಚುವರಿ ಸಂಬಳ ಅವರಿಗೆ ಸಿಗುತ್ತದೆ. ಇಷ್ಟಾದರೂ ಪೊಲೀಸ್ ಇಲಾಖೆಗೆ ಮತ್ತಷ್ಟು ಸುಧಾರಣೆ ಬೇಕಾಗಿದೆ. ಅವರ ಸೇವಾ ಹಿರಿತನದ ಉಲ್ಲಂಘನೆಯಾಗುತ್ತಿದೆ. ಔರಾದ್ಕರ್ ವರದಿಯಲ್ಲಿ ತಾರತಮ್ಯವಿದೆ. ಅದನ್ನು ಸರಿಪಡಿಸಬೇಕು. ಪೊಲೀಸರಿಗೆ ನೀಡುವ ರಿಸ್ಕ್ ಅಲಯನ್ಸ್ ಎಲ್ಲರಿಗೂ ಸಮಾನವಾಗಿ ಸಿಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪೊಲೀಸರಿಗೆ ಮತ್ತಷ್ಟು ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಕಾಂಗ್ರೆಸ್ ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಶಿವಣ್ಣ, ಪ್ರಮುಖರಾದ ಯು.ಶಿವಾನಂದ್, ಸುವರ್ಣಾ ನಾಗರಾಜ್, ಹಿರಣ್ಣಯ್ಯ, ಧೀರರಾಜ್, ಲಕ್ಷ್ಮಣ್, ಸ್ಟೆಲಾ ಮಾರ್ಟಿನ್, ಶಮೀಂ ಬಾನು, ಕೃಷ್ಣಪ್ಪ, ಹರೀಶ್, ಪಾಟೀಲ್ ಇದ್ದರು.