ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಒತ್ತಾಯಿಸಿ ನ. 24ರಂದು ಹಾವೇರಿ ಡಿಸಿ ಕಚೇರಿ ಮುತ್ತಿಗೆ

| Published : Nov 20 2025, 01:00 AM IST

ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಒತ್ತಾಯಿಸಿ ನ. 24ರಂದು ಹಾವೇರಿ ಡಿಸಿ ಕಚೇರಿ ಮುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಿ ಹಾಗೂ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ನ. 24ರಂದು ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಗೂ ಅಹೋರಾತ್ರಿ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.

ಹಾವೇರಿ: ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಿ ಹಾಗೂ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ನ. 24ರಂದು ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಗೂ ಅಹೋರಾತ್ರಿ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷ ಅತಿವೃಷ್ಟಿಯಿಂದ ರೈತರು ಸಾಲ-ಸೋಲ ಮಾಡಿ ಎರಡು ಸಲ ಬಿತ್ತನೆ ಮಾಡಿದ್ದಾರೆ. ಆದಾಗ್ಯೂ ಸರಿಯಾಗಿ ಫಸಲು ಬಾರದೇ ರೈತರು ತತ್ತರಿಸಿದ್ದಾರೆ. ಇಳುವರಿ ಕೂಡ ಕಡಿಮೆ ಇದೆ. ಮೆಕ್ಕೆಜೋಳ ಸರಾಸರಿ 5-6 ಕ್ವಿಂಟಲ್ ಮಾತ್ರ ಬರುತ್ತಿದೆ. ಹೀಗಾಗಿ ಅನ್ನದಾತರಿಗೆ ದಿಕ್ಕು ತೋಚದಂತಾಗಿದೆ. ಅನ್ನದಾತರ ನೆರವಿಗೆ ಬರಬೇಕಿದ್ದ ಸರ್ಕಾರ ರೈತರನ್ನು ಭಿಕ್ಷುಕರಂತೆ ಕಾಣುತ್ತಿದೆ. ಅತಿವೃಷ್ಟಿ ಪರಿಹಾರ ಕೊಡದೆ ಸರ್ಕಾರ ಹಾಗೂ ಜಿಲ್ಲಾಡಳಿತ ರೈತರ ಜೀವನದಲ್ಲಿ ಚೆಲ್ಲಾಟವಾಡುತ್ತಿವೆ ಎಂದು ಆರೋಪಿಸಿದರು.

ದುಬಾರಿ ಬೀಜ ಗೊಬ್ಬರ, ಅಸಮರ್ಪಕ ವಿದ್ಯುತ್ ಪೂರೈಕೆ ನೀತಿ, ಬೆಲೆ ನೀತಿ, ಸಾಲ ನೀತಿಗಳಿಂದ ರೈತ ಸಂಕಷ್ಟದಿಂದ ಹೊರಬರಲು ಸಾಧ್ಯವಾಗಿಲ್ಲ. ಬಂಡವಾಳಶಾಹಿಗಳ ಸಾಲ ಮನ್ನಾ ಮಾಡಿ ಸಹಾಯ ಮಾಡುವ ಕೇಂದ್ರ ಸರ್ಕಾರ ರೈತರ ಬಗ್ಗೆ ನಿರ್ಲಕ್ಷ್ಯ ಮಾಡುವುದು ರೈತ ವಿರೋಧಿ ನೀತಿಯಾಗಿದೆ. ಇಂತಹ ಭಂಡ ಸರ್ಕಾರಗಳ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಿದ್ದು, ನ. 24ರಂದು ಡಿಸಿ ಕಚೇರಿಗೆ ಮುತ್ತಿಗೆ ಹಾಕಿ, ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸಲಾಗುವುದು. ರೈತರು, ಪ್ರಗತಿಪರ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಮಠಾಧೀಶರು ಚಳವಳಿಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಬೇಕು. ಅಗತ್ಯ ಬಿದ್ದರೆ ಜೈಲ್ ಭರೋ, ಹೆದ್ದಾರಿ ತಡೆ ನಡೆಸಿ ಉಗ್ರ ರೀತಿಯಲ್ಲಿ ಹೋರಾಟ ನಡೆಸಲಾಗುವುದು. ನಮ್ಮ ಬೇಡಿಕೆ ಈಡೇರದೇ ನಿರ್ಧಾರದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.

