ಹಾವೇರಿ ನಗರ ಹುಕ್ಕೇರಿ ಮಠದ ಜಾತ್ರೆಗೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ನಾರಾಯಣ ಹೆಗಡೆ
ಹಾವೇರಿ: ಮರಿಕಲ್ಯಾಣ ಖ್ಯಾತಿಯ ಹಾವೇರಿ ನಗರ ಹುಕ್ಕೇರಿಮಠದ ಜಾತ್ರೆಗೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಹಲವು ವಿಶೇಷಗಳೊಂದಿಗೆ ಈ ಸಲ ನಮ್ಮೂರ ಜಾತ್ರೆ ಆಯೋಜಿಸಲಾಗಿದ್ದು, ಜಿಲ್ಲಾ ಕ್ರೀಡಾಂಗಣ ಇದಕ್ಕೆ ಸಾಕ್ಷಿಯಾಗಲಿದೆ.ಹುಕ್ಕೇರಿ ಮಠದ ಜಾತ್ರೆಯ ಜತೆಗೆ ಸದಾಶಿವ ಸ್ವಾಮೀಜಿ ಅವರ ಪಟ್ಟಾಧಿಕಾರದ 15ನೇ ವರ್ಷದ ಆಚರಣೆ ಹಿನ್ನೆಲೆ ಡಿ. 27ರಂದು ಸಂಜೆ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ 51 ಸಾವಿರ ಜನರಿಂದ ಬೃಹತ್ ವಚನ ವಂದನ ಕಾರ್ಯಕ್ರಮ ಆಯೋಜಿಸಲಾಗಿದೆ. 51 ಸಾವಿರಕ್ಕೂ ಅಧಿಕ ಮಹಿಳೆಯರು ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆ ಸುತ್ತಿದ ಬುತ್ತಿಗಂಟು ಹೊತ್ತು ತರಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮಠದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಅದ್ದೂರಿ ಮೆರವಣಿಗೆ ಸಾಗಲಿದೆ.
ಎಲ್ಲೆಡೆಯಿಂದ ಬರುತ್ತಿದೆ ಬುತ್ತಿಗಂಟುಸದಾಶಿವ ಸ್ವಾಮೀಜಿ ಪಾದಯಾತ್ರೆ ನಡೆಸಿದ 75 ಹಳ್ಳಿಗಳ ಜನರು ಶೇಂಗಾ ಹೋಳಿಗೆ, ಕರ್ಚಿಕಾಯಿ, ಖಡಕ್ ರೊಟ್ಟಿ, ಉಂಡಿ, ಚಕ್ಕುಲಿ ಸೇರಿದಂತೆ ದಾಸೋಹಕ್ಕಾಗಿ ಬುತ್ತಿ ಗಂಟುಗಳನ್ನು ಅಲಂಕೃತ ಟ್ರ್ಯಾಕ್ಟರ್, ಚಕ್ಕಡಿಗಳಲ್ಲಿ ಹುಕ್ಕೇರಿ ಮಠಕ್ಕೆ ತಂದು ಕೊಡುತ್ತಿದ್ದಾರೆ. ಜನರು ದವಸ, ಧಾನ್ಯ, ಕಾಣಿಕೆ ಕೊಡುತ್ತಿದ್ದಾರೆ. ಸದಾಶಿವ ಶ್ರೀಗಳ ಬೆಳ್ಳಿ ತುಲಾಭಾರಕ್ಕೆ ಅನೇಕರು ಬೆಳ್ಳಿ ದಾನ ಮಾಡುತ್ತಿದ್ದಾರೆ. ಆಹಾರ ಪದಾರ್ಥಗಳನ್ನು ನಿತ್ಯ ದಾಸೋಹದಲ್ಲಿ ಭಕ್ತರಿಗೆ ಉಣಬಡಿಸಲಾಗುತ್ತಿದೆ. ಜಾತ್ರೆಗೆ ಬರುವ ಜನರನ್ನು ಸ್ವಾಗತಿಸುವ ಬ್ಯಾನರ್, ಕಟೌಟ್‌ಗಳಿಂದ ಜಿಲ್ಲಾ ಕೇಂದ್ರ ಕಂಗೊಳಿಸುತ್ತಿದೆ.
ವರ್ಲ್ಡ್ ರೆಕಾರ್ಡ್‌ಗೆ ಸಿದ್ಧತೆಡಿ. 27ರಂದು ಸಂಜೆ 4ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ 51 ಸಾವಿರ ಭಕ್ತರ ಸಮ್ಮುಖದಲ್ಲಿ ವಚನ ವಂದನ ಕಾರ್ಯಕ್ರಮವಿದೆ. ನಾಡಿನ ವಿವಿಧ ಮಠಾಧೀಶರ ಸಮ್ಮುಖದಲ್ಲಿ 51 ಸಾವಿರ ಭಕ್ತರಿಂದ ವಚನ ವಂದನ, ಗುರುವಂದನೆ ಸಮಾರಂಭ ನೆರವೇರಲಿದೆ. ಇದಕ್ಕಾಗಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಏಕಕಾಲದಲ್ಲಿ 51 ಸಾವಿರ ಜನರಿಂದ ವಚನ ವಾಚನ ನಡೆಯಲಿದ್ದು, ಇದನ್ನು ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ದಾಖಲಿಸುವ ಪ್ರಯತ್ನವೂ ನಡೆದಿದೆ.
ಕೃಷಿ ಮೇಳ, ಜಾನುವಾರು ಜಾತ್ರೆ26ರಂದು ಬೆಳಗ್ಗೆ 10.30ಕ್ಕೆ ಹಾನಗಲ್ಲ ರಸ್ತೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ಶ್ರೀ ಶಿವಬಸವ ಜಾನುವಾರು ಜಾತ್ರೆಯ ಸುವರ್ಣ ಮಹೋತ್ಸವ ನಿಮಿತ್ತ ಕೃಷಿ ಮೇಳ, ಕೃಷಿ ಉಪಕರಣಗಳ ಪ್ರದರ್ಶನ, ಜಾನುವಾರು ಜಾತ್ರೆ ನಡೆಯಲಿದೆ. ಸಂಜೆ 6.30ಕ್ಕೆ ಶ್ರೀ ಶಿವಬಸವೇಶ್ವರ ಉಚಿತ ಪ್ರಸಾದ ನಿಲಯದ ಅಮೃತ ಮಹೋತ್ಸವ, ಹಳೆಯ ವಿದ್ಯಾರ್ಥಿಗಳ ಸಂಘದ ರಜತ ಮಹೋತ್ಸವ, ಡಿ. 27ರಿಂದ ಶ್ರೀ ಮಠದ ಆವರಣದಲ್ಲಿ ತೋಟಗಾರಿಕೆ ಇಲಾಖೆಯಿಂದ ಫಲ-ಪುಷ್ಟ ಪ್ರದರ್ಶನ, ರೇಷ್ಮೆ ಇಲಾಖೆಯಿಂದ ರೇಷ್ಮೆ ಸಾಕಣೆ ಕುರಿತು ಪ್ರದರ್ಶನ ಜರುಗಲಿದೆ.
27ರಂದು ಸಂಜೆ 4ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ 51 ಸಾವಿರ ಜನರಿಂದ ವಚನ ವಂದನ ಸಮಾರಂಭ, 28ರಂದು ಬೆಳಗ್ಗೆ 10.30ಕ್ಕೆ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹುಕ್ಕೇರಿಮಠದ ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ಗುರುವಂದನೆ ಸಮಾರಂಭ ನಡೆಯಲಿದೆ. ಸಂಜೆ 6.30ಕ್ಕೆ ಶಿವಬಸವೇಶ್ವರ ಶಾಲೆಯ ಸುವರ್ಣ ಮಹೋತ್ಸವ ನಡೆಯಲಿದೆ. 29ಕ್ಕೆ ಸಂಜೆ 6 ಗಂಟೆಗೆ ಶ್ರೀಗಳಿಗೆ ರಜತ ತುಲಾಭಾರ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. 30ರಂದು ಶ್ರೀ ಶಿವಬಸವೇಶ್ವರ ಸ್ವಾಮೀಜಿ ಹಾಗೂ ಶ್ರೀ ಶಿವಲಿಂಗ ಸ್ವಾಮೀಜಿಯವರ ಪುಣ್ಯಸ್ಮರಣೆ, ಲಿಂಗೈಕ್ಯ ಉಭಯ ಶ್ರೀಗಳ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಲಿದೆ.ನಿತ್ಯ ದಾಸೋಹಡಿ. 9ರಿಂದ ಹುಕ್ಕೇರಿಮಠದಲ್ಲಿ ನಡೆಯುತ್ತಿರುವ ಆಧ್ಯಾತ್ಮಿಕ ಪ್ರವಚನಕ್ಕೆ ಬರುವವರಿಗೆ ನಿರಂತರ ದಾಸೋಹ ನಡೆಯುತ್ತಿದೆ. ಈಗ ಜಿಲ್ಲಾ ಕ್ರೀಡಾಂಗಣಕ್ಕೆ ಪ್ರಮುಖ ಕಾರ್ಯಕ್ರಮಗಳು ಸ್ಥಳಾಂತರಗೊಂಡಿದ್ದು, ಅಲ್ಲಿಗೆ ಬರುವ ಭಕ್ತಾಧಿಗಳಿಗಾಗಿ ದಾಸೋಹಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ನಿತ್ಯವೂ ರಾತ್ರಿ ಹತ್ತಾರು ಸಾವಿರ ಜನರಿಗೆ ಊಟ ಬಡಿಸಲು ಖಾದ್ಯಗಳು ಸಿದ್ಧಗೊಳ್ಳುತ್ತಿವೆ. 200ಕ್ಕೂ ಹೆಚ್ಚು ಬಾಣಸಿಗರು ಅಡುಗೆ ಸಿದ್ಧಪಡಿಸಲು ಸಜ್ಜಾಗಿದ್ದಾರೆ. ನಿತ್ಯವೂ ವಿವಿಧ ಖಾದ್ಯ ತಯಾರಿಸಲು ಸಿದ್ಧತೆ ನಡೆಸಿಕೊಂಡಿದ್ದಾರೆ. ಹೋಳಿಗೆ, ಪಾಯಸ, ಬೂಂದಿ, ಮಾದಲಿ ಸೇರಿದಂತೆ ನಿತ್ಯವೂ ಒಂದೊಂದು ಸಿಹಿಯೂ ಊಟದಲ್ಲಿ ಇರಲಿದೆ ಎಂದು ಜಾತ್ರಾ ಸಮಿತಿಯವರು ತಿಳಿಸಿದರು. ಪಾದಯಾತ್ರೆಈ ಸಲ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವವನ್ನು ವಿಶೇಷವಾಗಿ ಹಾಗೂ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಸದಾಶಿವ ಸ್ವಾಮೀಜಿಗಳ ನೇತೃತ್ವದಲ್ಲಿ ಆಧ್ಯಾತ್ಮಿಕತೆ, ದುಶ್ಚಟಗಳನ್ನು ಹೋಗಲಾಡಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಲು ಪಾದಯಾತ್ರೆ ನಡೆಸಿದ್ದಾರೆ. ಡಿ. 25ರಿಂದ 30ರ ವರೆಗೆ ನಡೆಯುವ ಎಲ್ಲ ಕಾರ್ಯಕ್ರಮಗಳಿಗೆ ನಿತ್ಯವೂ ಹತ್ತಾರು ಸಾವಿರ ಜನರು ಆಗಮಿಸಲಿದ್ದು, ಯಾವುದೇ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಜಾತ್ರಾ ಮಹೋತ್ಸವ ಹಾಗೂ ಬೆಳ್ಳಿ ತುಲಾಭಾರ ಸಮಿತಿ ಕಾರ್ಯಾಧ್ಯಕ್ಷ ಮಹೇಶ ಚಿನ್ನಿಕಟ್ಟಿ ತಿಳಿಸಿದ್ದಾರೆ.