ಸರ್ಕಾರ ಜಾರಿಗೊಳುಸುತ್ತಿರುವ ವಿಧೇಯಕ ಸಂವಿಧಾನಕ್ಕೆ ವಿರುದ್ಧವಾಗಿದ್ದು, ನಿರ್ಧಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದ ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು, ಈ ವಿಧೇಯಕ ನಾಗರಿಕರ ಮೂಲ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಅಭಿವ್ಯಕ್ತಿ ಸ್ವಾತಂತ್ರವನ್ನು ಕಿತ್ತುಕೊಳ್ಳುತ್ತದೆ ಎಂದರು.

ಹುಬ್ಬಳ್ಳಿ:

ರಾಜ್ಯ ಕಾಂಗ್ರೆಸ್​ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ ವಿರುದ್ಧ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಇಲ್ಲಿನ ಮಿನಿ ವಿಧಾನಸೌಧದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಸರ್ಕಾರ ಜಾರಿಗೊಳುಸುತ್ತಿರುವ ವಿಧೇಯಕ ಸಂವಿಧಾನಕ್ಕೆ ವಿರುದ್ಧವಾಗಿದ್ದು, ನಿರ್ಧಾರ ಹಿಂಪಡೆಯಬೇಕು ಎಂದು ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು. ಈ ವಿಧೇಯಕ ನಾಗರಿಕರ ಮೂಲ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಅಭಿವ್ಯಕ್ತಿ ಸ್ವಾತಂತ್ರವನ್ನು ಕಿತ್ತುಕೊಳ್ಳುತ್ತದೆ. ಸರ್ಕಾರದ ವಿರುದ್ಧ ಟೀಕೆ, ಸಾಮಾಜಿಕ ಚರ್ಚೆ, ವ್ಯಂಗ್ಯ ಮಾಡುವುದು ಅಥವಾ ಸತ್ಯ ಹೇಳುವುದನ್ನು ಸಹ ದ್ವೇಷವೆಂದು ಪರಿಗಣಿಸುವ ಅಪಾಯವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೃಹಲಕ್ಷ್ಮೀ ಯೋಜನೆ ಅಡಿ ₹5 ಸಾವಿರ ಕೋಟಿ ಹಗರಣದ ತನಿಖೆ ನಡೆಸುವಂತೆ ಒತ್ತಾಯಿಸಿದ ಬಿಜೆಪಿ ಕಾರ್ಯಕರ್ತರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ವಿರುದ್ಧ ಘೋಷಣೆ ಕೂಗಿದರು. ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹಾಳಾಗಿದ್ದರೂ ಮುಖ್ಯಮಂತ್ರಿ ಗಮನ ಹರಿಸುತ್ತಿಲ್ಲ. ಸುಗಮ ಆಡಳಿತ ನಡೆಸಲು ಸಿಎಂ ಸಿದ್ದರಾಮಯ್ಯ ಯೋಗ್ಯವಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿದರು.

ಧಾರವಾಡ ಜಿಲ್ಲೆಯಲ್ಲಿಯೂ ಅಭಿವೃದ್ಧಿ ಕಾಮಗಾರಿಗಳು ಹಿಂದುಳಿದಿವೆ ಎಂದು ಆರೋಪಿಸಿ ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಅವರ ವಿರುದ್ಧವೂ ಘೊಷಣೆ ಕೂಗಿದರು.

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರ್‌ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಈ ವೇಳೆ ವಿಪ ಸದಸ್ಯ ಪ್ರದೀಪ ಶೆಟ್ಟರ್, ಪೂರ್ವ ಕ್ಷೇತ್ರದ ಅಧ್ಯಕ್ಷ ಮಂಜುನಾಥ ಕಾಟ್ಕರ, ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಈಶ್ವರಗೌಡ ಪಾಟೀಲ, ಪ್ರಭು ನವಲಗುಂದಮಠ, ನಾರಾಯಣ ಜರತಾರರ, ಶಿವು ಮೆಣಸಿನಕಾಯಿ, ವಸಂತ ನಾಡಜೋಶಿ, ರಂಗಾ ಕಠಾರೆ, ಅನುಪ ಬಿಜವಾಡ, ವೆಂಕಟೇಶ ಕಾಟವೆ, ಮಹೇಂದ್ರ ಕೌತಾಳ, ಲಕ್ಷ್ಮಿಕಾಂತ ಘೋಡಕೆ, ರಾಜು ಕೋರ್ಯಾಣಮಠ, ರಾಜು ಕಾಳೆ, ಅಕ್ಕಮ್ಮ ಹೆಗಡೆ, ನಾಗರತ್ನಾ ಬಳ್ಳಾರಿ, ಸವಿತಾ ಚವ್ಹಾಣ ಸೇರಿ ಹಲವರಿದ್ದರು.