ಹಾಲಿನ ದರ ಕಡಿತದ ಆದೇಶ ವಾಪಸ್‌ ಪಡೆದ ಹಾವೆಮುಲ್‌

| Published : Apr 07 2025, 12:30 AM IST

ಹಾಲಿನ ದರ ಕಡಿತದ ಆದೇಶ ವಾಪಸ್‌ ಪಡೆದ ಹಾವೆಮುಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಲೀಟರ್‌ ಹಾಲಿಗೆ ₹4 ಏರಿಕೆ ಮಾಡಿದ್ದ ವೇಳೆ ಹಾವೆಮುಲ್‌ ₹3.50 ಇಳಿಕೆ ಮಾಡಿತ್ತು. ಇದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿತ್ತು.

ಹಾವೇರಿ: ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ₹3.50 ಕಡಿತ ಮಾಡಿದ್ದ ಆದೇಶವನ್ನು ಹಿಂಪಡೆದು, ಪ್ರತಿ ಲೀಟರ್‌ ಹಾಲಿಗೆ ₹2.50 ಹೆಚ್ಚಿಸುವ ನಿರ್ಧಾರವನ್ನು ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಕೈಗೊಂಡಿದೆ.

ಈ ಕುರಿತು ಭಾನುವಾರ ಸಂಜೆ ತುರ್ತು ಮಾಧ್ಯಮಗೋಷ್ಠಿ ನಡೆಸಿದ ಹಾವೆಮುಲ್ ಅಧ್ಯಕ್ಷ ಮಂಜನಗೌಡ ಪಾಟೀಲ, ಮಾ. 28ರಂದು ಮಾಡಿದ್ದ ದರ ಕಡಿತದ ಆದೇಶ ವಾಪಸ್‌ ಪಡೆಯಲಾಗಿದೆ. ಸರ್ಕಾರ ಏರಿಸಿರುವ ₹4 ಬದಲಿಗೆ ₹2.50 ಹೆಚ್ಚಳ ಮಾಡಲಾಗುತ್ತಿದೆ. ಏ. 1ರಿಂದ ಅನ್ವಯವಾಗುವಂತೆ ಪ್ರತಿ ಲೀಟರ್‌ ಹಾಲಿಗೆ ₹34.05 ದರವನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರ ಲೀಟರ್‌ ಹಾಲಿಗೆ ₹4 ಏರಿಕೆ ಮಾಡಿದ್ದ ವೇಳೆ ಹಾವೆಮುಲ್‌ ₹3.50 ಇಳಿಕೆ ಮಾಡಿತ್ತು. ಇದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿತ್ತು. ಜಿಲ್ಲೆಯ ರೈತರು ಹೋರಾಟಕ್ಕೆ ಇಳಿದಿದ್ದರು. ಸೋಮವಾರ ಎಲ್ಲ ತಾಲೂಕುಗಳಲ್ಲಿ ಹೋರಾಟ ನಡೆಸಲು ನಿರ್ಧರಿಸಿದ್ದರು. ಇದರಿಂದ ಎಚ್ಚೆತ್ತ ಹಾವೆಮುಲ್‌ ಆಡಳಿತ ಮಂಡಳಿ ತುರ್ತಾಗಿ ಸಭೆ ನಡೆಸಿ ದರ ಪರಿಷ್ಕರಣೆಯ ನಿರ್ಧಾರ ಕೈಗೊಂಡಿದೆ.

ಆದರೆ, ಕೇವಲ ₹2.50 ಏರಿಕೆ ಮಾಡಿರುವುದಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ಕಾರ ₹4 ಏರಿಸಿದಂತೆ ಇಲ್ಲಿಯೂ ₹4 ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ರೈತರು ಸಹಕರಿಸಬೇಕು: ಮಾ. 28ರಂದು ಕೈಗೊಂಡಿದ್ದ ದರ ಪರಿಷ್ಕರಣೆ ಆದೇಶವನ್ನು ಹಿಂಪಡೆಯಲಾಗಿದೆ. ಮೊದಲಿನ ದರಕ್ಕೆ ₹2.50 ಹೆಚ್ಚುವರಿಯಾಗಿ ಸೇರಿ ಲೀಟರ್‌ ಹಾಲಿಗೆ ₹34.05ರಂತೆ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ರೈತರು ಸಹಕರಿಸಬೇಕು ಎಂದು ಹಾವೆಮುಲ್‌ ಅಧ್ಯಕ್ಷ ಮಂಜನಗೌಡ ಪಾಟೀಲ ತಿಳಿಸಿದರು.

₹4 ಹೆಚ್ಚಳ ಮಾಡಬೇಕು: ಸರ್ಕಾರ ಪ್ರತಿ ಲೀಟರ್‌ ಹಾಲಿಗೆ ₹4 ಏರಿಕೆ ಮಾಡಿದೆ. ಅದರಂತೆ ಜಿಲ್ಲೆಯಲ್ಲೂ ₹4 ಹೆಚ್ಚಳ ಮಾಡಬೇಕು. ಕೇವಲ ₹2.50 ಏರಿಕೆ ಮಾಡಿರುವುದು ಸರಿಯಲ್ಲ. ಆದ್ದರಿಂದ ಸೋಮವಾರ ಎಲ್ಲ ತಾಲೂಕುಗಳಲ್ಲಿ ಹಾಗೂ ಹಾವೇರಿ ಹಾವೆಮುಲ್‌ ಕಚೇರಿ ಎದುರು ರೈತರು ಹೋರಾಟ ನಡೆಸಲಿದ್ದಾರೆ ಎಂದು ರೈತ ಮುಖಂಡರಾದ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ ಒಯ್ಯುತ್ತಿದ್ದ ವಾಹನ ಪಲ್ಟಿ

ಹಾವೇರಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಟೆಂಪೂ ಟ್ರಾವೆಲ್ಸ್ ವಾಹನ ಡಿವೈಡರ್ ಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ ಸಮೀಪದಲ್ಲಿ ಭಾನುವಾರ ನಡೆದಿದೆ.

ಟೆಂಪೂ ಟ್ರಾವೆಲ್ಸ್ ವಾಹನದಲ್ಲಿ ರಾಯಚೂರು, ಯಾದಗಿರಿ, ಬೀದರ, ಬಾಗಲಕೋಟೆ, ಧಾರವಾಡ ಜಿಲ್ಲೆಗಳ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಉತ್ತರ ಪತ್ರಿಕೆಗಳನ್ನು ಲೋಡ್ ಮಾಡಿಕೊಂಡು ಹಾವೇರಿ ಮಾರ್ಗವಾಗಿ ಬೆಂಗಳೂರಿಗೆ ಹೋಗಲಾಗುತ್ತಿತ್ತು. ಬಂಕಾಪುರ ಟೋಲ್ ಬಳಿ ಮುಂದೆ ಹೋಗುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡಲು ಹೋದಾಗ, ಟಿಟಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.ಘಟನೆಯಲ್ಲಿ ಬೆಂಗಳೂರು ಮೂಲದ ಚಾಲಕ ರಂಗಸ್ವಾಮಿ ತಂದೆ ಚನ್ನೆಗೌಡ(45), ಎಸ್ಸೆಸ್ಸೆಲ್ಸಿ ಬೋರ್ಡ್‌ನ ಎಫ್‌ಡಿಎ ಸಿಬ್ಬಂದಿಗಳಾದ ಕೃಷ್ಣಮೂರ್ತಿ ಜಿ.(55), ಮಂಜಪ್ಪ ಯು.ಎಸ್.(52), ಸಿಎಆರ್ ಸಿಬ್ಬಂದಿ ಬಾಹುಬಲಿ ತಂದೆ ಜಿನ್ನಪ್ಪ ಕುಪ್ಪವಾಡ(30) ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಅಪಘಾತದ ಮಾಹಿತಿ ತಿಳಿದ ಡಿಡಿಪಿಐ ಸುರೇಶ ಹುಗ್ಗಿ ಕೂಡಲೇ ಸ್ಥಳಕ್ಕಾಗಮಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಉತ್ತರ ಪತ್ರಿಕೆ ಬಂಡಲ್‌ಗಳನ್ನು ಸುರಕ್ಷಿತವಾಗಿ ಇರಿಸಿ ಬೇರೆ ವಾಹನದಲ್ಲಿ ಬೆಂಗಳೂರು ಪ್ರೌಢ ಶಾಲಾ ಬೋರ್ಡ್‌ಗೆ ಕಳುಹಿಸಿದ್ದಾರೆ.ಪ್ರೌಢಶಾಲಾ ಮಂಡಳಿಯ ಎಫ್‌ಡಿಎಗಳಾದ ರತ್ನಾಕರಗೌಡ ತಂದೆ ವೇನಪ್ಪಗೌಡ, ಲಕ್ಷ್ಮೀಪತಿ ತಂದೆ ಚಿಕ್ಕರಂಗಪ್ಪ, ಹಾವೇರಿಯ ಎಸ್‌ಡಿಎ ಸಿಬ್ಬಂದಿ ರಮೇಶ ವೀರನಗೌಡ ಪಾಟೀಲ, ಹಾವೇರಿಯ ಸಂಯೋಜಕ ಸಿದ್ರಾಮಪ್ಪ ವೀರಪ್ಪ ಅಜಗೊಂಡ, ಪೊಲೀಸ್ ಸಿಬ್ಬಂದಿಗಳಾದ ವೀರಪ್ಪ ಲಕ್ಷ್ಮಪ್ಪ ಲಮಾಣಿ, ದೇವೆಂದ್ರಪ್ಪ ಸತ್ಯಪ್ಪ ಬಸಮ್ಮನವರ, ಚಾಲಕ ಮಂಜುನಾಥ ಮುನಿಲೆಮಯ್ಯ ಅವರನ್ನು ಸುರಕ್ಷಿತವಾಗಿ ಬೆಂಗಳೂರು ಬೋರ್ಡ್‌ಗೆ ತಲುಪಿಸಲಾಗಿದೆ ಎಂದು ಬಂಕಾಪುರ ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಬಂಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.