ಕನ್ನಡಪ್ರಭ ವಾರ್ತೆ, ಹಾಸನ:
1972ರ ಭಾರತ-ಪಾಕಿಸ್ತಾನ ಯುದ್ಧದ ಬಳಿಕ ನಮ್ಮ ದೇಶದಲ್ಲಿ ಬೆಲೆ ಏರಿಕೆ ಉಂಟಾಗಿತ್ತು. ಆಗ ಪ್ರಧಾನಿ ಇಂದಿರಾ ಗಾಂಧಿಯವರು ರಾಮಲೀಲಾ ಮೈದಾನದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುವಾಗ, ಸಕ್ಕರೆ, ಸೀಮೆಎಣ್ಣೆ ಬೆಲೆ ಹೆಚ್ಚಾಗಿದೆ. ಹಾಗಾಗಿ, ಜನರು ವಾರದಲ್ಲಿ ಒಂದು ದಿನ ಟೀ ಕುಡಿಯುವುದನ್ನು ಬಿಡಿ, ಒಂದು ಹೊತ್ತು ಊಟ ಕಡಿಮೆ ಮಾಡಿ ಎಂದು ಮನವಿ ಮಾಡಿದ್ದರು. ಇದನ್ನು ನೀವು ಮರೆತಿರಾ? ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತಿರುಗೇಟು ನೀಡಿದ್ದಾರೆ.ಪೆಟ್ರೋಲ್ ಅನ್ನು ಮಿತವಾಗಿ ಬಳಸಿ ಎಂಬ ಪ್ರಧಾನಿ ಮೋದಿ ಹೇಳಿಕೆಯನ್ನು ಟೀಕಿಸಿದ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಮಾಜಿ ಪ್ರಧಾನಿ, ಭಾರತ-ಬಾಂಗ್ಲಾ ಯುದ್ಧದ ವೇಳೆಯೂ ದೇಶ ಸಂಕಷ್ಟ ಎದುರಿಸಿತ್ತು. ಜಾಗತಿಕ ಸಮಸ್ಯೆಯಿಂದಾಗಿ ಇಂದೂ ಕೂಡ ಅದೇ ಪರಿಸ್ಥಿತಿ ಇದೆ. ಸಿದ್ದರಾಮಯ್ಯ ಅವರ ಅನುಭವದ ಬಗ್ಗೆ ನನಗೆ ಗೌರವ ಇದೆ. ‘ನೀವು ಜವಾಬ್ದಾರಿಯುತ ಸ್ಥಾನದಲ್ಲಿದ್ದೀರಿ. ಹದಿನಾರು ಬಜೆಟ್ ಮಂಡಿಸಿದ್ದೀರಿ. ನೀವು ಬಹಳ ಅನುಭವಸ್ಥರು. ಹಿಂದಿನ ಘಟನೆಗಳನ್ನು ನೆನಪಿಸಿಕೊಂಡು ಮಾತನಾಡಿದರೆ ಆ ಹುದ್ದೆಯ ಗೌರವ ಉಳಿಯುತ್ತದೆ’ ಎಂದು ಸಲಹೆ ನೀಡಿದರು.
ದೇಶದ 145 ಕೋಟಿ ಜನರಲ್ಲಿ ಪ್ರಧಾನಿ ಆಗುವ ಶಕ್ತಿ ಒಬ್ಬರಲ್ಲಿ ಇರಬೇಕು. ಮೋದಿ ಅವರು ರಾಷ್ಟ್ರದಲ್ಲೂ, ವಿಶ್ವ ಮಟ್ಟದಲ್ಲೂ ನಾಯಕನಾಗಿ ಬೆಳೆದಿದ್ದಾರೆ. ಹಾಗಾಗಿ, ಪ್ರಧಾನಿ ಮೋದಿ ಅವರ ಬಗ್ಗೆ ಲಘುವಾಗಿ ಮಾತನಾಡಿದರೆ ಏನೂ ಆಗುವುದಿಲ್ಲ ಎಂದು ಹೇಳಿದರು.ತಮ್ಮ ರಾಜಕೀಯ ಅನುಭವವನ್ನು ಉಲ್ಲೇಖಿಸಿದ ದೇವೇಗೌಡರು, ನನಗೆ 65 ವರ್ಷದ ರಾಜಕೀಯ ಅನುಭವ ಇದೆ. ಆ ಅನುಭವದ ಆಧಾರದಲ್ಲಿ ಹೇಳುತ್ತಿದ್ದೇನೆ. ಪ್ರಧಾನಿ ಬಗ್ಗೆ ಮಾತನಾಡುವಾಗ ಸ್ವಲ್ಪ ಯೋಚನೆ ಮಾಡಿ ಮಾತನಾಡುವುದು ಉತ್ತಮ ಎಂದು ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ತಾಕೀತು ಮಾಡಿದರು. ರಾಜಕೀಯ ಭಿನ್ನಾಭಿಪ್ರಾಯಗಳು ಸಹಜವಾದರೂ ದೇಶದ ಪ್ರಧಾನಮಂತ್ರಿ ಹುದ್ದೆಯ ಗೌರವ ಕಾಪಾಡಬೇಕು ಎಂದು ಸಲಹೆ ನೀಡಿದರು.