ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ ಹಾವೇರಿಯ ಜಿಲ್ಲಾ ಮಟ್ಟದ ಕಾರ್ಯಕ್ರಮ: ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ

| Published : Apr 24 2024, 02:19 AM IST

ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ ಹಾವೇರಿಯ ಜಿಲ್ಲಾ ಮಟ್ಟದ ಕಾರ್ಯಕ್ರಮ: ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಹಳೇಬೀಡಿನ ಶ್ರೀ ಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸ್ವಸಹಾಯ ಮಹಿಳಾ ಸದಸ್ಯರಿಗೆ ಇದೇ ಏ.೨೮,೨೯ ಮತ್ತು ೩೦ ರಂದು ಹಾವೇರಿ ಜಿಲ್ಲಾ ಮಟ್ಟದ ಮೂರು ದಿನದ ಕಾರ್ಯಾಗಾರವನ್ನು ಪುಷ್ಪಗಿರಿ ಮಹಾಸಂಸ್ಥಾನದಲ್ಲಿ ಹಮ್ಮಿಕೊಂಡಿದೆ

ಕಾರ್ಯಾಗಾರ । ಜಗದ್ಗುರು ಮಾಹಿತಿ । ಮಹಿಳೆಯರಿಗೆ ಕೌಲ್ಯ ತರಬೇತಿ

ಕನ್ನಡಪ್ರಭ ವಾರ್ತೆ ಹಳೇಬೀಡು

ಸಮೀಪದ ಶ್ರೀ ಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸ್ವಸಹಾಯ ಮಹಿಳಾ ಸದಸ್ಯರಿಗೆ ಇದೇ ಏ.೨೮,೨೯ ಮತ್ತು ೩೦ ರಂದು ಹಾವೇರಿ ಜಿಲ್ಲಾ ಮಟ್ಟದ ಮೂರು ದಿನದ ಕಾರ್ಯಾಗಾರವನ್ನು ಪುಷ್ಪಗಿರಿ ಮಹಾಸಂಸ್ಥಾನದಲ್ಲಿ ಹಮ್ಮಿಕೊಂಡಿದೆ ಎಂದು ಪುಷ್ಪಗಿರಿ ಮಹಾಸಂಸ್ಥಾನ ಶ್ರೀಮಠದ ಜಗದ್ಗುರು ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.

ಮಾಧ್ಯಮದೊಂದಿಗೆ ಮಾತನಾಡಿ, ಕಳೆದ ೨೦೨೦ ರಲ್ಲಿ ಅಸ್ತಿತ್ವಕ್ಕೆ ಬಂದ ಶ್ರೀ ಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಮಹಿಳಾ ಸಬಲೀಕರಣದ ಆಶೋತ್ತರಗಳನ್ನು ಹೊತ್ತು ಸಂಸ್ಥೆ ಇಂದು ರಾಜ್ಯದ ಹತ್ತು ಜಿಲ್ಲೆಯಲ್ಲಿ ಸಾವಿರಾರು ಮಹಿಳಾ ಸ್ವಸಹಾಯ ಸಂಘವನ್ನು ಸ್ಥಾಪಿಸುವ ಮೂಲಕ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ಮತ್ತು ಸ್ವ-ಉದ್ಯೋಗ ಪರಿಕಲ್ಪನೆಯಡಿಯಲ್ಲಿ ತರಬೇತಿ ನೀಡುತ್ತ ಬಂದಿದೆ. ಪುಷ್ಪಗಿರಿ ಗ್ರಾಮೀಣಾಭಿವೃದ್ದಿ ಸಂಸ್ಥೆ ಜಾತಿ, ಧರ್ಮ, ವರ್ಗಕ್ಕೆ ಅಂಟಿಕೊಳ್ಳದೆ ‘ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವುದೇ ಶಿವಾಚಾರ’ ಎಂಬ ಬಸವಣ್ಣನವರ ಅಶಯದಂತೆ ಕೆಲಸ ಮಾಡುತ್ತಿದೆ. ಇಂತಹ ಸಂಸ್ಥೆ ಈಗಾಗಲೇ ಹಾಸನ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಬೃಹತ್ ಮಹಿಳಾ ಸಮಾವೇಶವನ್ನು ನಡೆಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಶ್ರೀ ಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ವಿವಿಧ ಪ್ರಕಾರದಲ್ಲಿ ತರಬೇತಿ ಮತ್ತು ಅರಿವು ಮೂಡಿಸಬೇಕು. ಈ ಹಿನ್ನೆಲೆ ಇದೇ ಏ.೨೮. ೨೯ ಮತ್ತು ೩೦ರಂದು ಹಾವೇರಿ ಜಿಲ್ಲಾ ಮಟ್ಟದ ಸ್ವ ಸಹಾಯ ಸಂಘದ ಸದಸ್ಯರಿಗೆ ಮೂರು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಸಂಘದ ಸದಸ್ಯರು ಮೂರು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಏ.28ರ ಸಂಜೆ ನೋಂದಣಿ ಕಾರ್ಯ ಮುಕ್ತಾಯವಾದ ಬಳಿಕ ಕಾರ್ಯಾಗಾರವನ್ನು ಅಧಿಕೃತವಾಗಿ ಉದ್ಘಾಟನೆ ನಡೆಸಲಾಗುತ್ತದೆ. ಬಳಿಕ ಏ.೨೯ ರಂದು ಬೆಳಿಗ್ಗೆ ಯೋಗ, ವಿವಿಧ ಉಪನ್ಯಾಸ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸಂಘದ ಬಲವರ್ಧನೆ ಜೊತೆಗೆ ಮಹಿಳಾ ಸಬಲೀಕರಣದ ಬಗ್ಗೆ ವಿಶೇಷ ಜಾಗೃತಿ ಉಪನ್ಯಾಸಗಳು ನಡೆಯುತ್ತದೆ. ಏ.೩೦ ರಂದು ಪುಷ್ಪಗಿರಿ ಮಹಾಸಂಸ್ಥಾನದ ಹಿರಿಯ ಪೂಜ್ಯ ಲಿಂಗೈಕ್ಯ ಬಸವರಾಜ ದೇಶಿಕೇಂದ್ರ ಮಹಾಸ್ವಾಮೀಜಿ ೨೦ನೇ ವರ್ಷ ಪುಣ್ಯ ಸಂಸ್ಮರಣೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ನಾಡಿನ ಪೂಜ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಆಗಮಿಸಲಿದ್ದಾರೆ. ಪುಷ್ಪಗಿರಿ ಮಠದಲ್ಲಿ ನಡೆಯುವ ಜಿಲ್ಲಾ ಮಟ್ಟದ ಮೂರು ದಿನದ ಕಾರ್ಯಾಗಾರಕ್ಕೆ ಆಗಮಿಸುವ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಅಂತಿಮ ದಿನ ಕಾರ್ಯಾಗಾರದಲ್ಲಿ ಭಾಗವಹಿಸಿದ ಪ್ರತಿ ಸದಸ್ಯರಿಗೆ ಸಂಸ್ಥೆ ಕಡೆಯಿಂದ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಶ್ರೀಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕೇವಲ ಹಣಕಾಸು ವಹಿವಾಟು ನಡೆಸಲು ಸೀಮೀತವಾಗದೆ ಗೃಹ ಉತ್ಪನ್ನಗಳ ತಯಾರಿಕೆಯಲ್ಲಿ ಮುಂದಾಗಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಪ್ರತಿ ಸಂಘದ ಸದಸ್ಯರು ಒಂದಾಲ್ಲ. ಒಂದು ಅಗತ್ಯ ಗೃಹ ಉತ್ಪನ್ನಗಳ ತಯಾರಿಸಿ ತಮ್ಮ ಕುಟುಂಬದ ಅರ್ಥಿಕ ಮಟ್ಟದ ಸುಧಾರಿಸಿಕೊಳ್ಳಬೇಕು ಎಂದು ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಹಳೇಬೀಡು ಸಮೀಪದ ಪುಷ್ಪಗಿರಿ ಮಹಾಸಂಸ್ಥಾನದ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ.