ಇಂದಿನಿಂದ ಗೋಕರ್ಣದಲ್ಲಿ ಹವ್ಯಕ ಮಹಾಮಂಡಲೋತ್ಸವ

| Published : Nov 16 2024, 12:30 AM IST

ಸಾರಾಂಶ

ರಾಘವೇಶ್ವರ ಭಾರತೀ ಸ್ವಾಮೀಜಿ ನ. ೧೬ರಂದು ಮಧ್ಯಾಹ್ನ ವಿದ್ಯಾನಂದ ಆವರಣದಲ್ಲಿ ಹವ್ಯಕ ಆಹಾರೋತ್ಸವ ಉದ್ಘಾಟಿಸುವ ಮೂಲಕ ಮಹಾಮಂಡಲೋತ್ಸವಕ್ಕೆ ಚಾಲನೆ ನೀಡುವರು.

ಗೋಕರ್ಣ: ಹವ್ಯಕ ಸಂಸ್ಕೃತಿ- ಸಂಪ್ರದಾಯ, ಆಹಾರ- ವಿಹಾರ, ಆಚಾರ- ವಿಚಾರಗಳನ್ನು ಬಿಂಬಿಸುವ ಶ್ರೀರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲೋತ್ಸವ ನ. ೧೬ರಿಂದ ೧೮ರ ವರೆಗೆ ಅಶೋಕೆ ಪರಿಸರದಲ್ಲಿ ನಡೆಯಲಿದೆ.

ಮಹಾಮಂಡಲ ವ್ಯಾಪ್ತಿಯ ಎಲ್ಲ ೧೧ ಮಂಡಲಗಳಿಂದ ಆಗಮಿಸುವ ಐದು ಸಾವಿರಕ್ಕೂ ಹೆಚ್ಚು ಶಿಷ್ಯಭಕ್ತರು, ಯುವಕರು, ವಿದ್ಯಾರ್ಥಿಗಳು ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಇದರ ಅಂಗವಾಗಿ ಮೂರು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳು ಆಯೋಜನೆಗೊಂಡಿವೆ ಎಂದು ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮತ್ತು ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು ಪ್ರಕಟಣೆಯಲ್ಲಿ ಹೇಳಿದ್ದಾರೆ.ರಾಘವೇಶ್ವರ ಭಾರತೀ ಸ್ವಾಮೀಜಿ ನ. ೧೬ರಂದು ಮಧ್ಯಾಹ್ನ ವಿದ್ಯಾನಂದ ಆವರಣದಲ್ಲಿ ಹವ್ಯಕ ಆಹಾರೋತ್ಸವ ಉದ್ಘಾಟಿಸುವ ಮೂಲಕ ಮಹಾಮಂಡಲೋತ್ಸವಕ್ಕೆ ಚಾಲನೆ ನೀಡುವರು. ಆಯಾ ಪ್ರಾಂತ್ಯಗಳ ವಿಶೇಷ ತಿಂಡಿ ತಿನಸುಗಳು, ಖಾದ್ಯಗಳು, ಹವ್ಯಕರ ಆಹಾರ ಪದ್ಧತಿಯನ್ನು ಸಮಾಜಕ್ಕೆ ಬಿಂಬಿಸುವುದು ಆಹಾರೋತ್ಸವದ ಉದ್ದೇಶ. ಜತೆಗೆ ನ. ೧೬ರಂದು ಸಂಜೆಯಿಂದ ಸಂಧ್ಯಾರಾಗ ಮತ್ತು ಉದಯರಾಗ ಪರಿಕಲ್ಪನೆಯಡಿ ಸಂಗೀತೋತ್ಸವ ಮೂರು ದಿನಗಳ ಕಾಲ ನಡೆಯಲಿದೆ. ಕರ್ನಾಟಕ ಹಾಗೂ ಹಿಂದೂಸ್ತಾನಿ ಹೀಗೆ ಎರಡೂ ಪ್ರಕಾರಗಳಿಗೆ ಸೇರಿದ ನಾಡಿನ ಉದಯೋನ್ಮುಖ ಕಲಾವಿದರು ಕಛೇರಿ ನೀಡುವರು.ವಲಯ ಮತ್ತು ಮಂಡಲ ಮಟ್ಟದಲ್ಲಿ ನಡೆದ ವಿವಿಧ ಬೌದ್ಧಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ೧೨೫೦ಕ್ಕೂ ಹೆಚ್ಚು ಮಂದಿ ಸ್ಪರ್ಧಾಳುಗಳು ಮಹಾಮಂಡಲ ಮಟ್ಟದ ಸ್ಪರ್ಧೆಗಾಗಿ ಆಗಮಿಸುವರು. ಸುಮಾರು ೪೩ ಕ್ರೀಡಾ/ ಬೌದ್ಧಿಕ ಸ್ಪರ್ಧೆಗಳು ೧೭ ಮತ್ತು ೧೮ರಂದು ನಡೆಯಲಿವೆ.

