ಸಾರಾಂಶ
ಹಾವೇರಿ: ಹಾವೇರಿ ಹಾಲು ಒಕ್ಕೂಟದಲ್ಲಿ ಪ್ರತಿದಿನ 1.35 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಅದರಲ್ಲಿ ಕೇವಲ 20 ಸಾವಿರ ಲೀಟರ್ ಪ್ಯಾಕೆಟ್ ಹಾಲು ಮಾರಾಟವಾಗುತ್ತಿದ್ದು, ಸದ್ಯ ವಾರ್ಷಿಕ ₹18 ಕೋಟಿ ನಷ್ಟದಲ್ಲಿದೆ. ಅದಕ್ಕಾಗಿ ತಾತ್ಕಾಲಿಕವಾಗಿ ಉತ್ಪಾದಕರಿಗೆ ಹಾಲಿನ ದರ ಕಡಿತಗೊಳಿಸಲಾಗಿದೆ ಎಂದು ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾವೇರಿ ಹಾಲಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವ ಪರಿಣಾಮ ಪ್ರತಿ ತಿಂಗಳು ₹1.38 ಕೋಟಿ ಹಾನಿಯಾಗುತ್ತಿದೆ. ಸರ್ಕಾರ ಘೋಷಣೆ ಮಾಡಿದಂತೆ ಮಾರಾಟವಾಗದ ಹಾಲಿಗೂ ಹೆಚ್ಚುವರಿಯಾಗಿ ₹4 ನೇರವಾಗಿ ರೈತರಿಗೆ ವರ್ಗಾಯಿಸಿದರೆ ಈ ನಷ್ಟ ₹2 ಕೋಟಿಗೂ ಮೀರಲಿದೆ. ನಷ್ಟದಲ್ಲಿರುವ ಒಕ್ಕೂಟವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಉತ್ಪಾದಕರಿಗೆ ಪ್ರತಿ ಲೀ. ಹಾಲಿಗೆ ₹3.50 ಕಡಿತಗೊಳಿಸಲಾಗಿತ್ತು. ಇದಕ್ಕೆ ಜಿಲ್ಲೆಯ ಶಾಸಕರು, ರೈತರ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಶೀಘ್ರದಲ್ಲಿ ಆಡಳಿತ ಮಂಡಳಿ ಸಭೆ ನಡೆಸಿ ಹಾಲಿನ ದರ ಮತ್ತೆ ಹೆಚ್ಚಿಸುತ್ತೇವೆ ಎಂದು ಭರವಸೆ ನೀಡಿದರು.ನಷ್ಟದಲ್ಲಿರುವ ಒಕ್ಕೂಟವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಮಾ. 21ರಂದು ಆಡಳಿತ ಮಂಡಳಿ ಸಭೆ ನಡೆಸಿ ಪ್ರತಿ ಲೀಟರ್ ಹಾಲಿಗೆ ತಾತ್ಕಾಲಿಕವಾಗಿ ₹3.50 ಕಡಿತಗೊಳಿಸಿದ್ದೇವೆ. ಸರ್ಕಾರದ ಆದೇಶದಂತೆ ಏ. 1ರಿಂದ ಪ್ರತಿ ಲೀ. ಹಾಲಿಗೆ ₹4 ಹೆಚ್ಚಿಸಿದ್ದೇವೆ. ಒಕ್ಕೂಟದಲ್ಲಿ ಶೇಖರಣೆಯಾಗುವ ಹಾಲಿನಲ್ಲಿ 1.15 ಲಕ್ಷ ಲೀ. ಮಾರಾಟವಾಗದೇ ಉಳಿಯುತ್ತಿದ್ದು, ಹೀಗೆ ಮಾರಾಟವಾಗದ ಹಾಲಿಗೂ ಪ್ರತಿ ಲೀ.