. ರಾಜ್ಯ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷಿ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ವಿವಿಧ ಜಿಲ್ಲೆಗಳ ಒಂದು ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಗೆ ಹಾವೇರಿ ನಗರ ಸಜ್ಜುಗೊಂಡಿದೆ.
ಹಾವೇರಿ:ರಾಜ್ಯ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷಿ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ವಿವಿಧ ಜಿಲ್ಲೆಗಳ ಒಂದು ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಗೆ ಹಾವೇರಿ ನಗರ ಸಜ್ಜುಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ಸಾವಿರ ದಿನಗಳನ್ನು ಪೂರೈಸುತ್ತಿರುವ ಹಿನ್ನೆಲೆ ಹಾವೇರಿಯಲ್ಲಿ ರಾಜ್ಯ ಮಟ್ಟದ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ಆಯೋಜಿಸಲಾಗಿದೆ. ಅಕ್ಕಪಕ್ಕದ 9 ಜಿಲ್ಲೆಗಳ ಒಟ್ಟು 1.10 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ಸಮಾವೇಶದಲ್ಲಿ ವಿತರಣೆಯಾಗಲಿದೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಜರುಗಿದ ಹಾವೇರಿ ನಗರದ ಹೊರವಲಯದ ಅಜ್ಜಯ್ಯನಗುಡಿ ಬಳಿಯ 180 ಎಕರೆ ವಿಸ್ತೀರ್ಣದ ಸ್ಥಳದಲ್ಲಿ ಸಮಾವೇಶ ಆಯೋಜಿಸಲಾಗಿದೆ. 200 ಆಸನಗಳ ಬೃಹತ್ ವೇದಿಕೆ, ಒಂದು ಲಕ್ಷ ಜನ ಕುಳಿತುಕೊಳ್ಳುವ ಸಾಮರ್ಥ್ಯದ ಪೆಂಡಾಲ್, 200 ಊಟದ ಕೌಂಟರ್, ವಾಹನ ನಿಲುಗಡೆಗೆ ಪಾರ್ಕಿಂಗ್ ಸೇರಿದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾವೇಶವನ್ನು ಉದ್ಘಾಟಿಸಲಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸೇರಿದಂತೆ ಹಲವು ಸಚಿವರು, ಶಾಸಕರು ಪಾಲ್ಗೊಳ್ಳುತ್ತಿದ್ದಾರೆ.
ವಾಹನ ವ್ಯವಸ್ಥೆ; ಫಲಾನುಭವಿಗಳನ್ನು ಕರೆತರಲು ರಸ್ತೆ ಸಾರಿಗೆ ಸಂಸ್ಥೆಯ 2,140 ಬಸ್ಸುಗಳು, 195 ಖಾಸಗಿ ಬಸ್‍ಗಳು ಹಾಗೂ 215 ಶಾಲಾ ಕಾಲೇಜು ಬಸ್ಸುಗಳು ಸೇರಿ 2,550 ವಾಹನಗಳನ್ನು ಬಳಸಲಾಗುತ್ತಿದೆ. ಪ್ರತಿ ಬಸ್ಸಿಗೆ ಎರಡು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ .ಭೋಜನ ವ್ಯವಸ್ಥೆ: ಸಮಾವೇಶಕ್ಕೆ ಆಗಮಿಸುವವರಿಗೆ ಲಾಡು, ವೆಜ್ ಫಲಾವ್, ಮೊಸರನ್ನ, ಉಪ್ಪಿನಕಾಯಿ, ನೀರಿನ ಪ್ಯಾಕೆಟ್ ವ್ಯವಸ್ಥೆ ಮಾಡಲಾಗಿದೆ. ಊಟಕ್ಕೆ 200 ಕೌಂಟರ್‌ಗಳನ್ನು ತೆರೆಯಲಾಗಿದೆ. ಭೋಜನ ಸಿದ್ಧಪಡಿಸುವ ಕಾರ್ಯ ಶುಕ್ರವಾರದಿಂದಲೇ ಶುರುವಾಗಿದೆ. ಒಂದು ಸಾವಿರ ಜನರು ಊಟ ಬಡಿಸಲು ಅಣಿಯಾಗಿದ್ದಾರೆ. 400ಕ್ಕೂ ಹೆಚ್ಚು ಜನ ಬಾಣಸಿಗರು ಅಡುಗೆಯನ್ನು ಸಿದ್ಧಪಡಿಸುತ್ತಿದ್ದಾರೆ.
ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾವೇಶ ಉದ್ಘಾಟಿಸುವರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವರು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅಭಿನಂದನಾ ಪತ್ರಗಳನ್ನು ವಿತರಿಸುವರು. ವಿಧಾನಸಭೆ ಉಪಸಭಾಧ್ಯಕ್ಷ ಹಾಗೂ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸುವರು. ಹಲವು ಸಚಿವರು, ಜಿಲ್ಲೆಯ ಎಲ್ಲ ಶಾಸಕರು, ನಿಗಮ ಮಂಡಳಿಗಳ ಅಧ್ಯಕ್ಷರು, ಹಿರಿಯ ಅಧಿಕಾರಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ.