ಶಿಗ್ಗಾಂವಿ ಪರೀಕ್ಷಾ ಕೇಂದ್ರದಲ್ಲಿ ವಿಎಒ ನೇಮಕಾತಿ ಪರೀಕ್ಷೆ ವೇಳೆ ಅಭ್ಯರ್ಥಿ ಶಂಕರ ಬನ್ನೂರು ಮೊಬೈಲ್ ಬಳಸಿ ಅಕ್ರಮ ಎಸಗಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪರೀಕ್ಷಾ ಕೇಂದ್ರದಲ್ಲಿ ಜಾಮರ್ ಅಳವಡಿಸಿದ್ದವರು ಹಾಗೂ ಅದರ ನಿರ್ವಹಣೆಯ ಹೊಣೆ ಹೊತ್ತವರನ್ನೂ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ತಿಳಿಸಿದರು.

ಹಾವೇರಿ: ಶಿಗ್ಗಾಂವಿ ಪರೀಕ್ಷಾ ಕೇಂದ್ರದಲ್ಲಿ ವಿಎಒ ನೇಮಕಾತಿ ಪರೀಕ್ಷೆ ವೇಳೆ ಅಭ್ಯರ್ಥಿ ಶಂಕರ ಬನ್ನೂರು ಮೊಬೈಲ್ ಬಳಸಿ ಅಕ್ರಮ ಎಸಗಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪರೀಕ್ಷಾ ಕೇಂದ್ರದಲ್ಲಿ ಜಾಮರ್ ಅಳವಡಿಸಿದ್ದವರು ಹಾಗೂ ಅದರ ನಿರ್ವಹಣೆಯ ಹೊಣೆ ಹೊತ್ತವರನ್ನೂ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ತನಿಖೆಯನ್ನು ಪಬ್ಲಿಕ್ ಎಕ್ಸಾಮಿನೇಷನ್ ಆಕ್ಟ್-2023ರ ಸೆಕ್ಷನ್ 15ರ ಅಡಿಯಲ್ಲಿ ಕೈಗೊಳ್ಳಲಾಗಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದರ್ಜೆಯ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಪರೀಕ್ಷಾ ಅಕ್ರಮದಲ್ಲಿ ಯಾರದ್ದೇ ಪಾತ್ರ ಕಂಡುಬಂದರೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಮೊಬೈಲ್ ಬಳಕೆಯಾದ ಪರೀಕ್ಷಾ ಕೊಠಡಿಯಲ್ಲಿ ಜಾಮರ್ ಅಳವಡಿಸಲಾಗಿತ್ತೇ..? ಅಳವಡಿಸಿದ್ದರೆ ಅದು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿತ್ತೇ? ಜಾಮರ್ ಅಳವಡಿಕೆ ಮತ್ತು ನಿರ್ವಹಣೆಯ ಜವಾಬ್ದಾರಿ ಯಾರಿಗಿತ್ತು ಎಂಬ ಅಂಶಗಳನ್ನೂ ತನಿಖೆ ಮಾಡಲಾಗುವುದು. ಈ ಕುರಿತು ಸಂಬಂಧಪಟ್ಟವರಿಂದ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದರು.

ಫ್ರಿಸ್ಕಿಂಗ್ ವ್ಯವಸ್ಥೆಯೂ ತನಿಖೆಯ ವ್ಯಾಪ್ತಿಗೆ: ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ತೆಗೆದುಕೊಂಡು ಹೋಗಲು ಹೇಗೆ ಸಾಧ್ಯವಾಯಿತು ಎಂಬುದು ತನಿಖೆಯ ಪ್ರಮುಖ ಅಂಶವಾಗಿದೆ. ಅಭ್ಯರ್ಥಿಗಳ ತಪಾಸಣೆಗಾಗಿ ಕೈಗೊಂಡಿದ್ದ ಫ್ರಿಸ್ಕಿಂಗ್ ವ್ಯವಸ್ಥೆಯಲ್ಲಿ ಲೋಪವಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಪರೀಕ್ಷಾ ದಿನ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಹೋಮ್‌ಗಾರ್ಡಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.

ಕರ್ತವ್ಯ ಲೋಪವಾದರೆ ಕ್ರಮ: ಪರೀಕ್ಷಾ ದಿನ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಗೆ ವಹಿಸಲಾಗಿದ್ದ ಜವಾಬ್ದಾರಿ ಏನು? ಅದನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆಯೇ ಎಂಬ ಬಗ್ಗೆ ಡಿವೈಎಸ್ಪಿ ಹಂತದ ಅಧಿಕಾರಿಯಿಂದ ವರದಿ ಪಡೆಯಲಾಗುತ್ತಿದೆ. ಕರ್ತವ್ಯ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಸ್ಪಷ್ಟಪಡಿಸಿದರು.

ಮೊಬೈಲ್ ಪರಿಶೀಲನೆ: ಈಗಾಗಲೇ ಆರೋಪಿಯಿಂದ ಮೊಬೈಲ್ ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿರುವ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಶಂಕರ ಬನ್ನೂರು ನೀಡಿರುವ ಹೇಳಿಕೆ ಹಾಗೂ ಮೊಬೈಲ್‌ನಲ್ಲಿರುವ ಮಾಹಿತಿಯನ್ನು ಆಧರಿಸಿ ಮುಂದಿನ ತನಿಖೆ ನಡೆಸಲಾಗುವುದು. ಪ್ರಕರಣದಲ್ಲಿ ಅಕ್ರಮ ಎಸಗಿದವರು ಮಾತ್ರವಲ್ಲದೆ, ಕರ್ತವ್ಯ ಲೋಪ ಎಸಗಿದವರೂ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅವರ ವಿರುದ್ಧವೂ ಕಾನೂನು ಮತ್ತು ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದರು.