ಸಾರಾಂಶ
ಹಾವೇರಿ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಶೇ. 67.56ರಷ್ಟು ಫಲಿತಾಂಶದೊಂದಿಗೆ ರಾಜ್ಯ ಮಟ್ಟದಲ್ಲಿ ಹಾವೇರಿ ಜಿಲ್ಲೆ 21ನೇ ಸ್ಥಾನಕ್ಕೆ ಏರಿದೆ.
ರಾಣಿಬೆನ್ನೂರಿನ ಖನ್ನೂರ ವಸತಿಯುತ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ಕ್ಷಮಾ ಸಿ.ಪಿ. ಅವರು 597 ಅಂಕ ಪಡೆದು ರಾಜ್ಯಕ್ಕೆ 3ನೇ ಹಾಗೂ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.ಕಳೆದ ವರ್ಷ ಜಿಲ್ಲೆ ಶೇ. 78.36ರಷ್ಟು ಫಲಿತಾಂಶದೊಂದಿಗೆ ರಾಜ್ಯ ಮಟ್ಟದಲ್ಲಿ 25ನೇ ಸ್ಥಾನ ಬಂದಿತ್ತು. ಈ ಬಾರಿ ಜಿಲ್ಲೆ ರಾಜ್ಯಮಟ್ಟದ ಸ್ಥಾನದಲ್ಲಿ 21ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದರೆ, ಶೇಕಡಾವಾರು ಫಲಿತಾಂಶದಲ್ಲಿ ಭಾರಿ ಕುಸಿತ ಕಂಡಿದೆ. ಕಳೆದ ಸಾಲಿಗಿಂತ ಶೇ. 11ರಷ್ಟು ಫಲಿತಾಂಶ ಕುಸಿದಿರುವುದು ಚಿಂತನೆಗೆ ಹಚ್ಚಿದೆ. ವಾಣಿಜ್ಯ ವಿಭಾಗದಲ್ಲಿ ರಾಣಿಬೆನ್ನೂರಿನ ಸಂಜೀವಿನಿ ಪಿಯು ಕಾಲೇಜಿನ ನಿವೇದಿತಾ ಕೆಂಚನಗೌಡ್ರ 587 ಅಂಕ, ಹಾವೇರಿಯ ಗುದ್ಲೆಪ್ಪ ಹಳ್ಳಿಕೇರಿ ಪಿಯು ಕಾಲೇಜಿನ ಮೌಲಿ ಪರಾಕ್ 583, ರಾಣಿಬೆನ್ನೂರು ತಾಲೂಕಿನ ಕುಮಾರಪಟ್ಟಣ ಫಾಲಿಫೈಬರ್ಸ್ ಸಂಯುಕ್ತ ಪಿಯು ಕಾಲೇಜಿನ ಗೋಯಮ್ ಜೈನ್ 582 ಅಂಕಗಳನ್ನು ಪಡೆದು ವಾಣಿಜ್ಯ ವಿಭಾಗದಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿದ್ದಾರೆ.ಕಲಾ ವಿಭಾಗದಲ್ಲಿ ಶಿಗ್ಗಾಂವಿಯ ಶ್ರೀ ರಂಭಾಪುರಿ ಸಂಯುಕ್ತ ಪಿಯು ಕಾಲೇಜಿನ ಸಂಧ್ಯಾ ಕುಲಕರ್ಣಿ 584 ಅಂಕ ಪಡೆದು ಪ್ರಥಮ ಸ್ಥಾನ, ರಾಣಿಬೆನ್ನೂರಿನ ಸಂಜೀವಿನಿ ಪಿಯು ಕಾಲೇಜಿನ ಲಕ್ಷ್ಮೀ ಕೆ. 583 ಅಂಕ ಪಡೆದು ದ್ವಿತೀಯ ಹಾಗೂ ಶಿಗ್ಗಾಂವಿಯ ಶ್ರೀ ರಂಭಾಪುರಿ ಸಂಯುಕ್ತ ಪಿಯು ಕಾಲೇಜಿನ ಭರಮಪ್ಪ ಹೊಸಮನಿ 580 ಅಂಕ ಪಡೆದು ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.ವಿಜ್ಞಾನ ವಿಭಾಗದಲ್ಲಿ ರಾಣಿಬೆನ್ನೂರಿನ ಖನ್ನೂರ ವಸತಿಯುತ ಪಿಯು ಕಾಲೇಜಿನ ಕ್ಷಮಾ ಸಿ.ಪಿ. 597 ಅಂಕ ಪಡೆದು ಪ್ರಥಮ ಸ್ಥಾನ, ರಾಣಿಬೆನ್ನೂರು ತಾಲೂಕಿನ ಕುಮಾರಪಟ್ಟಣ ಫಾಲಿಫೈಬರ್ಸ್ ಸಂಯುಕ್ತ ಪಿಯು ಕಾಲೇಜಿನ ಇಂಚರಾ ಬಿ.ಕೆ. 588 ಅಂಕ ಗಳಿಸಿ ದ್ವಿತೀಯ ಸ್ಥಾನ, ರಾಣಿಬೆನ್ನೂರಿನ ಖನ್ನೂರ ವಸತಿಯುತ ಪಿಯು ಕಾಲೇಜಿನ ನವ್ಯಾ ಕೋಟೆಣ್ಣವರ 587 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.5991 ಬಾಲಕರು ಮತ್ತು 8105 ಬಾಲಕಿಯರು ಸೇರಿದಂತೆ ಒಟ್ಟು 14096 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 8936 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 67.56ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.ಎಂದಿನಂತೆ ಈ ಸಲವೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಶೇ. 71.39ರಷ್ಟ್ಟು ಬಾಲಕಿಯರು ಉತ್ತೀರ್ಣರಾಗಿದ್ದರೆ, ಶೇ. 