ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಹ್ಯಾಟ್ರಿಕ್ ಸಾಧಿಸಿ: ಡೀಸಿ

| Published : Feb 08 2024, 01:35 AM IST

ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಹ್ಯಾಟ್ರಿಕ್ ಸಾಧಿಸಿ: ಡೀಸಿ
Share this Article
  • FB
  • TW
  • Linkdin
  • Email

ಸಾರಾಂಶ

2019-20 ಮತ್ತು 2020-21 ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸುವ ಮೂಲಕ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿದೆ.

ಶೇ.100 ರಷ್ಟು ಫಲಿತಾಂಶ ಸಾಧಿಸಿದ್ದ 106 ಶಾಲೆಗಳ ಮುಖ್ಯಸ್ಥರಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಈಗಾಗಲೇ 2 ಬಾರಿ ಮೊದಲ ಶ್ರೇಯಾಂಕವನ್ನು ರಾಜ್ಯ ಮಟ್ಟದಲ್ಲಿ ಗಳಿಸಿದ್ದು, ಈ ಬಾರಿಯೂ ಪ್ರಥಮ ಶ್ರೇಯಾಂಕ ಗಳಿಸಿ ಹ್ಯಾಟ್ರಿಕ್ ಸಾಧಿಸಲು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಬುಧವಾರ 2021-22ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಶೇ.100 ರಷ್ಟು ಫಲಿತಾಂಶ ಗಳಿಸಿದ 106 ಶಾಲೆಗಳ ಮುಖ್ಯಸ್ಥರಿಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಸನ್ಮಾನಿಸಿ ಪ್ರೇರಣಾ ನುಡಿಗಳನ್ನಾಡಿದ ಅವರು, 2019-20 ಮತ್ತು 2020-21 ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸುವ ಮೂಲಕ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿದೆ. ಈ ಬಾರಿಯೂ ಪ್ರಥಮ ಸ್ಥಾನ ಕಾಯ್ದುಕೊಳ್ಳಲು ಶಿಕ್ಷಕರು ಅಂತಿಮ ಹಂತದ ಯುಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

2021-22ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ 106 ಶಾಲೆಗಳು ಶೇ. 100 ರಷ್ಟು ಫಲಿತಾಂಶವನ್ನು ಗಳಿಸಿರುವುದು ಅಭಿನಂದನಾರ್ಹ. ಜಿಲ್ಲೆಯ ಎಲ್ಲ ಶಾಲೆಗಳೂ ಈ ಬಾರಿ ಉತ್ತಮ ಫಲಿತಾಂಶಕ್ಕೆ ಭಾಜನವಾಗಬೇಕು. ಈ ಬಾರಿಯ ಶೈಕ್ಷಣಿಕ ಸಾಲಿನ ಆರಂಭದಿಂದಲೂ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆಯ ಸಮನ್ವಯದೊಂದಿಗೆ ವಿದ್ಯಾರ್ಥಿಗಳಲ್ಲಿ ಕಲಿಕಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಉತ್ತೇಜಿಸುವ ಕ್ರಮಗಳನ್ನು ಮಾಡಿದೆ ಎಂದರು.

ಕೋಚಿಮುಲ್ ಮಹಾ ಮಂಡಳಿಯವರು ಪ್ರತಿ ಶಾಲೆಗೆ ಶಿಕ್ಷಕರ ಕೈಪಿಡಿ ಸೆಟ್ ಗಳನ್ನು ವಿತರಿಸಿದ್ದಾರೆ. ತೊಂಡೆಬಾವಿಯ ಎಸಿಸಿ ಸಿಮೆಂಟ್ ಕಂಪನಿಯವರು ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಕಲಿಕಾ ಸಮೃದ್ಧಿ ಪುಸ್ತಕಗಳನ್ನು ವಿತರಿಸಿದ್ದಾರೆ. ಈ ಪುಸ್ತಕಗಳು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿವೆ. ಒಟ್ಟಾರೆ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿಯ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉತ್ತಮ ಫಲಿತಾಂಶ ಬರಬೇಕಾದರೆ ಪರೀಕ್ಷೆಯ ಕೊನೆಯ ಗಳಿಗೆಯವರೆಗೂ ಶಿಕ್ಷಕರು ಕ್ರಿಯಾಶೀಲರಾಗಿ ಕಾರ್ಯೋನ್ಮುಖರಾಗಬೇಕು. ವಿದ್ಯಾರ್ಥಿಗಳು ಈ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಜಿಲ್ಲೆಯು ಮೊತ್ತೊಮ್ಮೆ ಪ್ರಥಮ ಸ್ಥಾನಗಳಿಸಲು ಕಾರಣೀಭೂತರಾಗಬೇಕು ಎಂದರು.

ಜಿಪಂ ಸಿಇಒ ಪ್ರಕಾಶ್.ಜಿ.ಟಿ.ನಿಟ್ಟಾಲಿ ಮಾತನಾಡಿ, ಕಳೆದ ಬಾರಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ರಾಜ್ಯದಲ್ಲೇ ಜಿಲ್ಲೆ 5ನೇ ಸ್ಥಾನ ಗಳಿಸಿತ್ತು, ಈ ಬಾರಿ ಈ ಶ್ರೇಯಾಂಕವನ್ನು ಉತ್ತಮ ಪಡಿಸಬೇಕು. ಆ ನಿಟ್ಟಿನಲ್ಲಿ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ತೊಂಡೆಬಾವಿಯ ಎಸಿಸಿ ಸಿಮೆಂಟ್ ಕಂಪನಿಯ ಮುಖ್ಯಸ್ಥ ಹಿತೇಶ್ ಗೊಯೆಲ್ ಮಾತನಾಡಿ, ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಕಳೆದ 3 ವರ್ಷಗಳಿಂದ ‘ಕಲಿಕಾ ಸಮೃದ್ಧಿ’ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಸಹಕಾರಿಯಾಗಿದೆ. ಈ ವರ್ಷ 28,000 ಪುಸ್ತಕಗಳನ್ನು ವಿತರಿಸಲಾಗಿದೆ. ಇಂತಹ ಅವಕಾಶವನ್ನು ನೀಡಿದ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆಗೆ ಧನ್ಯವಾದಗಳನ್ನರ್ಪಿಸಿದರು.

ಕಾರ್ಯಕ್ರಮದಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆದ 175 ಶಾಲೆಗಳ ಮುಖ್ಯಸ್ಥರನ್ನು 25 ಸಾವಿರ ರು.ಗಳ ಬಹುಮಾನ ಹಾಗೂ ಪಾರಿತೋಷಕದೊಂದಿಗೆ ಸನ್ಮಾನಿಸಲಾಯಿತು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬೈಲಾಂಜನಪ್ಪ, ಜಿಲ್ಲಾ ಡಯಟ್ ಪ್ರಾಂಶುಪಾಲರು ಮುನಿಕೆಂಪೇಗೌಡ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಪ್ರೌಢಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿದ್ದರು.

----------------

ಎಸ್.ಎಸ್.ಎಲ್.ಸಿಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆದ 175 ಶಾಲೆಗಳ ಮುಖ್ಯಸ್ಥರನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸನ್ಮಾನಿಸಿದರು.