ಸಾರಾಂಶ
ಕಾಳಮ್ಮ, ಚಿಕ್ಕಮ್ಮ ದೇವಿಯರ ದೇವಾಲಯ ಪ್ರವೇಶ । ನೂತನ ವಿಗ್ರಹ ಪ್ರತಿಷ್ಠಾಪನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಪ್ರಪಂಚದಲ್ಲಿಯೇ ಧರ್ಮದ ಆಧಾರದಲ್ಲಿ ಭಾರತ ಧಾರ್ಮಿಕವಾಗಿ ನೆಲೆ ಹೊಂದಿದ್ದು, ದೇಶ ಮತ್ತು ಧರ್ಮ ಇದ್ದರೆ ಮಾತ್ರ ನೆಮ್ಮದಿ ಬದುಕಿಗೆ ನಾಂದಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಸಮೀಪದ ಬೀಕನಹಳ್ಳಿಯಲ್ಲಿ ಶ್ರೀ ಕಾಳಮ್ಮ ಮತ್ತು ಶ್ರೀ ಚಿಕ್ಕಮ್ಮ ದೇವಿಯರ ನೂತನ ದೇವಾಲಯ ಪ್ರವೇಶೋತ್ಸವ ನೂತನ ವಿಗ್ರಹ ಪ್ರತಿಷ್ಠಾಪನೆ, ಕುಂಭಾಭಿಷೇಕ, ಕಳಸಾರೋಹಣ ಧಾರ್ಮಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸರ್ಕಾರ ನೀಡುವ ಅನುದಾನದ ಜೊತೆಗೆ ಗ್ರಾಮಸ್ಥರು ಒಟ್ಟಾಗಿ ಸೇರಿ ಹಣ ಸಂಗ್ರಹಿಸಿ ದೇವಾಲಯ ನಿರ್ಮಾಣ ಮಾಡಿರುವುದು ಹೆಮ್ಮೆಯ ವಿಚಾರ ಎಂದ ಅವರು, ಹಿಂದೆ ಬ್ರಿಟಿಷರು, ಘಜ್ನಿ ಮಹಮದ್ ದಾಳಿ ಮಾಡಿದ್ದರೂ ಭಾರತದಲ್ಲಿ ಧರ್ಮ ಮತ್ತು ಸಂಸ್ಕಾರ ಉಳಿದಿದೆ ಎಂದು ಹೇಳಿದರು.
ದೇಶದಲ್ಲಿ ಧರ್ಮ, ಸಂಸ್ಕೃತಿ ನಾಶವಾಗದೇ ಇರುವುದಕ್ಕೆ ಕಾರಣ ಮುಕ್ಕೋಟಿ ದೇವರ ಆಶೀರ್ವಾದದ ಫಲ. ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಸುಮಾರು 25 ಜನ ಪ್ರವಾಸಿಗರು ಹತ್ಯೆಯಾಗಿರುವುದನ್ನು ಖಂಡಿಸಿದ ಅವರು, ತಿರಂಗಯಾತ್ರೆ ನಡೆಸುವ ಮೂಲಕ ಸೇನೆಗೆ ಬಲ-ಬೆಂಬಲ ತುಂಬುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಶ್ಲಾಘಿಸಿದರು.ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಈ ದೇವತೆಗಳ ಕೃಪೆಯಿಂದ ಸರ್ವ ಗ್ರಾಮಸ್ಥರ ಬದುಕು ಸಕಾರಾತ್ಮಕವಾಗಲಿ, ಜಾತಿ, ಬೇಧಭಾವ ಇಲ್ಲದೆ ನಮ್ಮನ್ನೆಲ್ಲ ದೇವರು ಸೃಷ್ಟಿಮಾಡಿದ್ದಾರೆ ಎಂಬ ಭಾವನೆ ಬೆಳೆಯಲಿ ಎಂದು ಹೇಳಿದರು.
ಮೇಲು-ಕೀಳು ದೇವರು ಮಾಡಿಲ್ಲ, ದೇವರ ಹೆಸರಿನಲ್ಲಿ ಇವುಗಳನ್ನು ಮಾಡಬಾರದು. ಸ್ವಾಮಿ ವಿವೇಕಾನಂದರು ವೇದಗಳಿಗೆ ಹಿಂದುರುಗಿ ಎಂದು ಹೇಳಿದಂತೆ ವೇದಗಳಲ್ಲಿ ಜಾತಿ, ಮತ, ಅಸ್ಪೃಷ್ಯತೆ ಇರುವುದಿಲ್ಲ. ಬದಲಾಗಿ ಎಲ್ಲರನ್ನೂ ಭಗವತ್ ಸ್ವರೂಪಿಯಾಗಿ ನೋಡುವ ದೃಷ್ಟಿ ಇದೆ ಎಂದು ತಿಳಿಸಿದರು.ಪ್ರಾಸ್ತಾವಿಕವಾಗಿ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ ಮಂಜೇಗೌಡ ಮಾತನಾಡಿ, ಈ ದೇವಾಲಯಗಳಿಗೆ ಶಾಸಕರ ಅನುದಾನದಲ್ಲಿ 10 ಲಕ್ಷ ರು. ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ 6 ಲಕ್ಷ ರು. ಅನುದಾನವನ್ನು ಶಾಸಕರು ನೀಡಿದ್ದಾರೆ. ಬಡವರ ದೀನ-ದಲಿತರ ಕಷ್ಟಕಾರ್ಪಣ್ಯಗಳಿಗೆ ಶಾಸಕ ಎಚ್.ಡಿ.ತಮ್ಮಯ್ಯ ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆಂದು ತಿಳಿಸಿದರು.ಜಿ.ಪಂ ಮಾಜಿ ಉಪಾಧ್ಯಕ್ಷ ಬಿ.ಜಿ.ಸೋಮಶೇಖರ್, ಮರುಳ ಸಿದ್ದೇಶ್ವರ ಹಾರ್ಡ್‌ವೇರ್‌ನ ಬಿ.ಎನ್.ರಾಜಶೇಖರ್, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟೇಶ್, ತಾಪಂ ಮಾಜಿ ಅಧ್ಯಕ್ಷ ಪುಟ್ಟೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಪಿ.ರಾಜೀವ್, ಗ್ರಾ.ಪಂ ಅಧ್ಯಕ್ಷೆ ಮಂಜುಳ ಶಿವಣ್ಣ, ಸದಸ್ಯರಾದ ಬಿ.ಎಂ.ಯೋಗೀಶ್, ಬಿ.ವಿ. ವಿಜಯಕುಮಾರ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್ ಇದ್ದರು.
ದೇವಾಲಯಗಳ ಪ್ರಾರಂಭೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ಸಾರ್ವಜನಿಕ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.