ಗೆ ₹4 ಹೆಚ್ಚಳ ಮಾಡಿ ಹಾಲು ಉತ್ಪಾದಕರಿಗೆ ನೀಡುವುದರಿಂದ ನಷ್ಟ ಮತ್ತಷ್ಟು ಹೆಚ್ಚಳವಾಗಲಿದೆ. ಹೀಗಾಗಿ ಸೂಕ್ತ ಮಾರುಕಟ್ಟೆ ಕಲ್ಪಿಸಿಕೊಳ್ಳುವ ಪ್ರಯತ್ನಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಕೇವಲ 20 ಸಾವಿರ ಲೀ. ಹಾಲು ದ್ರವ ರೂಪದಲ್ಲಿ ಮಾರಾಟ ಆಗುತ್ತಿದೆ. ಇದರಿಂದ ಮಾತ್ರ ಒಕ್ಕೂಟಕ್ಕೆ ಲಾಭ ಆಗುತ್ತಿದೆ. ಇನ್ನುಳಿದ 1.15 ಲಕ್ಷ ಲೀ. ಹಾಲಿನಲ್ಲಿ 30 ಸಾವಿರ ಲೀಟರ್ ಹಾಲು ಕ್ಷೀರಭಾಗ್ಯ ಹಾಲಿನ ಪುಡಿ, ಬೆಣ್ಣೆ ಪರಿವರ್ತನೆ ಹಾಗೂ ಯುಎಚ್‌ಟಿ ಹಾಲಿನ ಉತ್ಪನ್ನಗಳ ತಯಾರಿಕೆಗೆ ನೀಡಲಾಗುತ್ತಿದೆ. ಇದರಲ್ಲಿ ಒಕ್ಕೂಟಕ್ಕೆ ಯಾವುದೇ ರೀತಿಯ ಲಾಭಾಂಶ ಸಿಗುತ್ತಿಲ್ಲ ಎಂದರು.ನಮ್ಮ ಹಾಲಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ಇತ್ತೀಚೆಗೆ ಕೆಎಂಎಫ್‌ಗೆ ತೆರಳಿ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದಾಗ, ಹಾವೇರಿ ಹಾಲಿಗೆ ಕೆಟ್ಟ ಹೆಸರು ಬಂದಿದೆ. ಗುಣಮಟ್ಟ ಸುಧಾರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದು ತಲೆ ತಗ್ಗಿಸುವ ವಿಚಾರವಾಗಿದೆ. ಅದಕ್ಕಾಗಿ ಎಲ್ಲ ರೀತಿಯಿಂದಲೂ ಪರೀಕ್ಷೆ ನಡೆಸಿ ಕಲಬೆರಕೆ ಪತ್ತೆ ಹಚ್ಚಿ ಗುಣಮಟ್ಟದ ಹಾಲು ಶೇಖರಣೆಗೆ ಒತ್ತು ನೀಡುತ್ತಿದ್ದೇವೆ. ಕಲಬೆರಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.ಧಾರವಾಡ ಒಕ್ಕೂಟದಿಂದ ಹಾವೇರಿ ಒಕ್ಕೂಟ ಬೇರ್ಪಟ್ಟಾಗ ಹುಬ್ಬಳ್ಳಿಯಲ್ಲಿ ಹಾವೇರಿ ಹಾಲಿಗೆ ಮಾರುಕಟ್ಟೆ ಕಲ್ಪಿಸಿಕೊಡುವ ಒಪ್ಪಂದವಾಗಿತ್ತು. ಆದರೆ, ಸಮನ್ವಯ ಕೊರತೆಯಿಂದಾಗಿ ಹುಬ್ಬಳ್ಳಿಯಲ್ಲಿ ಮಾರುಕಟ್ಟೆ ವ್ಯವಸ್ಥೆ ಸಾಧ್ಯವಾಗಿರಲಿಲ್ಲ. ಧಾರವಾಡ ಹಾಲು ಒಕ್ಕೂಟ ಶೇಖರಿಸುವ ಹಾಲಿಗಿಂತಲೂ ಅಲ್ಲಿ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಹಾವೇರಿ ಹಾಲಿಗೆ ಹುಬ್ಬಳ್ಳಿಯಲ್ಲಿ ಮಾರುಕಟ್ಟೆ ಕಲ್ಪಿಸಿಕೊಡುವಂತೆ ಕೆಎಂಎಫ್‌ಗೆ ಮನವಿ ಮಾಡಿದ್ದೇವೆ. ಇದು ಸಾಕಾರಗೊಂಡರೆ ಹಾವೇರಿ ಹಾಲು ಮಾರಾಟ ಮಾಡಿ ಒಕ್ಕೂಟವೂ ಲಾಭ ಗಳಿಸಲು ಸಾಧ್ಯವಾಗಲಿದೆ ಎಂದರು.ಒಕ್ಕೂಟದ ನಿರ್ದೇಶಕರಾದ ಪ್ರಕಾಶ ಬನ್ನಿಹಟ್ಟಿ, ಬಸವೇಶಗೌಡ ಪಾಟೀಲ, ಅಶೋಕ ಪಾಟೀಲ, ಚಂದ್ರಪ್ಪ ಜಾಲಗಾರ, ಶಂಕರಗೌಡ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಎಚ್.ಟಿ. ಅಶೋಕಗೌಡ ಇತರರು ಇದ್ದರು. 2ಎಚ್‌ವಿಆರ್3
ಮಂಜನಗೌಡ ಪಾಟೀಲ