52.58ರಷ್ಟು ಬಾಲಕರು ಪಾಸಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದವರಲ್ಲಿ ಶೇ. 57.04ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರೆ, ಆಂಗ್ಲ ಮಾಧ್ಯಮದಲ್ಲಿ ಶೇ. 72.96ರಷ್ಟು ಫಲಿತಾಂಶ ಬಂದಿದೆ.ಗ್ರಾಮೀಣ ಭಾಗದ ಶೇ. 64.97ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದು, ನಗರ ಪ್ರದೇಶದ ಶೇ. 68.83ರಷ್ಟು ಮಕ್ಕಳು ಪಾಸಾಗಿದ್ದಾರೆ. ಕಲಾ ವಿಭಾಗದಲ್ಲಿ ಮೊದಲ ಬಾರಿಗೆ ಪರೀಕ್ಷೆ ಎದುರಿಸಿದ 5566 ವಿದ್ಯಾರ್ಥಿಗಳ ಪೈಕಿ 3250 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 58.39ರಷ್ಟು ಫಲಿತಾಂಶ ಬಂದಿದೆ.ವಾಣಿಜ್ಯ ವಿಭಾಗದಲ್ಲಿ 3438 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2487 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 72.34ರಷ್ಟು ಫಲಿತಾಂಶ ಬಂದಿದೆ.ವಿಜ್ಞಾನ ವಿಭಾಗದಲ್ಲಿ 3917 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2992 ವಿದ್ಯಾರ್ಥಿಗಳು ಪಾಸಾಗಿ ಶೇ. 76.38ರಷ್ಟು ಫಲಿತಾಂಶ ಬಂದಿದೆ.ದ್ವಿತೀಯ ಪಿಯು ವಿಜ್ಞಾನದಲ್ಲಿ ಕ್ಷಮಾಗೆ 3ನೇ ರ‍್ಯಾಂಕ್
ರಾಣಿಬೆನ್ನೂರು: ನಗರದ ಖನ್ನೂರ ಪಿಯು ಕಾಲೇಜಿನ ಕ್ಷಮಾ ಚಂದ್ರಪ್ಪ ಪೂಜಾರ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 3ನೇ ರ‍್ಯಾಂಕ್ ಗಳಿಸಿದ್ದಾರೆ.ನನಗೆ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿ ಐಎಎಸ್ ಅಧಿಕಾರಿಯಾಗುವ ಇಚ್ಛೆಯಿದೆ ಎಂದು ರ‍್ಯಾಂಕ್ ವಿಜೇತೆ ಕ್ಷಮಾ ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.ನನ್ನ ಸಾಧನೆಗೆ ಕಾಲೇಜಿನಲ್ಲಿ ದಿನ ಬಿಟ್ಟು ದಿನ ಪಿಸಿಎಂಬಿ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಎರಡು ವಿಷಯಗಳನ್ನು ಓದಲು ತಿಳಿಸುತ್ತಿದ್ದರು. ಈ ವೇಳೆ ಸಂಬಂಧಿಸಿದ ವಿಷಯಗಳ ಉಪನ್ಯಾಸಕರು ವಿಷಯ ಕುರಿತು ಯಾವುದೇ ಸಂದೇಹಗಳಿದ್ದರೂ ಅದನ್ನು ಪರಿಹರಿಸುತ್ತಿದ್ದರು. ಇದರಿಂದ ನನಗೆ ಪಿಸಿಎಂಬಿ ವಿಷಯಗಳ ಮನದಟ್ಟು ಮಾಡಿಕೊಳ್ಳಲು ಸುಲಭವಾಯಿತು. ಮನೆಯಲ್ಲಿ ಪೋಷಕರು ಕೂಡ ನನ್ನ ಓದಿಗೆ ಪ್ರೋತ್ಸಾಹ ನೀಡುತ್ತಿದ್ದರು. ತಂದೆ ಚಂದ್ರಪ್ಪ ಪೂಜಾರ ರಟ್ಟೀಹಳ್ಳಿ ತಾಲೂಕಿನ ಮೇದೂರ ಗ್ರಾಮದ ಖಾಸಗಿ (ಗಜಾನನ ಪದವಿಪೂರ್ವ ಕಾಲೇಜು) ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದಾರೆ. ತಾಯಿ ಪದವೀಧರೆಯಾಗಿದ್ದು, ಮನೆ ನಿರ್ವಹಣೆ ಮಾಡುತ್ತಿದ್ದಾರೆ. ಕ್ಷಮಾ ಅವರ ಸಹೋದರಿ ಕೂಡ ಓದಿನಲ್ಲಿ ಮುಂದಿದ್ದು, ಸರ್ಕಾರಿ ಸೀಟ್ ಪಡೆದು ತುಮಕೂರಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.ಕ್ಷಮಾ ಪಡೆದ ಅಂಕಗಳು: ಕನ್ನಡ 100, ಇಂಗ್ಲಿಷ್ 97, ಭೌತಶಾಸ್ತ್ರ 100, ರಸಾಯನಶಾಸ್ತ್ರ 100, ಗಣಿತ 100, ಜೀವಶಾಸ್ತ್ರ 100 ಒಟ್ಟು 597/600.