ಸಾರಾಂಶ
ಬ್ಯಾಡಗಿ: ಕಳೆದ 5 ದಿನಗಳ(ಮಾ. 28ರಂದು) ಹಿಂದಷ್ಟೇ ಹೈನುಗಾರರಿಗೆ ₹3.50 ಪೈಸೆ ಇಳಿಸಿದ್ದನ್ನು ಮುಚ್ಚಿಟ್ಟು ಇದೀಗ ರೈತರ ಅನುಕೂಲಕ್ಕಾಗಿ ಹಾಲಿನ ಮಾರಾಟ ದರ ₹4 ಏರಿಸಿರುವುದಾಗಿ ಹೇಳುತ್ತಿರುವ ಹಾಲು ಉತ್ಪಾದಕ ಮಂಡಳಿಗಳು ರೈತರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆರೋಪಿಸಿದರು.
ಪಟ್ಣಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಾವೇರಿ ಹಾಲು ಒಕ್ಕೂಟ ನೂತನ ಆಡಳಿತ ಮಂಡಳಿ ಅಧಿಕಾರ ಸ್ವೀಕರಿಸಿದ್ದು, ಇವರಿಂದ ಬಹಳಷ್ಟು ಉತ್ತಮ ನಿರೀಕ್ಷೆಗಳನ್ನು ರೈತರು ಇಟ್ಟುಕೊಂಡಿದ್ದರು. ಅಧಿಕಾರ ಪಡೆದ ಕೆಲವೇ ದಿನಗಳಲ್ಲಿ ನೂತನ ಮಂಡಳಿಯ ಬಣ್ಣ ಬಯಲಾಗಿದ್ದು, ಯಾರಿಗೂ ತಿಳಿಯದಂತೆ ಹಾಲಿನ ದರ ಇಳಿಕೆ ಮಾಡಿ ಇದೀಗ ಎಲ್ಲರಿಗೂ ಗೊತ್ತಾಗುವಂತೆ ಹಾಲಿನ ಮಾರಾಟ ₹4 ಏರಿಕೆ ಮಾಡಿ ಈ ಹಣವನ್ನು ರೈತರಿಗೆ ನೀಡುವುದಾಗಿ ಮೋಸದಾಟ ನಡೆಸುತ್ತಿದೆ. ಇದೊಂದು ರೈತರ ಕಣ್ಣಿಗೆ ಮಣ್ಣೆರೆಚುವ ಕೆಲಸವಲ್ಲದೇ ಇನ್ನೇನು ಎಂದು ಪ್ರಶ್ನಿಸಿದರು.ಮೊದಲ ಮೋಸ: ರೈತ ಸಂಘದ ಸಾಕಷ್ಟು ಹೋರಾಟದ ಫಲವಾಗಿ ಹಾವೇರಿ ಹಾಲು ಒಕ್ಕೂಟ ಸ್ಥಾಪನೆಯಾಗಲು ಸಾಧ್ಯವಾಯಿತು. ರೈತ ಸಂಘದ ಜಿಲ್ಲೆಯ ಎಲ್ಲ ರೈತರು ಸಾಕಷ್ಟು ಸಂತಸವನ್ನು ವ್ಯಕ್ತಪಡಿಸಿದ್ದರು. ನೂತನ ಒಕ್ಕೂಟದ ಮೊದಲ ನಿರ್ಣಯವೇ ರೈತರ ವಿರುದ್ಧ ಬಂದಿದ್ದು, ಮೊದಲ ಚುಂಬನಂ ದಂತ ಭಗ್ನಂ ಎನ್ನುವಂತೆ ರೈತರು ಇಟ್ಟಿದ್ದ ವಿಶ್ವಾಸಕ್ಕೆ ಧಕ್ಕೆ ಬರುವಂತೆ ನಡೆದುಕೊಂಡಿದ್ದಾರೆ ಎಂದು ಅರೋಪಿಸಿದರು.ಗಂಗಣ್ಣ ಎಲಿ ಮಾತನಾಡಿ, ಜಾನುವಾರು ದರ ಸೇರಿದಂತೆ ಮೇವು ಹಾಗೂ ಹಿಂಡಿ ದರಗಳು ನಿರಂತರವಾಗಿ ಹೆಚ್ಚಾಗುತ್ತಿವೆ. ಇದರಿಂದ ಹಾಲು ಉತ್ಪಾದನೆ ದುಸ್ತರವಾಗಿದ್ದು, ಇಷ್ಟೊಂದು ಕಡಿಮೆ ಮೊತ್ತಕ್ಕೆ ರೈತರು ಹಾಲು ಒಕ್ಕೂಟಕ್ಕೆ ಮಾರಾಟ ಮಾಡುತ್ತಿದ್ದಾರೆ. ಕೂಡಲೇ ಕಡಿಮೆ ಮಾಡಿರುವ ₹3.50 ಮೊತ್ತಕ್ಕೆ ಇಂದಿನಿಂದ ಏರಿಸಿರುವ ₹4 ಸೇರಿಸಿ ಒಟ್ಟು ₹7.50 ನೀಡಬೇಕು. ಇಲ್ಲದೇ ಇದ್ದಲ್ಲಿ ರೈತ ಸಂಘವು ಹಾಗೂ ಹಾಲು ಉತ್ಪಾದಕರ ಸಂಘಗಳ ಸದಸ್ಯರು ಹೈನುಗಾರಿಕೆಯಲ್ಲಿ ತೊಡಗಿರುವ ರೈತರೊಂದಿಗೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಿರಣ ಗಡಿಗೋಳ ಮಾತನಾಡಿ, ಪ್ರತಿ ಲೀ. ಹಾಲಿಗೆ ಸರ್ಕಾರ ₹5 ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದೆಯಾದರೂ ಕಾರ್ಯರೂಪಕ್ಕೆ ಬಂದಿಲ್ಲ. ಬಹುತೇಕ ರೈತರ ಪ್ರೋತ್ಸಾಹಧನ ಇಂದಿಗೂ ಬಿಡುಗಡೆಯಾಗಿಲ್ಲ. ಇದೊಂದು ರೈತ ವಿರೋಧಿ ಧೋರಣೆ ಹೊಂದಿರುವ ಸರ್ಕಾರ. ಕೂಡಲೇ ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿದರು.