ಸಾರಾಂಶ
ಹಾವೇರಿ: ಜಿಲ್ಲಾದ್ಯಂತ ಶುಕ್ರವಾರ ರಾತ್ರಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಲೂಕಿನ ಕನಕಾಪುರ ಬಳಿ ಯುಟಿಪಿ ಕಾಲುವೆ ಒಡೆದು ನೂರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಬ್ಯಾಡಗಿಯಲ್ಲಿ ಜನತಾ ಪ್ಲಾಟ್ ಮನೆಗಳಿಗೆ ನೀರು ನುಗ್ಗಿದೆ. ಹಾವೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಎರಡು ಅಡಿ ನೀರು ಹರಿದು ಸಂಚಾರಕ್ಕೆ ವ್ಯತ್ಯಯವುಂಟಾಗಿ ಅವಾಂತರ ಸೃಷ್ಟಿಯಾದ ಘಟನೆ ನಡೆದಿದೆ.
ಚಿತ್ತಿ ಮಳೆ ಆರಂಭದಲ್ಲೇ ಆತಂಕ ಮೂಡಿಸಿದೆ. ದಸರಾ ಹಬ್ಬದ ಸಡಗರದಲ್ಲಿದ್ದ ಜನರನ್ನು ಮಳೆ ಕಂಗಾಲಾಗಿಸಿದೆ. ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೆ ಸುರಿಯುತ್ತಿದ್ದ ಮಳೆ ಕಳೆದೆರಡು ದಿನಗಳಿಂದ ಹಗಲಿನಲ್ಲಿಯೂ ಸಹಾ ಆಗಾಗ ಬಿಡುವು ನೀಡಿ ಧಾರಾಕಾರವಾಗಿ ಸುರಿಯುತ್ತಿದೆ. ಶುಕ್ರವಾರ ಸಂಜೆ ವೇಳೆ ಶುರುವಾದ ಮಳೆ ತಡರಾತ್ರಿವರೆಗೂ ಸುರಿದಿದೆ. ಇದರಿಂದ ಹಾನಗಲ್ಲ ರಸ್ತೆ, ಹಳೆ ಪಿಬಿ ರಸ್ತೆಯಲ್ಲಿ ಶಹರ ಠಾಣೆ ಎದುರು ಚರಂಡಿ ನೀರು ರಸ್ತೆಯಲ್ಲಿ ಹರಿದಿದೆ. ರೈಲ್ವೆ ನಿಲ್ದಾಣದ ಬಳಿ, ಗಾಂಧಿ ಭವನ, ಗೂಗಿಕಟ್ಟೆ ಮುಂತಾದ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.ಕನಕಾಪುರ ಬಳಿ ತುಂಗಾ ಮೇಲ್ದಂಡೆ ಕಾಲುವೆ ಒಡೆದು ಸಾಕಷ್ಟು ಹಾನಿಯುಂಟು ಮಾಡಿದೆ.
ಕಟಾವಿಗೆ ಬಂದಿದ್ದ ಸಾವಿರಾರು ಎಕರೆಯಲ್ಲಿನ ಬೆಳೆ ಹಾಳಾಗಿದೆ. ತುಂಗಾ ಮೇಲ್ದಂಡೆ ಕಾಲುವೆ ೩೦-೪೦ ಅಡಿಗಳಷ್ಟು ಒಂದು ಬದಿಯಲ್ಲಿ ಒಡೆದು ಅಪಾರ ಪ್ರಮಾಣದ ನೀರು ಜಮೀನುಗಳಿಗೆ ನುಗ್ಗುತ್ತಿದೆ.ಕಾಲುವೆ ನಿರ್ವಹಣೆಯಲ್ಲಿ ಲೋಪ ಕಾರಣ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಘಟನಾ ಸ್ಥಳಕ್ಕೆ ಧಾವಿಸಿದ ಯುಟಿಪಿ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡರು. ತುಂಗಾ ಮೇಲ್ದಂಡೆ ಕಾಲುವೆಯ ಕಾಮಗಾರಿ ಕಳಪೆಯಾಗಿದ್ದು ಕೇವಲ ೫ ವರ್ಷಗಳಲ್ಲಿ ಕಾಲುವೆ ಒಡೆದಿದೆ ಎಂದು ರೈತರು ಆರೋಪಿಸಿದ್ದಾರೆ. ತುರ್ತಾಗಿ ಕಾಲುವೆ ದುರಸ್ತಿ ಜೊತೆಗೆ ಹಾನಿಗೀಡಾದ ರೈತರಿಗೆ ತಕ್ಷಣ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ಕಾಲುವೆ ನೀರು ಹರಿದು ಆ ಪ್ರದೇಶದಲ್ಲಿ ಪ್ರವಾಹವನ್ನೇ ಸೃಷ್ಠಿಸಿದೆ. ಅಲ್ಲಿಂದ ಹರಿಯುತ್ತಿರುವ ನೀರು ಹಳ್ಳದಂತೆ ಹರಿದು ನೆಲೋಗಲ್ಲ, ಹನುಮನಹಳ್ಳಿ, ಕಾಟೇನಹಳ್ಳಿ, ಕನವಳ್ಳಿ, ಅಗಡಿ ಮತ್ತುಕರ್ಜಗಿ ಗ್ರಾಮಗಳ ಮೂಲಕ ಸಾಗಿ ವರದಾ ನದಿಯನ್ನು ಸೇರುತ್ತಿದ್ದ ಹಳ್ಳ ಇದೀಗ ನದಿಯಂತೆ ಭೋರ್ಗರೆಯುತ್ತಿದೆ. ಇದರಿಂದಾಗಿ ಹತ್ತಾರು ಹಳ್ಳಿಗಳ ಸಾವಿರಾರು ಎಕರೆ ಜಮೀನು ಜಲಾವೃತಗೊಂಡಿದೆ. ಹಾವೇರಿ ಅಗಡಿ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಅಪಾಯ ಲೆಕ್ಕಿಸದೇ ಜನರು ವಾಹನ ಓಡಿಸುತ್ತಿದ್ದಾರೆ.ತಾಲೂಕಿನ ಅಗಡಿ ಗ್ರಾಮದ ಬಳಿ ಇರುವ ಹಳ್ಳ ತುಂಬಿ ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದಾಗಿ ಹಾವೇರಿ- ಹೊಸಪೇಟೆ (ಶಿರಸಿ- ಮೊಳಕಾಲ್ಮೂರ ರಾಜ್ಯ ಹೆದ್ದಾರಿ) ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ಸುಮಾರು ೬-೭ಗಂಟೆ ವಾಹನಗಳು ಓಡಾದಂತಹ ಸ್ಥಿತಿ ನಿರ್ಮಾಣವಾಗಿತ್ತು. ಅದೇ ರೀತಿ ಕಳ್ಳಿಹಾಳ, ಕಾಟೇನಹಳ್ಳಿ, ಕನವಳ್ಳಿ ಸೇರಿದಂತೆ ಈ ಭಾಗದ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳು ಅಲ್ಲಲ್ಲಿತುಂಬಿ ಹರಿಯುತ್ತಿವೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಮತ್ತು ತುರ್ತು ಕ್ರಮಕ್ಕೆ ಮುಂದಾಗಬೇಕಿದೆ.
ನಗರದ ಹಾನಗಲ್ಲ ರಸ್ತೆಯಲ್ಲಿ ಸುಮಾರು ಒಂದು ಕಿಮೀವರೆಗೂ ನೀರು ಹರಿದು ಅನೇಕ ವಾಹನಗಳು ಮಧ್ಯದಲ್ಲಿಯೇ ಸಿಕ್ಕಿಹಾಕಿಕೊಂಡು ತೊಂದರೆ ಅನುಭವಿಸುವಂತಾಯಿತು.ಬ್ಯಾಡಗಿ ಪಟ್ಟಣದಲ್ಲೂ ಭಾರಿ ಮಳೆಯಿಂದ ಅನಾಹುತ ಸೃಷ್ಟಿಯಾಗಿದೆ. ಸುಭಾಸ ಪ್ಲಾಟ್ ಸಂಪೂರ್ಣವಾಗಿ ಜಲಾವೃತಗೊಂಡು ನೂರಾರು ಕುಟುಂಬಗಳ ಜನರು ರಾತ್ರಿಯಿಡಿ ನಿದ್ದೆಯಿಲ್ಲದೇ ಕಳೆದರು. ರಾಣಿಬೆನ್ನೂರು ತಾಲೂಕಿನಲ್ಲೂ ಭರ್ಜರಿ ಮಳೆಯಾಗಿದೆ. ಶಿಗ್ಗಾಂವಿ ತಾಲೂಕು ಹಿರೇಮಲ್ಲೂರು ಗ್ರಾಮದಲ್ಲಿ ಹಳ್ಳದಲ್ಲಿ ಆಕಳೊಂದು ತೇಲಿ ಹೋಗಿದೆ. ಹಾನಗಲ್ಲ, ಸವಣೂರು, ಹಿರೇಕೆರೂರು ಸೇರಿದಂತೆ ಜಿಲ್ಲಾದ್ಯಂತ ಮಳೆಯಬ್ಬರಕ್ಕೆ ಜನಜೀವನ ತತ್ತರಿಸಿದೆ. ಕಟಾವಿಗೆ ಬಂದಿದ್ದ ಬೆಳೆ ನೀರು ಪಾಲಾಗಿದೆ. ಒಣಗಲು ಹಾಕಿದ್ದ ಮೆಕ್ಕೆಜೋಳ ತೇಲಿಹೋಗಿದೆ. ಶನಿವಾರ ಕೂಡ ಕೆಲವು ಕಡೆ ಮಳೆಯಾಗಿದೆ.