ಜಿಲ್ಲಾಧಿಕಾರಿ ರಾಹುಲ್‌ ತುಕಾರಾಮ್‌ ಪಾಂಡ್ವೆ ಅವರು ಮಂಗಳವಾರ ಯಾದಗಿರಿ ತಾಲೂಕಿನ ಮುದ್ನಾಳ ಹಾಗೂ ಹೊನಗೇರಾ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಭೇಟಿ ನೀಡಿ, ಶಾಲೆಯ ಶೈಕ್ಷಣಿಕ ಹಾಗೂ ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲಾಧಿಕಾರಿ ರಾಹುಲ್‌ ತುಕಾರಾಮ್‌ ಪಾಂಡ್ವೆ ಅವರು ಮಂಗಳವಾರ ಯಾದಗಿರಿ ತಾಲೂಕಿನ ಮುದ್ನಾಳ ಹಾಗೂ ಹೊನಗೇರಾ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಭೇಟಿ ನೀಡಿ, ಶಾಲೆಯ ಶೈಕ್ಷಣಿಕ ಹಾಗೂ ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.

ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ಪ್ರೇರೇಪಿಸಿದ ರಾಹುಲ್‌, 625ಕ್ಕೆ 625 ಅಂಕಗಳನ್ನು ಗಳಿಸುವ ಗುರಿಯನ್ನು ಇಟ್ಟುಕೊಂಡು, ಅದನ್ನು ಸಾಧಿಸುವ ನಿಟ್ಟಿನಲ್ಲಿ ಶ್ರಮಿಸಬೇಕು, ಇಂಗ್ಲಿಷ್‌, ಗಣಿತ, ವಿಜ್ಞಾನ ಸೇರಿದಂತೆ ಎಲ್ಲ ವಿಷಯಗಳಿಗೆ ನಿಗದಿತ ಸಮಯವನ್ನು ಹಂಚಿಕೆ ಮಾಡಿಕೊಂಡು, ಪ್ರತಿದಿನ ಅಭ್ಯಾಸ ಮಾಡುವಂತೆ ಸಲಹೆ ನೀಡಿ, ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಮಕ್ಕಳ ಶೈಕ್ಷಣಿಕ ಸಿದ್ಧತೆ ಹಾಗೂ ಪರೀಕ್ಷಾ ತಯಾರಿಕೆಯ ಕುರಿತು ಮಾಹಿತಿ ಪಡೆದರು. ವಿದ್ಯಾರ್ಥಿಗಳೊಂದಿಗೆ ಇಂಗ್ಲಿಷ್‌ ವಿಷಯದ ಪ್ರಶ್ನೆಪತ್ರಿಕೆಯನ್ನು ವಿಶ್ಲೇಷಿಸಿ, ಪ್ರಶ್ನೆಗಳನ್ನು ಅರ್ಥೈಸಿಕೊಂಡು ಉತ್ತರಿಸುವ ವಿಧಾನ, ಸಮಯ ನಿರ್ವಹಣೆ ಹಾಗೂ ನಿರಂತರ ಅಭ್ಯಾಸದ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದ ಜಿಲ್ಲಾಧಿಕಾರಿ ರಾಹುಲ್‌, ಅವರ ಶೈಕ್ಷಣಿಕ ಗುರಿಗಳು ಹಾಗೂ ಸಮಸ್ಯೆಗಳ ಕುರಿತು ವಿಚಾರಿಸಿದರು. ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಬಗ್ಗೆ ಆತ್ಮವಿಶ್ವಾಸ ಮೂಡಿಸುವುದು ಹಾಗೂ ಉತ್ತಮ ಫಲಿತಾಂಶಕ್ಕಾಗಿ ಅಗತ್ಯ ಮಾರ್ಗದರ್ಶನ ನೀಡುವುದು ಶಿಕ್ಷಕರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಅಕ್ಷರ ದಾಸೋಹ ಯೋಜನೆಯಡಿ ಮಕ್ಕಳಿಗೆ ನೀಡಲಾಗುತ್ತಿರುವ ಮಧ್ಯಾಹ್ನದ ಬಿಸಿಯೂಟವನ್ನು ಮಕ್ಕಳೊಂದಿಗೆ ಕುಳಿತು ಸವಿದರು. ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ದೊರೆಯುವುದು ಅತ್ಯಂತ ಮುಖ್ಯವಾಗಿದ್ದು, ಆರೋಗ್ಯಕರ ಬೆಳವಣಿಗೆ ಹಾಗೂ ಉತ್ತಮ ಕಲಿಕೆಗೆ ಪೌಷ್ಟಿಕ ಆಹಾರ ಸಹಕಾರಿಯಾಗಿದೆ ಎಂದು ತಿಳಿಸಿದರು. ಶಾಲೆಯಲ್ಲಿ ನೀಡಲಾಗುವ ಮೊಟ್ಟೆಯನ್ನು ಎಲ್ಲಾ ಮಕ್ಕಳು ಸೇವಿಸುವಂತೆ ಸಲಹೆ ನೀಡಿದರು.

