ನವಿಲು ನಾಚಿಸುವ ನೋಣಹಿಡುಕ ಹಕ್ಕಿಯ ಪುಕ್ಕದ ಚಮತ್ಕಾರ ನೋಡಿದಿರಾ?

| Published : Mar 30 2024, 12:55 AM IST / Updated: Mar 30 2024, 01:41 PM IST

ನವಿಲು ನಾಚಿಸುವ ನೋಣಹಿಡುಕ ಹಕ್ಕಿಯ ಪುಕ್ಕದ ಚಮತ್ಕಾರ ನೋಡಿದಿರಾ?
Share this Article
  • FB
  • TW
  • Linkdin
  • Email

ಸಾರಾಂಶ

ಈ ಪುಟ್ಟಹಕ್ಕಿ ನವಿಲನ್ನು ನಾಚಿಸುವಂತೆ ತನ್ನ ಪುಟ್ಟ ಪುಕ್ಕದ ಬಾಲವನ್ನು ಅರಳಿಸಿದಾಗ ಈ ಪುಟ್ಟಹಕ್ಕಿಯ ಸೌಂದರ್ಯಕ್ಕೆ ಬೆರಗಾಗದವರೇ ಇಲ್ಲ.

ಭೀಮಣ್ಣ ಗಜಾಪುರ ಕೂಡ್ಲಿಗಿ

ಭಾರತ, ಇಂಡೋನೇಷ್ಯಾ, ಬಾಂಗ್ಲಾದೇಶದಲ್ಲಿ ಹೆಚ್ಚು ಕಂಡು ಬರುವ ಬಿಳಿಗಲ್ಲದ ಬೀಸಣಿಕೆ ನೊಣಹಿಡುಕ ಹಕ್ಕಿಯನ್ನು ನೋಡುವುದೇ ಸೋಜಿಗ!ಹಕ್ಕಿಯನ್ನು ಬಿಳಿ ಗಂಟಲಿನ ಪ್ಯಾಂಟೆಲ್ ಎಂದು ಕರೆಯುತ್ತಿದ್ದು, ವೈಟ್ ಥ್ರೋಟೆಡ್ ಪ್ಯಾಂಟೈಲ್ ಫ್ಲೈ ಕ್ಯಾಚರ್ ಎಂತಲೂ ಕರೆಯುತ್ತಾರೆ.

ಈ ಪುಟ್ಟಹಕ್ಕಿ ನವಿಲನ್ನು ನಾಚಿಸುವಂತೆ ತನ್ನ ಪುಟ್ಟ ಪುಕ್ಕದ ಬಾಲವನ್ನು ಅರಳಿಸಿದಾಗ ಈ ಪುಟ್ಟಹಕ್ಕಿಯ ಸೌಂದರ್ಯಕ್ಕೆ ಬೆರಗಾಗದವರೇ ಇಲ್ಲ. ಮನೆಯ ಮುಂದಿನ ಮರಗಳಲ್ಲಿ, ಮರದ ಕೆಳಗೆ ಕ್ರಿಮಿಕೀಟ, ನೊಣಗಳನ್ನು ತಿನ್ನುವ ಈ ಹಕ್ಕಿಯ ಜೀವನವೇ ನಮ್ಮನ್ನು ಚಕಿತಗೊಳಿಸುತ್ತದೆ.

ಈ ಹಕ್ಕಿಯು ಬೂದು ವರ್ಣದಲ್ಲಿದೆ. ಬಿಳಿಗಲ್ಲ ಹೊಂದಿದ ಈ ಹಕ್ಕಿಗೆ ಹುಬ್ಬು ಕೂಡ ಬಿಳಿ ಬಣ್ಣದ್ದು. ನೋಡಲು ಬಾಲ ಉದ್ದವಾಗಿ ಕಂಡರೂ ಬಾಲ ಬಿಚ್ಚಿದರೆ ಬೀಸಣಿಕೆಯಾಕಾರದಲ್ಲಿ ನವಿಲಿನಂತೆ ಅರಳಿಸುತ್ತೆ. 

ಪುನಃ ಪುಕ್ಕ ಮುದುಡಿಸಿದಾಗ ಇನ್ನೂ ಸುಂದರವಾಗಿ ಕಾಣುತ್ತದೆ. ತುಂಬ ಚುರುಕಾದ ಈ ಹಕ್ಕಿ ಸದಾ ಬಾಲ ಅರಳಿಸುವುದು, ಮುಚ್ಚುತ್ತಿರುತ್ತದೆ.

ಕಾಡು, ಕುರುಚಲು ಕಾಡು, ಪೊದೆಗಳು, ಮನೆಯ ಮುಂದಿನ ಗಿಡಮರಗಳ ಮೇಲೆ ಮತ್ತು ನೆಲದ ಮೇಲೆ ಇರುವ ಕೀಟಗಳನ್ನು ತಿನ್ನುವ ಈ ಹಕ್ಕಿ ಬಲು ಚಮತ್ಕಾರದ ಪಕ್ಷಿ. 

ಅಷ್ಟೇ ಚಟುವಟಿಕೆಯಿಂದ ಕೂಡಿದ ಈ ಹಕ್ಕಿ ಇದು. ಬಟ್ಟಲಿನ ಆಕಾರದಲ್ಲಿ ಗೂಡು ಕಟ್ಟುತ್ತದೆ. ಹುಲ್ಲು, ನಾರುಗಳಿಂದ ಗೂಡನ್ನು ಹೆಣೆಯುವ ಈ ಹಕ್ಕಿ ಗೂಡಿನ ಮೇಲ್ಭಾಗದಲ್ಲಿ ಜೇಡರ ಬಲೆ ಸುತ್ತುವ ಮೂಲಕ ಗೂಡಿನ ರಕ್ಷಣೆ ಮಾಡುತ್ತದೆ. ಮೊಟ್ಟೆ ಮರಿಗಳನ್ನು ಗಂಡು, ಹೆಣ್ಣು ಹಕ್ಕಿಗಳು ಎರಡೂ ಜವಾಬ್ದಾರಿ ವಹಿಸುತ್ತವೆ.

ಬೀಸಣಿಕೆ ಹಕ್ಕಿಯ ವಿಸ್ಮಯಗಳು: ಈ ಹಕ್ಕಿ 19.5 ಸೆಂ.ಮೀ. ಉದ್ದವಿದೆ. ಕಪ್ಪು ಪ್ಯಾನ್ ಆಕಾರದ ಬಾಲ ಹೊಂದಿದ್ದು, ಮಾರ್ಚ್‌ನಿಂದ ಆಗಸ್ಟ್ ವರೆಗೆ ಮರಗಳಲ್ಲಿ ಬಟ್ಟಲಾಕಾರದ ಗೂಡು ಕಟ್ಟಿ ಆ ಗೂಡಿನಲ್ಲಿ 2 ಸೆಂ.ಮೀ. ಅಳತೆಯ 3 ಬಿಳಿ ಬಣ್ಣದ ಮೊಟ್ಟೆಗಳನ್ನು ಈ ಹಕ್ಕಿ ಇಡುತ್ತದೆ.

ಹಕ್ಕಿಯ ಕೂಗು ಗಂಡು ಹಕ್ಕಿಯ ಹುಡುಕುವುದು, ಹಕ್ಕಿಯನ್ನು ಪತ್ತೆ ಮಾಡುವುದಕ್ಕಾಗಿ ತನ್ನದೇ ಆದ ಧ್ವನಿಯಿಂದ ಕೂಗುತ್ತದೆ. ಈ ಹಕ್ಕಿಯ ಕೂಗು ಇಂಪಾದ ಸಿಳ್ಳೆಯಂತಿರುತ್ತದೆ.

ನಮ್ಮ ಮನೆಯ ಮುಂದಿನ ಬಾರಿಗಿಡದಲ್ಲಿ ಕಾಣಿಸುವ ಈ ಹಕ್ಕಿಗಳು ಪುಟ್ಟ ಬಾಲದಲ್ಲಿ ಬೀಸಣಿಕೆಯಾಕಾರದಲ್ಲಿ ಪುಕ್ಕಗಳನ್ನು ಅರಳಿಸುವ ರೀತಿಯನ್ನು ನೋಡುವುದೇ ಸೋಜಿಗ. ಕೀಟಗಳನ್ನು ತಿನ್ನುವಾಗ ಚುರುಕಾಗಿ ಪುಕ್ಕ ಮಡಿಚುವುದು, ಅರಳಿಸುವುದನ್ನು ಮಾಡುತ್ತವೆ ಎನ್ನುತ್ತಾರೆ ಪಕ್ಷಿ ಪ್ರೇಮಿ ಕಾವ್ಯ.