ಈಗಾಗಲೇ ವಲಯ ಹಾಗೂ ಮಂಡಲ ಮಟ್ಟದ ಸ್ಪರ್ಧೆಗಳಲ್ಲಿ ಸುಮಾರು ೧೫ ಸಾವಿರ ಮಂದಿ ಪಾಲ್ಗೊಂಡಿದ್ದು, ಅಲ್ಲಿ ವಿಜೇತರಾದವರು ಮಹಾಮಂಡಲ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದಾರೆ.ಉದಯೋನ್ಮುಖ ಕಲಾವಿದರಿಂದ ಶಿಲ್ಪಕಲೋತ್ಸವ ಈ ಬಾರಿಯ ಮಹಾಮಂಡಲೋತ್ಸವದ ಮತ್ತೊಂದು ವಿಶೇಷ. ಪುರಾಣದ ಯುವ ಸಾಧಕರ ಶಿಲಾಶಿಲ್ಪಗಳನ್ನು ಪ್ರತಿಭಾವಂತ ಕಲಾವಿದರು ಇಲ್ಲೇ ನಿರ್ಮಿಸಿ, ಜೀವಕಳೆ ತುಂಬಿ ವಿವಿವಿಗೆ ಕೊಡುಗೆಯಾಗಿ ನೀಡಲಿದ್ದಾರೆ. ಅಂತೆಯೇ ಭಾವ ರಾಮಾಯಣದ ಆಯ್ದ ಸನ್ನಿವೇಶಗಳ ಚಿತ್ರಣ, ಯುವ ಸಾಧಕರ ಜೀವನ ಸಾಧನೆಯನ್ನು ಬಿಂಬಿಸುವ ಅಪೂರ್ವ ಚಿತ್ರಕಲೋತ್ಸವ ಕೂಡಾ ಸೇರಿದೆ.ಯಕ್ಷೋತ್ಸವ, ನಾಟಕೋತ್ಸವ, ಎರಡು ದಿನಗಳ ಕಾಲ ಅಖಂಡ ಭಜನೋತ್ಸವ, ಚಿಣ್ಣರ ಉತ್ಸವಗಳು ವಿಶೇಷ ಮೆರುಗು ನೀಡಲಿವೆ. ಒಂದು ವರ್ಷದ ಒಳಗಿನ ಮಕ್ಕಳಿಗಾಗಿ ಆರೋಗ್ಯವಂತ ಶಿಶು ಸ್ಪರ್ಧೆ, ಮೂರು ವರ್ಷದ ಮಕ್ಕಳೊಂದಿಗೆ ತಾಯಂದಿರು ಸೆಲ್ಫಿ ಕ್ಲಿಕ್ಕಿಸುವ ಸ್ಪರ್ಧೆ, ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿ ಸ್ಪರ್ಧೆ ಹೀಗೆ ಹಲವು ಸ್ಪರ್ಧೆಗಳೂ ಆಯೋಜನೆಗೊಂಡಿವೆ. ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ ೨೦ಕ್ಕೂ ಹೆಚ್ಚು ಭಜನಾ ತಂಡಗಳು ಅಖಂಡವಾಗಿ ಕಾರ್ಯಕ್ರಮ ನಡೆಸಿಕೊಡುವರು.೧೮ರಂದು ಮಧ್ಯಾಹ್ನ ಮಹಾಮಂಡಲೋತ್ಸವ ಸಭಾ ಕಾರ್ಯಕ್ರಮದ ಸಾನ್ನಿಧ್ಯವನ್ನು ರಾಘವೇಶ್ವರಭಾರತೀ ಸ್ವಾಮೀಜಿ ಮತ್ತು ಶಕಟಪುರದ ಕೃಷ್ಣಾನಂದತೀರ್ಥ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಉಭಯ ಶ್ರೀಗಳ ಆಶೀರ್ವಚನ, ಪ್ರಶಸ್ತಿ ವಿತರಣೆ, ಸಮಾರೋಪ ಸಮಾರಂಭದಲ್ಲಿ ಇರುತ್ತದೆ ಎಂದು ಪ್ರಕಟಣೆ ಹೇಳಿದೆ.ವಿದ್ಯಾರ್ಥಿ ಹಾಗೂ ಯುವ ವಿಭಾಗದ ಮುಖ್ಯಸ್ಥರಾದ ಈಶ್ವರ ಪ್ರಸಾದ್ ಕನ್ಯಾನ, ಕೇಶವ ಪ್ರಕಾಶ್ ಮುಣ್ಚಿಕಾನ ಹಾಗೂ ಮಹಾಮಂಡಲ ಪದಾಧಿಕಾರಿಗಳ ನೇತೃತ್ವದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಎಲ್ಲ ಉತ್ಸವಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ ೫ರಿಂದ ರಾತ್ರಿ ೧೦.೩೦ರ ವರೆಗೆ ಇದ್ದು, ಆಹಾರೋತ್ಸವ ೧೬ರಂದು ಮಧ್ಯಾಹ್ನದಿಂದ ೧೮ರ ಸಂಜೆಯ ವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ.