ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿ ಸೇರಿದಂತೆ ಬಂಧಿಸಲ್ಪಟ್ಟ ಕಬ್ಬು ಬೆಳೆಗಾರರನ್ನು ಗುರುವಾರವೇ ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ನ. 6ರಂದು ಹಾವೇರಿ ಜಿಲ್ಲೆಯನ್ನು ಬಂದ್ ಮಾಡುವುದಾಗಿ ಕಬ್ಬು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಅಶೋಕರಡ್ಡಿ ಮರ್ಚರಡ್ಡೇರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಗುತ್ತಲ: ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿ ಸೇರಿದಂತೆ ಬಂಧಿಸಲ್ಪಟ್ಟ ಕಬ್ಬು ಬೆಳೆಗಾರರನ್ನು ಗುರುವಾರವೇ ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ನ. 6ರಂದು ಹಾವೇರಿ ಜಿಲ್ಲೆಯನ್ನು ಬಂದ್ ಮಾಡುವುದಾಗಿ ಕಬ್ಬು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಅಶೋಕರಡ್ಡಿ ಮರ್ಚರಡ್ಡೇರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಪಟ್ಟಣದ ಎಸ್ಆರ್ಎಸ್ ಸರ್ಕಲ್ ಬಳಿ ದಿಢೀರ್ ಪ್ರತಿಭಟನೆ ನಡೆಸಿದ ಕಬ್ಬು ಬೆಳೆಗಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬೆಳಗಾವಿಯಲ್ಲಿ ಬಂಧಿಸಿದ ರೈತ ಮುಖಂಡರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ನಿಜವಾಗಿಯೂ ಕಬ್ಬು ಬೆಳೆಗಾರರಿಗೆ ನ್ಯಾಯವನ್ನು ಒದಗಿಸಬೇಕಾಗಿದ್ದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ. ರಾಜ್ಯ ಸರ್ಕಾರ ಎಸ್ಎಪಿಯನ್ನು ಹಾಗೂ ಕೇಂದ್ರ ಸರ್ಕಾರ ಎಂಎಸ್ಪಿಯನ್ನು ಘೋಷಣೆ ಮಾಡಬೇಕು ಇದರಿಂದ ಕಬ್ಬು ಬೆಳೆಗಾರರಿಗೆ ಸಹಾಯವಾಗುವುದೆಂದ ಅವರು ರೈತರ ಮೇಲೆ ನಿಷೇಧಾಜ್ಞೆಯನ್ನು ಹೇರಿರುವ ಜೆಎಂ ಶುಗರ್1 ಹಾಗೂ ಜೆಎಂ ಶುಗರ್2 ಇವರ ಕಾರ್ಖಾನೆಗಳಿಗೆ ಜಿಲ್ಲೆಯ ಕಬ್ಬು ಬೆಳೆಗಾರರು ಕಬ್ಬನ್ನು ಸಾಗಾಟ ಮಾಡದಿರಲು ನಿರ್ಧರಿಸಿದ್ದಾರೆಂದರು.
ಈ ಬಗ್ಗೆ ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ನಡೆದ ಕಬ್ಬು ಬೆಳೆಗಾರರ ಸಭೆಯಲ್ಲಿ ನಿರ್ಧರಿಸಿದ್ದೇವೆ. ಯಾವುದೇ ಕಬ್ಬು ಬೆಳೆಗಾರರು ರೈತರ ಮೇಲೆ ಮೊಕದ್ದಮೆ ದಾಖಲಿಸಿರುವ ಕಾರ್ಖಾನೆಗಳಿಗೆ ಕಬ್ಬುನ್ನು ಪೂರೈಸಲ್ಲ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಜಗದೀಶ ತೋಟಗೇರ, ಅಶೋಕ ಬಳಗಾನೂರ, ಬಸವರಾಜ ಕನವಳ್ಳಿ, ಮುತ್ತಪ್ಪ ಸಣ್ಣನಿಂಗಮ್ಮನವರ, ವೀರಯ್ಯ ಹಿರೇಮಠ, ಪ್ರಭು ಗೌರಿಮನಿ, ಮುರಿಗೆಪ್ಪಶೆಟ್ರ ಅಂಗಡಿ, ಜಯಣ್ಣ ಮಾಗಡಿ, ಹಾಲಪ್ಪ ಮುದ್ದಿ, ಹನುಮಂತಪ್ಪ ಕೋಡಬಾಳ, ಶಂಕ್ರಪ್ಪ ಅರಸನಾಳ, ಈರಣ್ಣ ಎರೇಶಿಮಿ, ಮೈಲಾರಪ್ಪ ಬನ್ನಿಮಟ್ಟಿ, ಹೂವಪ್ಪ ಬ್ಯಾಡಿಗಿ, ಅಲ್ತಾಫ್ ಶಿರಹಟ್ಟಿ, ಮಾಲತೇಶ ಶೀತಾಳ, ಚೇತನರಡ್ಡಿ ಮರ್ಚರಡ್ಡೇರ, ವೆಂಕಟೇಶ ಶೇಷನಗೌಡ್ರ, ಅಶೋಕ ಬ್ಯಾಡಗಿ, ಹೊನ್ನಪ್ಪ ವಾಲಿಕಾರ, ಎಚ್.ಡಿ. ಬಾರ್ಕಿ, ಶಂಭುಲಿಂಗ ಅಣ್ಣಿಗೇರಿ ಸೇರಿದಂತೆ ನೂರಾರು ರೈತರಿದ್ದರು.ಬಂಧನಕ್ಕೆ ಖಂಡನೆ: ಪ್ರತಿಭಟನೆಗೂ ಮುನ್ನ ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಸಭೆ ಸೇರಿದ್ದ ನೂರಾರು ಕಬ್ಬು ಬೆಳೆಗಾರರು ಕಬ್ಬಿನ ದರದ ಅಂತಿಮ ನಿರ್ಧಾರದ ಬಗ್ಗೆ ಚರ್ಚಿಸಿದರು. ನಂತರ ರೈತರ ಮೇಲೆ ನಿಷೇಧಾಜ್ಞೆ ಹೇರಿರುವ ಜೆಎಂ ಶುಗರ್1 ಹಾಗೂ ಜೆಎಂ ಶುಗರ್2 ಇವರ ಕಾರ್ಖಾನೆಗಳಿಗೆ ಜಿಲ್ಲೆಯ ಕಬ್ಬು ಬೆಳೆಗಾರರು ಕಬ್ಬನ್ನು ಸಾಗಾಟ ಮಾಡದಿರಲು ಒಕ್ಕೊರಲಿನಿಂದ ನಿರ್ಧರಿಸಿದರು. ಪ್ರಮುಖವಾಗಿ ಗುರುವಾರ ಬೆಳಗಾವಿಯಲ್ಲಿ ಗುರುವಾರ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿ ಸೇರಿದಂತೆ ರೈತರನ್ನು ಪೊಲೀಸರು ಬಂಧಿಸಿರುವುದಕ್ಕೆ ಖಂಡಿಸಿದರು.