ರಾಜ್ಯ ಸಮಿತಿ ಸದಸ್ಯ ಮಾಲತೇಶ ಪೂಜಾರ ಮಾತನಾಡಿ, ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ ಸರ್ಕಾರ ಬೆಳೆ ನಷ್ಟ ಪರಿಹಾರ ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರೋಪ, ಪ್ರತ್ಯಾರೋಪ ಮಾಡುವುದನ್ನು ಬಿಟ್ಟು ಕನಿಷ್ಠ ಬೆಂಬಲ ಬೆಲೆ ನೀಡುವ ಮೂಲಕ ರೈತರ ನೆರವಿಗೆ ಧಾವಿಸಬೇಕು. ರೈತರ ಬೇಡಿಕೆ ಈಡೇರಿಸದಿದ್ದರೆ ದಿಲ್ಲಿ ಮಾದರಿಯಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದರು.

ಜಿಲ್ಲಾ ಉಪಾಧ್ಯಕ್ಷ ಎಚ್.ಎಚ್. ಮುಲ್ಲಾ, ಮರಿಗೌಡ್ರ ಪಾಟೀಲ, ಪ್ರಭುಗೌಡ ಪ್ಯಾಟಿ, ಚನ್ನಪ್ಪ ಮರಡೂರ, ಶಿವಯೋಗಿ ಹೊಸಗೌಡ್ರ, ರಾಜು ತರ್ಲಗಟ್ಟ, ಶಂಕ್ರಣ್ಣ ಶಿರಗಂಬಿ, ಸುರೇಶ ಹೊನ್ನಪ್ಪನವರ, ಗಂಗನಗೌಡ ಮುದಿಗೌಡ್ರ, ಬಸನಗೌಡ ಗಂಗಪ್ಪನವರ, ಅಬ್ದುಲ್‌ಖಾದರ್ ಬುಡಂದಿ, ನವೀನ ಹುಲ್ಲತ್ತಿ, ಅಖೀಲಗೌಡ ಪಾಟೀಲ ಇತರರು ಇದ್ದರು.

ಹುಸಿಯಾದ ಭರವಸೆ: ಬೆಳೆ ಹಾನಿ ಪರಿಹಾರ ನೀಡಲು ₹38 ಕೋಟಿ ಇದೆ. ರೈತರಿಗೆ ದೀಪಾವಳಿಗೆ ಉಡುಗೊರೆ ಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಭರವಸೆ ನೀಡಿದ್ದರು. ಆದರೆ ನವೆಂಬರ್ ತಿಂಗಳು ಕಳೆಯುತ್ತಾ ಬಂದರೂ ಯಾವುದೇ ಪರಿಹಾರ ನೀಡಿಲ್ಲ. ಸಚಿವರು ನೀಡಿದ ಭರವಸೆ ಹುಸಿಯಾಗಿದೆ. ಕೇಂದ್ರ ಸರ್ಕಾರ ಕೂಡ ಮಾರ್ಗಸೂಚಿಯನ್ವಯ ರೈತರ ನೆರವಿಗೆ ಬರಬೇಕು. ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಅಮೆರಿಕಾದೊಂದಿಗೆ ಮುಕ್ತ ವ್ಯಾಪಾರ ವಹಿವಾಟಿಗೆ ಒಪ್ಪಬಾರದು. ಹೀಗಾದಲ್ಲಿ ರೈತರು ಇನ್ನು ಮುಂದೆ ಮೆಕ್ಕೆಜೋಳ ಬೆಳೆಯುವುದನ್ನೆ ನಿಲ್ಲಿಸಬೇಕಾದ ಸಂದರ್ಭ ಬರಬಹುದು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.