ಹಾವೇರಿ ನಗರದ ಹೊರವಲಯದ ಕೆರಿಮತ್ತಿಹಳ್ಳಿಯಲ್ಲಿರುವ ಹಾವೇರಿ ವಿಶ್ವ ವಿದ್ಯಾಲಯದಲ್ಲಿ ಸುಮಾರು 18ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನೂತನವಾಗಿ ಪ್ರಾರಂಭಿಸಲಾದ ಗಣಕಯಂತ್ರ ವಿಭಾಗವನ್ನು ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಭಾನುವಾರ ಲೋಕಾರ್ಪಣೆಗೊಳಿಸಿದರು.
ಹಾವೇರಿ: ನಗರದ ಹೊರವಲಯದ ಕೆರಿಮತ್ತಿಹಳ್ಳಿಯಲ್ಲಿರುವ ಹಾವೇರಿ ವಿಶ್ವ ವಿದ್ಯಾಲಯದಲ್ಲಿ ಸುಮಾರು 18ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನೂತನವಾಗಿ ಪ್ರಾರಂಭಿಸಲಾದ ಗಣಕಯಂತ್ರ ವಿಭಾಗವನ್ನು ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಭಾನುವಾರ ಲೋಕಾರ್ಪಣೆಗೊಳಿಸಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಯದುವೀರ ಕೃಷ್ಣದತ್ತ ಒಡೆಯರ, ಸಂಸದ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಹಾವೇರಿಯಲ್ಲಿ ಹೊಸ ವಿಶ್ವ ವಿದ್ಯಾಲಯ ಸ್ಥಾಪನೆಯಾಗಿದೆ. ಹಾವೇರಿ ವಿವಿ ಸುಸಜ್ಜಿತವಾಗಿ ವಿಶಾಲವಾದ ಪರಿಸರ, ಮೂಲ ಸೌಕರ್ಯಗಳನ್ನು ಹೊಂದಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿದೆ. ಈ ಭಾಗದ ಹಿಂದುಳಿದ, ಬಡ ಮಕ್ಕಳ ಕಲಿಕೆಗೆ ಪೂರಕವಾಗಿದೆ. ಗ್ರಾಮೀಣ ಭಾಗದ ಮಕ್ಕಳು ಉನ್ನತ ಶಿಕ್ಷಣ ಪಡೆಯಲಿಕ್ಕೆ ನಗರಕ್ಕೆ ಬರುವುದು ಕಡಿಮೆ, ಅವರಿಗೆ ಉನ್ನತ ಶಿಕ್ಷಣ ಪಡೆಯಲು ಹಾವೇರಿ ವಿವಿ ಒಳ್ಳೆಯ ಅವಕಾಶ ಒದಗಿಸುತ್ತಿದೆ ಎಂದರು. ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯ ಸರ್ಕಾರದ ಯಾವುದೇ ಅನುದಾನ ಇಲ್ಲದೇ ಹಾವೇರಿ ವಿಶ್ವವಿದ್ಯಾಲಯ ನಡೆಯುತ್ತಿದೆ. ಅತ್ಯಂತ ಕಡಿಮೆ ಮೂಲ ಸೌಕರ್ಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಕೊಡುತ್ತಿದೆ. ಪರೀಕ್ಷೆ ನಡೆದು ಹದಿನೈದು ದಿನದಲ್ಲಿ ಫಲಿತಾಂಶ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಮಾದರಿ ವಿಶ್ವವಿದ್ಯಾಲಯವಾಗುತ್ತದೆ. ರಾಜ್ಯ ಸರ್ಕಾರ ಹಾವೇರಿ ವಿಶ್ವ ವಿದ್ಯಾಲಯದಲ್ಲಿ ಕನಿಷ್ಠ ಹುದ್ದೆಗಳನ್ನು ಸೃಷ್ಟಿ ಮಾಡಿ ನೇಮಕಾತಿಯನ್ನಾದರೂ ಮಾಡಿದರೆ, ಮುಂದಿನ ದಿನಗಳಲ್ಲಿ ಯುಜಿಸಿಯಿಂದ ಅನುದಾನ ತರಲು ಅನುಕೂಲವಾಗಲಿದೆ. ಅದನ್ನು ಮಾಡಬೇಕೆಂದು ಆಗ್ರಹಿಸುವುದಾಗಿ ತಿಳಿಸಿದರು.ಈ ವೇಳೆ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ವಿವಿ ಕುಲಸಚಿವ ಎಸ್.ಟಿ ಬಾಗಲಕೋಟೆ, ಮೌಲ್ಯಮಾಪನ ಕುಲಸಚಿವೆ ರೇಣುಕಾ ಮೇಟಿ ಸೇರಿದಂತೆ ವಿವಿಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು. ಹಾವೇರಿ ವಿವಿಯಲ್ಲಿ ಕಂಪ್ಯೂಟರ್ ವಿಭಾಗ ಉದ್ಘಾಟನೆ ಮಾಡಿರುವುದು ಮತ್ತು ಹುಕ್ಕೇರಿಮಠದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ನನ್ನ ಸೌಭಾಗ್ಯವಾಗಿದೆ. ಹುಕ್ಕೇರಿಮಠ ಕರ್ನಾಟಕದ ಧಾರ್ಮಿಕ ನೆಲೆಗಟ್ಟಿನಲ್ಲಿ ತನ್ನದೇಯಾದ ಪರಂಪರೆಯನ್ನು ಹೊಂದಿದೆ. ಅದರಲ್ಲಿ ಭಾಗವಹಿಸುವುದು ನನ್ನ ಸುದೈವ ಎಂದು ಮೈಸೂರು ಸಂಸದ ಯದುವೀರ ಕೃಷ್ಣದತ್ತ ಒಡೆಯರ್ ಹೇಳಿದರು.
2024-25ನೇ ಸಾಲಿನಲ್ಲಿ ವಿಶ್ವವಿದ್ಯಾಲಯದಿಂದ ಪ್ರಥಮ ಸ್ನಾತಕೋತ್ತರ, ಬಿ.ಎಡ್ (ಶಿಕ್ಷಣ), ಬಿಪಿಎಡ್ (ದೈಹಿಕ ಶಿಕ್ಷಣ) ವಿದ್ಯಾರ್ಥಿಗಳು ಪದವಿ ಪಡೆದು ಹೊರ ಹೊಮ್ಮುತ್ತಿದ್ದಾರೆ. ವಿಶ್ವವಿದ್ಯಾಲಯ ಪ್ರಥಮ ಘಟಿಕೋತ್ಸವ ಆಚರಿಸಿಕೊಳ್ಳಲು ಸನ್ನದ್ಧವಾಗಿದೆ. ಇದು ನಮ್ಮ ಜಿಲ್ಲೆಗೆ ಒಂದು ಹೆಮ್ಮೆಯ ವಿಷಯವೂ ಕೂಡ. ಸ್ನಾತಕೋತ್ತರ ಪದವಿಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಗುರುತಿಸಿ ಪ್ರೋತ್ಸಾಹಿಸಲು ವಿವಿ ಸ್ವರ್ಣ ಪದಕ ಹಾಗೂ ನಗದು ಬಹುಮಾನ ನೀಡಲು ನಿರ್ಧರಿಸಿದೆ ಎಂದು ಹಾವೇರಿ ವಿವಿ ಕುಲಪತಿ ಡಾ.ಸುರೇಶ ಜಂಗಮಶೆಟ್ಟಿಹೇಳಿದರು.