ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಅಪಾರ. ಅದರಲ್ಲೂ ಶಿರಸಿ ಕಲಾ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯುತ್ತಿದ್ದು, ಹವ್ಯಕ ಸಮಾಜದವರಲ್ಲಿರುವ ಕಲಾಸಕ್ತಿಯೂ ಇದಕ್ಕೆ ಪ್ರಮುಖ ಕಾರಣವಾಗಿದೆ.
ಹುಬ್ಬಳ್ಳಿ:
ಹವ್ಯಕ ಸಮಾಜವು ಕಲೆ, ಸಂಸ್ಕೃತಿ ಹಾಗೂ ಪರಂಪರೆಗೆ ಗೌರವ ನೀಡುವುದರ ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಆಪ್ತ ಕಾರ್ಯದರ್ಶಿ ಮುರಳೀಧರ ಮಳಗಿ ಹೇಳಿದರು.ಇಲ್ಲಿನ ವಿಕಾಸ ನಗರದ ಹವ್ಯಕ ಭವನದಲ್ಲಿ ಸ್ವರ ಸಂವೇದನಾ ಪ್ರತಿಷ್ಠಾನ ಹಾಗೂ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಶನಿವಾರ ಆಯೋಜಿಸಿದ್ದ "ನಾದ ಸಿಂಚನ " ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಅಪಾರ. ಅದರಲ್ಲೂ ಶಿರಸಿ ಕಲಾ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯುತ್ತಿದ್ದು, ಹವ್ಯಕ ಸಮಾಜದವರಲ್ಲಿರುವ ಕಲಾಸಕ್ತಿಯೂ ಇದಕ್ಕೆ ಪ್ರಮುಖ ಕಾರಣವಾಗಿದೆ. ಹವ್ಯಕರು ಕೇವಲ ಕಲೆಯ ಪ್ರೇಕ್ಷಕರಲ್ಲ ಕಲೆ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಜೀವನವನ್ನೇ ಒಂದು ಕಲೆಯನ್ನಾಗಿಸಿಕೊಂಡಿರುವ ಹವ್ಯಕರ ರಕ್ತದಲ್ಲೇ ಸಂಸ್ಕಾರವಿದೆ. ಇಂತಹ ವಿನೂತನ ಕಲಾ ಕಾರ್ಯಕ್ರಮಗಳಿಗೆ ತಮ್ಮ ನೆರವು ಸದಾ ಇರಲಿದೆ ಎಂದರು.ಸ್ವರ ಸಂವೇದನಾ ಪ್ರತಿಷ್ಠಾನದ ಮುಖ್ಯಸ್ಥ ರಾಜಾರಾಮ ಹೆಗಡೆ ಮಾತನಾಡಿ, 2018ರಲ್ಲಿ ಸ್ಥಾಪನೆಯಾದ ಪ್ರತಿಷ್ಠಾನವು ಶಾಸ್ತ್ರೀಯ ಸಂಗೀತವನ್ನು ಜನಸಾಮಾನ್ಯರಿಗೆ ತಲುಪಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಕುಗ್ರಾಮಗಳಲ್ಲೂ ಶಾಸ್ತ್ರೀಯ ಸಂಗೀತದ ಅಭಿರುಚಿ ಬೆಳೆಸುವ ಉದ್ದೇಶದಿಂದ ಸ್ಥಳೀಯ ದೇವಸ್ಥಾನಗಳಲ್ಲಿ ‘ನಾದಪೂಜೆ’ ಸೇರಿದಂತೆ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ‘ನಾದ ನಮನ’ ಹಾಗೂ ‘ನಾದ ಸಿರಿ’ ಕಾರ್ಯಕ್ರಮಗಳ ಮೂಲಕ ಸ್ಥಳೀಯ ಕಲಾವಿದರಿಗೆ ನಿರಂತರವಾಗಿ ವೇದಿಕೆ ಕಲ್ಪಿಸಲಾಗುತ್ತಿದೆ ಎಂದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಒಡಿಶಾದ ಆರ್ಯಾ ನಾಂದೆ ಅವರು ಒಡಿಸ್ಸಿ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರ ಗಮನ ಸೆಳೆದರು. ಬಳಿಕ ಬೆಂಗಳೂರಿನ ವಿದುಷಿ ಪಲ್ಲವಿ ಜಿ. ಗಾಯತ್ರಿ ಅವರು ಭರತನಾಟ್ಯ ಪ್ರದರ್ಶಿಸಿದರು. ಆರಾಧನಾ ಹೆಗಡೆ ಸಂಗೀತ ಪ್ರಸ್ತುತಪಡಿಸಿದರು. ಗುರುರಾಜ ಹೆಗಡೆ ತಬಲಾ ಹಾಗೂ ಅಜಯ ಹೆಗಡೆ ಹಾರ್ಮೋನಿಯಂನಲ್ಲಿ ಸಾಥ್ ನೀಡಿದರು.ಅಡ್ವಾನ್ಸ್ ಡೈ ಕಾಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಶಿವರಾಮ ಹೆಗಡೆ ಹಿತ್ಲಳ್ಳಿ, ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ವಿ.ಎಂ. ಭಟ್, ಸ್ವರ ಸಂವೇದನಾ ಪ್ರತಿಷ್ಠಾನದ ಗೌರವಾಧ್ಯಕ್ಷ ಎಂ.ಕೆ. ಹೆಗಡೆ, ಗುರುಪ್ರಸಾದ ಹೆಗಡೆ, ಅರುಣಕುಮಾರ ಹಬ್ಬು ಸೇರಿದಂತೆ ಹಲವರಿದ್ದರು.