ಮುದ್ನಾಳ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಳೆದ ವರ್ಷ ಶೇ.100ರಷ್ಟು ಫಲಿತಾಂಶ ಸಾಧಿಸಿ ಶಾಲೆಗೆ ಕೀರ್ತಿ ತಂದಿರುವುದನ್ನು ಶ್ಲಾಘಿಸಿದ ಜಿಲ್ಲಾಧಿಕಾರಿಗಳು, ಪ್ರಸಕ್ತ ಸಾಲಿನಲ್ಲಿಯೂ ಉತ್ತಮ ಫಲಿತಾಂಶ ಸಾಧಿಸುವಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪ್ರತಿ ವಿದ್ಯಾರ್ಥಿಯೂ ಶೇ.80ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸುವ ಗುರಿ ಹೊಂದಿ, ನಿಯಮಿತ ಅಧ್ಯಯನ, ಪುನರಾವರ್ತನೆ ಹಾಗೂ ಮಾದರಿ ಪ್ರಶ್ನೆಪತ್ರಿಕೆಗಳ ಅಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಡಿಡಿಪಿಐ ಚೆನ್ನಬಸಪ್ಪ ಮುಧೋಳ, ತಾಲೂಕು ಅಕ್ಷರ ದಾಸೋಹ ಅಧಿಕಾರಿ ಚೆನ್ನಪ್ಪ ಕಲ್ಮನಿ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಹಣಮಂತರೆಡ್ಡಿ ಹಾಗೂ ಸಾಬಣ್ಣ ಪೂಜಾರಿ, ಶಾಲೆಯ ಮುಖ್ಯಗುರು ಗ್ಯಾನಪ್ಪ ದಾಸನ್ ಹಾಗೂ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

---

ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ದೊರೆಯುವುದು ಅತ್ಯಂತ ಮುಖ್ಯವಾಗಿದ್ದು, ಆರೋಗ್ಯಕರ ಬೆಳವಣಿಗೆ ಹಾಗೂ ಉತ್ತಮ ಕಲಿಕೆಗೆ ಪೌಷ್ಟಿಕ ಆಹಾರ ಸಹಕಾರಿ. ಪ್ರತಿ ವಿದ್ಯಾರ್ಥಿಯೂ ಶೇ.80ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸುವ ಗುರಿ ಹೊಂದಿ, ನಿಯಮಿತ ಅಧ್ಯಯನ, ಪುನರಾವರ್ತನೆ ಹಾಗೂ ಮಾದರಿ ಪ್ರಶ್ನೆಪತ್ರಿಕೆಗಳ ಅಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.

ರಾಹುಲ್‌ ತುಕಾರಾಂ ಪಾಂಡ್ವೆ, ಜಿಲ್ಲಾಧಿಕಾರಿ, ಯಾದಗಿರಿ